ಜಿಲ್ಲೆಗೆ ಅಗತ್ಯವಿರುವ ಜಲ್ಲಿ, ಮರಳು ಸುಲಭವಾಗಿ ದೊರಕುವಂತಾಗಬೇಕು: ಶಾಸಕ ಯಶ್ಪಾಲ್

KannadaprabhaNewsNetwork |  
Published : Feb 01, 2025, 12:00 AM IST
31ಗಣಿ | Kannada Prabha

ಸಾರಾಂಶ

ದೊಡ್ಡಣಗುಡ್ಡೆಯಲ್ಲಿ ಹಿರಿಯ ಭೂ ವಿಜ್ಞಾನಿಯವರ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಖನಿಜ ಭವನ-ನೂತನ ಕಚೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಜಲ್ಲಿ ಹಾಗೂ ಮರಳು ಸರಳವಾಗಿ ನಿಗದಿತ ಬೆಲೆಗೆ ಜನಸಾಮಾನ್ಯರಿಗೆ ದೊರಕುವಂತೆ ಗಣಿ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.

ಅವರು ಶುಕ್ರವಾರ ನಗರದ ದೊಡ್ಡಣಗುಡ್ಡೆಯಲ್ಲಿ ಹಿರಿಯ ಭೂ ವಿಜ್ಞಾನಿಯವರ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಖನಿಜ ಭವನ-ನೂತನ ಕಚೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಉಡುಪಿ ಜಿಲ್ಲೆಯು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದೆ. ಅಭಿವೃದ್ಧಿ ಹೊಂದಲು ಹೊಸ ಹೊಸ ಬೃಹತ್ ಕಟ್ಟಡಗಳು, ರಸ್ತೆ, ಸೇತುವೆ ನಿರ್ಮಾಣವಾಗುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುತ್ತದೆ. ಇವುಗಳ ನಿರ್ಮಾಣಕ್ಕೆ ಅಗತ್ಯವಿರುವ ಹೊಯ್ಗೆ ಹಾಗೂ ಜಲ್ಲಿ ನಿರ್ಮಾಣಕ್ಕೆ ತಕ್ಕಂತೆ ಪೂರೈಸುವ ಕಾರ್ಯ ಗಣಿ ಇಲಾಖೆಯ ಸಹಕಾರದೊಂದಿಗೆ ಆಗಬೇಕು ಎಂದರು.ಜಿಲ್ಲೆಯ ಜನರಿಗೆ ಗಣಿ ಇಲಾಖೆ ತಮ್ಮ ಸೇವೆಯನ್ನು ಮಾಡಲು ನೂತನವಾಗಿ 2 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಕಟ್ಟಡದಲ್ಲಿ ಉತ್ತಮ ರೀತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ನಂಜುಂಡಸ್ವಾಮಿ ಮಾತನಾಡಿ, ಸಾರ್ವಜನಿಕರು, ಕಲ್ಲುಬಂಡೆ ಗುತ್ತಿಗೆದಾರರು, ಮರಳು ಗುತ್ತಿಗೆದಾರರು ಹೊಸ ಖನಿಜ ಭವನದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಣಿ ಇಲಾಖೆಯ ಅಡಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಕಲ್ಲುಗಳು, ಜೇಡಿಮಣ್ಣು, ಮೂರಕಲ್ಲು, ಮರಳು, ಸಿಲಿಕಾ ಮರಳು ಹಾಗೂ ಅಲಂಕಾರಿಕ ಶಿಲಾ ಕಲ್ಲುಗಳ ಒಟ್ಟು 167 ಗಣಿ ಗುತ್ತಿಗೆಗಳನ್ನು ನೀಡಲಾಗಿದೆ. ಅಲ್ಲದೇ 45ಕ್ಕೂ ಹೆಚ್ಚು ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಕಾರ್ಯಚಟುವಟಿಕೆಗಳ ನಿಯಂತ್ರಣ ಕಾರ್ಯನಿರ್ವಹಿಸಲು ವ್ಯವಸ್ಥಿತವಾದ ನೂತನ ಕಟ್ಟಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದರು.

ಪ್ರತಿಯೊಂದು ಇಲಾಖೆಗೂ ಸ್ವಂತ ಕಚೇರಿ ಇದ್ದಾಗ ಮಾತ್ರ ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರಿಗೆ ಈ ಕಚೇರಿಯು ಉತ್ತಮ ರೀತಿಯಲ್ಲಿ ಸೇವೆ ನೀಡುವುದರ ಮೂಲಕ ಜಿಲ್ಲೆಯಲ್ಲಿ ಇನ್ನಷ್ಟು ಉದ್ಯಮಕ್ಕೆ ಪ್ರೋತ್ಸಾಹ ಸಿಗುವಂತಾಗಲಿ ಎಂದು ಹೇಳಿದರು.ನಗರಾಭಿವೃಧ್ದಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಂದೀಪ್ ಜೆ.ಯು. ಸ್ವಾಗತಿಸಿದರು. ವಿನೂತ ನಿರೂಪಿಸಿದರು. ಸಂಧ್ಯಾ ವಂದಿಸಿದರು.

PREV

Recommended Stories

ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ
ಧರ್ಮಸ್ಥಳ ಕಾಡಲ್ಲಿ ಅಸ್ಥಿಪಂಜರ: ಇದು ದೂರುದಾರ ತೋರಿಸಿದ್ದಲ್ಲ