ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಅಮೋಘ ಕೊಡುಗೆ :ನಜೀರ್ ಅಹ್ಮದ್

KannadaprabhaNewsNetwork |  
Published : Mar 09, 2025, 01:49 AM IST
೮ಕೆಎಲ್‌ಆರ್-೬ಕೋಲಾರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸ್ಸೀರ್ ಅಹ್ಮದ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಸಿಎಂ ಸಿದ್ದರಾಮಯ್ಯರ ಆಡಳಿತದಲ್ಲಿನ ೧೬ನೇ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಅಮೋಘವಾದ ಕೊಡುಗೆಗಳನ್ನು ನೀಡಿರುವುದು ಐತಿಹಾಸಿಕ ದಾಖಲೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳ ನಿಯೋಗವು ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಲಿದೆ ಎಂದು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಸಿಎಂ ಸಿದ್ದರಾಮಯ್ಯರ ಆಡಳಿತದಲ್ಲಿನ ೧೬ನೇ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಅಮೋಘವಾದ ಕೊಡುಗೆಗಳನ್ನು ನೀಡಿರುವುದು ಐತಿಹಾಸಿಕ ದಾಖಲೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳ ನಿಯೋಗವು ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಲಿದೆ ಎಂದು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಬಣ್ಣಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಲಾರಕ್ಕೆ ನೀಡಿರುವ ಹಲವು ಕೊಡುಗೆಗಳ ಸಂಬಂಧವಾಗಿ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಬಿಜೆಪಿಯು ಸಾಲ ಮಾಡಿ ಆಡಳಿತ ನಡೆಸುತ್ತಿದೆ ಎಂದು ಬೊಬ್ಬೆ ಹಾಕುತ್ತಿದೆ. ಶೇ.೩ಕ್ಕಿಂತ ಹೆಚ್ಚಾಗಿ ಸಾಲ ಮಾಡಬಾರದು ಎಂದಿದ್ದು, ರಾಜ್ಯ ಸರ್ಕಾರವು ೨.೯ರಷ್ಟು ಸಾಲ ಮಾತ್ರ ಮಾಡಿದೆ, ರಾಜ್ಯದ ಸಾಲ ೭.೬೪ ಲಕ್ಷ ಕೋಟಿ ರು. ಆಗಿದೆ, ಮನಮೋಹನ್ ಸಿಂಗ್ ಆಡಳಿತದಲ್ಲಿ ಕೇಂದ್ರ ಸರ್ಕಾರದ ಸಾಲವು ೫೪ ಲಕ್ಷ ಕೋಟಿ ರು. ಇದ್ದದ್ದು ಇಂದು ಮೋದಿ ಆಡಳಿತದಲ್ಲಿ ೧೯೬ ಲಕ್ಷ ಕೋಟಿ ರು. ಏರಿಕೆ ಮಾಡಿದೆ. ಹಾಗಾಗಿ ಬಿಜೆಪಿಗರಿಗೆ ರಾಜ್ಯ ಸರ್ಕಾರದ ಬಗ್ಗೆ ಟೀಕಿಸುವಂಥ ಯಾವುದೇ ನೈತಿಕತೆ ಇಲ್ಲವೆಂದು ಪ್ರತಿಪಾದಿಸಿದರು. ಜಿಲ್ಲೆಗೆ ಬಂಪರ್:

ಕೋಲಾರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಬಹುದಿನಗಳ ಕನಸಾಗಿದ್ದ ಹಿನ್ನೆಲೆ ನಾವೆಲ್ಲಾ ಮುಖ್ಯಮಂತ್ರಿಗಳ ಬಳಿ ಹೋಗಿ ಒತ್ತಡ ಹೇರಿದ್ದರಿಂದ ಮೆಡಿಕಲ್ ಕಾಲೇಜನ್ನು ಸಾರ್ವಜನಿಕ ಸಹಬಾಗಿತ್ವದಲ್ಲಿ ಮಂಜೂರು ಮಾಡಿದರು, ಇದೇ ಸಂದರ್ಭದಲ್ಲಿ ೩೧೯೦ ಕೋಟಿ ರು. ಮೊತ್ತದಲ್ಲಿ ದೇವನಹಳ್ಳಿ- ವಿಜಯಪುರ- ಎಚ್.ಕ್ರಾಸ್- ವೇಮಗಲ್- ಮಾಲೂರು- ತಮಿಳುನಾಡು ಸಂರ್ಪಕದ ೪ ಪಥದ ರಸ್ತೆಯು ಕೋಲಾರವನ್ನು ಹಾದು ಹೋಗಲಿದೆ. ಸುಮಾರು ೧೨೩ ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ೩೦ ಕಿ.ಮೀ ರಸ್ತೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ೧೬೦೦ ಕೋಟಿ ರು. ವೆಚ್ಚದಲ್ಲಿ ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಪಿಪಿಪಿ ಮಾದರಿಯನ್ನಾಗಿಸಲು ಬಹುರಾಷ್ಟ್ರೀಯ ಕಂಪನಿಗಳು ಈಗ ಇರುವ ಕಂಪನಿಗಳಿಗಿಂತ ೪ ಪಟ್ಟು ಹೆಚ್ಚುವರಿಯಾಗಿ ಬರಲಿವೆ. ಇದರಿಂದ ಜಿಲ್ಲೆಯಲ್ಲಿ ನಿರುದ್ಯೋಗದ ಸಮಸ್ಯೆಗಳು ಬಗೆಹರಿಯಲಿವೆ ಎಂದು ವಿವರಿಸಿದರು.

ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಮಹಿಳೆಯರಿಗೆ ಸುರಕ್ಷಾ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಲು ನರಸಾಪುರದಲ್ಲಿ ೧೭೩ ಕೋಟಿ ರು. ವೆಚ್ಚದಲ್ಲಿ ೬ ಸಾವಿರ ಮಹಿಳೆಯರಿಗೆ ವಸತಿ ನಿಲಯ ನಿರ್ಮಿಸಲಾಗುವುದು. ಕೆಜಿಎಫ್ ಬಳಿ ಭಾರತೀಯ ಮೀಸಲು ಪೊಲೀಸ್ ಪಡೆ ಸ್ಥಾಪಿಸಲು ೪೦ ಕೋಟಿ ರು. ಅನುದಾನ ಒದಗಿಸಲಾಗುವುದು, ರೈತರಿಗೆ ಆಧುನಿಕ ಮಾರುಕಟ್ಟೆಯನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಕೋಲಾರದಲ್ಲಿ ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಲು ಸುಮಾರು ೮೦೦ ಕೋಟಿ ರು. ವೆಚ್ಚವಾಗಲಿದೆ. ಸಾರ್ವಜನಿಕರ ಸಹಭಾಗಿತ್ವದ ಆಧಾರದ ಮೇಲೆ ವೈದ್ಯಕೀಯ ಕಾಲೇಜ್‌ಅನ್ನು ಮಾಡಿದರೂ ಸಹ ಯಾವುದೇ ವ್ಯತ್ಯಾಸ ಆಗುವುದಿಲ್ಲ,

ರಿಂಗ್ ರೋಡ್‌ಗೆ ಡಿ.ಪಿ.ಆರ್. ಸಿದ್ಧವಾಗದ ಕಾರಣ ಅನುದಾನ ಮಂಜೂರು ಮಾಡಲಾಗಲಿಲ್ಲ. ಈ ಹಿಂದೆ ಕೇಂದ್ರ ಸರ್ಕಾರ ನೀಡಿದ್ದ ೧೦೦ ಕೋಟಿ ರು. ಹಣ ವಾಪಸ್ ಪಡೆದಿದೆ. ಈಗ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಬಜೆಟ್‌ನಲ್ಲಿ ಘೋಷಣೆಯಾಗದಿದ್ದರೂ ಡಿಪಿಆರ್ ಆದ ತಕ್ಷಣ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂಸದು ಹೇಳಿದರು.

ಎಪಿಎಂಸಿ ಮಾರುಕಟ್ಟೆಗೆ ೧೦೦ ಎಕರೆ ಜಾಗದ ಅವಶ್ಯಕತೆ ಇರುವುದು, ಹೊರತು ಇದಕ್ಕೆ ಹಣದ ಸಮಸ್ಯೆ ಇಲ್ಲ. ೧೦೦ ಎಕರೆ ಜಾಗವನ್ನು ಗುರುತಿಸಿದ ಕೂಡಲೇ ಸರ್ಕಾರದಿಂದ ಅನುದಾನ ಘೋಷಿಸಲಾಗುವುದು ಎಂದು ವಿವರಿಸಿದರು.

ಮೆಡಿಕಲ್ ಕಾಲೇಜಿಗೆ ಹೆಚ್ಚಿನ ನ್ಯೂನತೆಗಳು ಕಂಡು ಬಂದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಸರಿಪಡಿಸಲಾಗುವುದು. ಇಂಜನಿಯರ್ ಕಾಲೇಜುಗಳು ಸಾಕಷ್ಟು ಇದ್ದು ಅವುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸೀಟ್‌ಗಳು ಭರ್ತಿಯಾಗದೆ ಉಳಿಕೆಯಾಗಿರುವ ಕಾರಣ ಜಿಲ್ಲೆಗೆ ಇಂಜನಿಯರ್ ಕಾಲೇಜು ಕೇಳಲಿಲ್ಲ ಎಂದು ನಜೀರ್ ಅಹ್ಮದ್ ಸ್ಪಷ್ಟಪಡಿಸಿದರು.

ಈ ಹಿಂದೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅರ್ಧ ಬಜೆಟ್ ಮಂಡಿಸಿದ್ದರೂ ಅನುದಾನ ಬಿಡುಗಡೆ ಮಾಡಿರಲಿಲ್ಲ, ಉಳಿದ ಅರ್ಧಭಾಗ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮಂಡಿಸಿದರು, ಆಗ ಬಜೆಟ್ ನಲ್ಲಿ ಘೋಷಿಸಿರುವುದನ್ನು ಕೈಬಿಡದಂತೆ ಎಲ್ಲದಕ್ಕೂ ಅನುದಾನ ಬಿಡುಗಡೆ ಮಾಡಿದ್ದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಶಾಸಕರಾದ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ನಗರಸಭೆ ಅಧ್ಯಕ್ಷೆ ಲಕ್ಷ್ಮೀ ದೇವಮ್ಮ, ಕೆ.ಯು.ಡಿ.ಎ. ಅಧ್ಯಕ್ಷ ಮಹ್ಮದ್ ಹನೀಫ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಮುಖಂಡರಾದ ಚಂದ್ರಮೌಳಿ, ಸೀಸಂದ್ರ ಗೋಪಾಲ್, ಚಂಜಿಮಲೆ ರಮೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''