ಶಿರಸಿ:
ಬನವಾಸಿ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕೆಂದು ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.ಅವರು ಶನಿವಾರ ತಾಲೂಕಿನ ಬನವಾಸಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ೨೦೨೧-೨೨ನೇ ಸಾಲಿನ ಜಲಜೀವನ ಮಿಷನ್ ಯೋಜನೆಯ ಮೂಲಕ ₹ ೬.೯೬ ಕೋಟಿ ವೆಚ್ಚದಲ್ಲಿ ಮಂಜೂರಾದ ಬನವಾಸಿ ಗ್ರಾಪಂ ಬಹುಗ್ರಾಮ ಕುಡಿಯುವ ನೀರಿನ ವರ್ಧನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಮಾತನಾಡಿದರು.ಶಾಶ್ವತ ನೀರಿನ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರೈತರು ದೇಶದ ಬೆನ್ನೆಲುಬು. ಕೃಷಿ ಜಮೀನಿಗೆ ನೀರು ಪೂರೈಕೆಯಾದರೆ ರೈತರು ಸಮೃದ್ಧಿಯಿಂದ ಇರುತ್ತಾರೆ. ಶಾಶ್ವತ ಕುಡಿಯುವ ನೀರು ಪೂರೈಕೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬಾಂದಾರ್ ನಿರ್ಮಿಸಿ ರೈತರ ಗದ್ದೆಗಳಿಗೆ ನೀರು ನೀಡಲಾಗುತ್ತಿದೆ. ಹಳೆ ಯೋಜನೆಯ ಜತೆ ಹೊಸ ಯೋಜನೆ ಸೇರಿಸಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ ಎಂದರು.ಯೋಜನೆಯನ್ನು ₹ ೫.೯೬ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ೧೦ ಎಚ್‌ಪಿ ೨ ಪಂಪ್‌ಸೆಟ್, ೩ ಎಚ್‌ಪಿ ೨ ಪಂಪ್‌ಸೆಟ್, ೭೨೨೦ ಮೀಟರ್ ಪೈಪ್‌ಲೈನ್ ಅಳವಡಿಸಲಾಗುತ್ತದೆ. ೧೦ ಸಾವಿರ ಲೀಟರ್, ೨೦ ಸಾವಿರ ಲೀಟರ್, ೧೦ ಸಾವಿರ ಲೀಟರ್ ಹಾಗೂ ೫ ಸಾವಿರದ ೨ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತದೆ. ಒಟ್ಟಾರೆ ಜನರಿಗೆ ಕುಡಿಯುವ ನೀರು ಪೂರೈಕೆಯಾಗಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ ಎಂದರು.ಇದೇ ವೇಳೆ ವಿಐಎನ್‌ಪಿ ಇನ್ಫ್ರಾ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್‌ನ ₹ ೨೦ ಲಕ್ಷ ಹಾಗೂ ಸಿಎಸ್‌ಆರ್ ಅನುದಾನದಲ್ಲಿ ನಾಗಶ್ರೀ ಪ್ರೌಢಶಾಲೆಯ ನೂತನ ೨ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬನವಾಸಿಯಲ್ಲಿ ಕುಡಿಯುವ ನೀರಿನ ಜಾಕ್‌ವೆಲ್ ಉದ್ಘಾಟಿಸಿ, ಬಾಶಿಯ ಸರ್ಕಾರಿ ಪ್ರೌಢಶಾಲೆಯ ಕೊಠಡಿ ಲೋಕಾರ್ಪಣೆಗೊಳಿಸಿ, ಬಾಂದಾರು ಸಮೇತ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.ಈ ವೇಳೆ ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ, ಉಪಾಧ್ಯಕ್ಷ ಸಿದ್ದು ನರೇಗಲ್, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ವಿರಭದ್ರ ನಾಯ್ಕ, ಗಣಪತಿ ನಾಯ್ಕ, ಗಜಾನನ ನಾಯ್ಕ, ದತ್ತು ನಾಯ್ಕ ಇದ್ದರು.ಬನವಾಸಿ ಭಾಗದ ಜನರು ನೀರು ಬಿಟ್ಟು ಮತ್ತೆನನ್ನೂ ಕೇಳುವುದಿಲ್ಲ. ನೀರು ನೀಡಿದರೆ ಸಮೃದ್ಧ ಬೆಳೆ ಬೆಳೆದು ಆರ್ಥಿಕವಾಗಿಯೂ ಸಬಲರಾಗುತ್ತಾರೆ. ಆದ್ದರಿಂದ ಕ್ಷೇತ್ರದಾದ್ಯಂತ ನೀರಾವರಿ ಯೋಜನೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.