ಹುಬ್ಬಳ್ಳಿ:
ನಗರದ ಹೆಸ್ಕಾಂ ಸಭಾಂಗಣದಲ್ಲಿ ಗುರುವಾರ ನಡೆದ ಹೆಸ್ಕಾಂನ 2024-25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನಾ(ಎಪಿಆರ್)ಅರ್ಜಿ ಕುರಿತ ಸಾರ್ವಜನಿಕ ವಿಚಾರಣೆಯಲ್ಲಿ ಮಾತನಾಡಿದ ಅವರು, ಈ ವಿಷಯ ಸ್ಪಷ್ಟಪಡಿಸಿದರು.
ಇದೇ ಸಭೆಯಲ್ಲಿ ಹೆಸ್ಕಾಂ ಕಾರ್ಯಕ್ಷಮತೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಅಲ್ಲದೇ, ಕಂಪನಿ ನೀಡುವ ಅಂಕಿ ಸಂಖ್ಯೆಗಳನ್ನು ಒಪ್ಪಿಕೊಳ್ಳಬಾರದು. ತಟಸ್ಥ ಕಂಪನಿ ಇಲ್ಲವೇ ಫಾರೆನ್‌ಸಿಕ್ ವತಿಯಿಂದ ಪರಿಶೀಲಿಸಿ ವರದಿ ಪಡೆದುಕೊಳ್ಳಬೇಕೆಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ)ಕ್ಕೆ ಮನವಿ ಮಾಡಿದರು.ಸಭೆಯಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಹೆಸ್ಕಾಂ ಶಾಕ್ ನೀಡಲಿದೆ ಎಂಬ ಬಗ್ಗೆ ಆತಂಕ ಇತ್ತು. ಹೀಗಾಗಿ ಸಭೆಯಲ್ಲಿ ಮಾತನಾಡಿದ ರವಿಕುಮಾರ ಅವರು, ಈ ವರ್ಷ ಯಾವುದೇ ರೀತಿ ದರ ಪರಿಷ್ಕರಣೆ ಪ್ರಸ್ತಾಪಗಳೇ ಇಲ್ಲ. ಈಗಾಗಲೇ 2025-2028ರ ಮೂರು ವರ್ಷಗಳ ಅವಧಿಗೆ ವಿದ್ಯುತ್ ದರ ಪರಿಷ್ಕರಣೆ ನಡೆದಿದೆ. ಈ ವರ್ಷ ಯಾವುದೇ ರೀತಿ ದರ ಏರಿಕೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿರಸಿ ಗಣೇಶ ಹೆಗಡೆ ಕಡೆಕೋಡಿ ಮಾತನಾಡಿ, ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕವನ್ನು ಹೆಸ್ಕಾಂ ಈಗಾಗಲೇ ಬಿಲ್‌ನಲ್ಲಿಯೇ ನಮೂದಿಸಿ ಗ್ರಾಹಕರಿಂದ ವಸೂಲಿ ಮಾಡುತ್ತಿದೆ. ಆದರೂ ಟ್ರೂ ಅಪ್ ಅಡಿಯಲ್ಲಿ ₹ 71.11 ಕೋಟಿ ಪಡೆಯಲು ಪ್ರಸ್ತಾವನೆ ಸಲ್ಲಿಸಿದೆ. ಇದನ್ನು ಕೆಇಆರ್‌ಸಿ ಮಾನ್ಯ ಮಾಡಬಾರದು ಎಂದು ಅವರು ಒತ್ತಾಯಿಸಿದರು.
ಒಂದೇ ಸಾಫ್ಟ್‌ವೇರ್ ಮಾಡಿ:
ಹಣಕಾಸು ವಿಚಾರವಾಗಿ ಅನುಮೋದನೆ ನೀಡುವಾಗ ಹೆಸ್ಕಾಂ ಬಗ್ಗೆ ಕೆಇಆರ್‌ಸಿ ಮೃಧುಧೋರಣೆ ತಳೆಯಬಾರದು ಎಂದು ಕೋರಿದರು. ಅಲ್ಲದೇ, ಕೆಲವು ಹಗರಣದಲ್ಲಿ ಹೆಸ್ಕಾಂ ಜಾಣ ಕುರುಡನಂತೆ ವರ್ತಿಸುತ್ತಿದೆ. ವಿಧಾನ ಮಂಡಳದ ಲೆಕ್ಕಪರಿಶೋಧನೆ ಸಮಿತಿಯು ಶಿಫಾರಸು ಮಾಡಿದರೂ ಹಗರಣದ ಹಣವನ್ನು ವಸೂಲಿ ಮಾಡಲು ಮುಂದಾಗುತ್ತಿಲ್ಲ ಎಂದು ಪೈ ಹೇಳಿದರು.
ಸಭೆಯಲ್ಲಿದ್ದ ಕೆಲ ರೈತರು ಮಾತನಾಡಿ, ಟಿಸಿ ಸುಟ್ಟರೆ ದುರಸ್ತಿಗೆ ಹೆಸ್ಕಾಂನವರು ಹಿಂದೇಟು ಹಾಕುತ್ತಾರೆ. ಅವರು ಕಂಪನಿ ಜವಾಬ್ದಾರಿಯನ್ನೇ ಮರೆತಿದ್ದಾರೆ. ರಸ್ತೆ ಬದಿ ಸಾಕಷ್ಟು ಅನಧಿಕೃತ ವಿದ್ಯುತ್ ಕಂಬಗಳಿವೆ. ಗುತ್ತಿಗೆದಾರರನ್ನು ಕೇಳಿದರೆ, ಅವರು ಹೆಸ್ಕಾಂ ಮೇಲೆ ಹಾಕುತ್ತಿದ್ದಾರೆ. ನಾವು ಯಾರಿಗೆ ಕೇಳಬೇಕು. ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಬೇಕು. ಮುಷ್ಕರಕ್ಕೆ ದಾರಿ ಮಾಡಿಕೊಡಬೇಡಿ ಎಂದು ರೈತರ ಹೇಳಿದರು.
ಒಂದೇ ತಂತ್ರಾಂಶ ಬಳಕೆಗೆ ಸೂಚನೆರಾಜ್ಯದ ಆಯಾ ಎಸ್ಕಾಂಗಳಲ್ಲಿ ಆಡಳಿತ ಮತ್ತು ಸೇವಾ ವಿಭಾಗಕ್ಕೆ ಒಂದೇ ರೀತಿಯ ತಂತ್ರಾಂಶ ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಕೆಇಆರ್‌ಸಿ ಅಧ್ಯಕ್ಷ ರವಿಕುಮಾರ ಹೇಳಿದರು. ಗ್ರಾಹಕರ ಅರ್ಜಿ ವಿಚಾರಣೆಯಲ್ಲಿ ಮಾತನಾಡಿದ ಅವರು, ಸಬ್ಸಿಡಿ ಮೊತ್ತ ಮನ್ನಾ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಇಆರ್‌ಸಿ ಅನುಮೋದಿತ ವೆಚ್ಚಗಳನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಬೇಕು. ಈ ವೆಚ್ಚವನ್ನು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ವರ್ಗಾಯಿಸಬಾರದು ಎಂದು ತಾಕೀತು ಮಾಡಿದರು.
ಗ್ರಾಹಕರಿಂದ ವಿದ್ಯುತ್ ಬೇಡಿಕೆ ಹೆಚ್ಚಳದ ಕಾರಣವಾಗಿ ವಿದ್ಯುತ್ ಖರೀದಿ ಹೆಚ್ಚಿದ್ದು, 2024-2025ರ ಅವಧಿಯಲ್ಲಿ ಹೆಸ್ಕಾಂಗೆ ಅನುಮೋದಿತ ವೆಚ್ಚಕ್ಕಿಂತ ₹ 180 ಕೋಟಿ ಹೆಚ್ಚಾಗಿದೆ ಎಂದು ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್. ಸ್ಪಷ್ಟಪಡಿಸಿದರು. ಕೆಇಆರ್‌ಸಿ ಅನುಮೋದಿತ ವೆಚ್ಚ ಮತ್ತು ವಾಸ್ತವಿಕ ವೆಚ್ಚದ ನಡುವೆ ವ್ಯತ್ಯಾಸ ಉಂಟಾಗಿದೆ. ಹೆಸ್ಕಾಂಗೆ 2024-25ರ ಅವಧಿಯಲ್ಲಿ ₹ 11,335.60 ಕೋಟಿ ಅನುಮೋದಿತ ವೆಚ್ಚ ನಿಗದಿಯಾಗಿತ್ತು. ಈ ಅವಧಿಯಲ್ಲಿ ವಿದ್ಯುತ್ ಖರೀದಿಗೆ ₹ 9505 ಕೋಟಿ, ಕಾರ್ಯ ಮತ್ತು ಪಾಲನೆಗೆ ₹ 1923 ಕೋಟಿ, ಸವಕಳಿ ವೆಚ್ಚ ₹ 549.84 ಕೋಟಿ, ಬಡ್ಡಿ ಹಾಗೂ ಆರ್ಥಿಕ ವೆಚ್ಚಗಳು ₹ 686.39 ಕೋಟಿ ಸೇರಿದಂತೆ ವಿವಿಧ ರೀತಿಯಲ್ಲಿ ಒಟ್ಟು ₹ 12919 ಕೋಟಿ ವೆಚ್ಚವಾಗಿದೆ. ಮುಖ್ಯವಾಗಿ ಗೃಹ ಬಳಕೆಗೆ 330 ಮಿಲಿಯನ್ ಯೂನಿಟ್ ಮತ್ತು ನೀರಾವರಿ ಪಂಪ್‌ಸೆಟ್‌ಗಳಿಗೆ 443 ಮಿಲಿಯನ್ ಯೂನಿಟ್ ಹೆಚ್ಚುವರಿ ವಿದ್ಯುತ್ ಬೇಡಿಕೆ ಇದ್ದುದ್ದರಿಂದ ಅದನ್ನು ಖರೀದಿಸಲಾಗಿದೆ. ಇದರಿಂದ ₹ 180 ಕೋಟಿ ಹೆಚ್ಚುವರಿ ವೆಚ್ಚವಾಗಿದೆ ಎಂದು ಸಮರ್ಥಿಸಿಕೊಂಡರು.