ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ತಾಲೂಕಿನ ಶಾಲಾ ಶಿಕ್ಷಣ ಇಲಾಖೆ ಭರ್ಜರಿ ಸಿದ್ಧತೆ ಕೈಗೊಂಡಿದ್ದು, ಬೇಸಿಗೆ ರಜೆ ಬಳಿಕ ಶಾಲೆಗೆ ಮರಳುವ ವಿದ್ಯಾರ್ಥಿಗಳಿಗೆ ಮೊದಲ ದಿನವೇ ಹೊಸ ಪಠ್ಯಪುಸ್ತಕ ವಿತರಿಸಲು ಇಲಾಖೆ ಸಜ್ಜಾಗಿದೆ.
ಮೇ 29ಕ್ಕೆ ಶಾಲಾರಂಭ, ಶೇ. 69 ಪಠ್ಯಪುಸ್ತಕ ಆಗಮನಪುಸ್ತಕ ಪೂರೈಕೆ ವೇಗ, ಸಮವಸ್ತ್ರ ವಿಳಂಬದಿಂದ ವಿದ್ಯಾರ್ಥಿಗಳಿಗೆ ನಿರಾಸೆ
ಪುಸ್ತಕ ಸಿದ್ಧ, ಸಮವಸ್ತ್ರ ಇನ್ನೂ ಬಾಕಿರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾ
ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ತಾಲೂಕಿನ ಶಾಲಾ ಶಿಕ್ಷಣ ಇಲಾಖೆ ಭರ್ಜರಿ ಸಿದ್ಧತೆ ಕೈಗೊಂಡಿದ್ದು, ಬೇಸಿಗೆ ರಜೆ ಬಳಿಕ ಶಾಲೆಗೆ ಮರಳುವ ವಿದ್ಯಾರ್ಥಿಗಳಿಗೆ ಮೊದಲ ದಿನವೇ ಹೊಸ ಪಠ್ಯಪುಸ್ತಕ ವಿತರಿಸಲು ಇಲಾಖೆ ಸಜ್ಜಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಪೂರೈಕೆ ಮಾತ್ರ ಇನ್ನೂ ಆಗದೇ ಇರುವುದರಿಂದ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿದೆ.
ತಾಲೂಕಿಗೆ ಈಗಾಗಲೇ ಶೇ. 69ರಷ್ಟು ಪಠ್ಯಪುಸ್ತಕಗಳು ಸರಬರಾಜಾಗಿದ್ದು, ಉಳಿದ ಪುಸ್ತಕಗಳೂ ಶಾಲಾರಂಭಕ್ಕೂ ಮುನ್ನವೇ ತಲುಪಲಿವೆ ಎಂದು ಶಿಕ್ಷಣ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. ಸಾಮಾನ್ಯವಾಗಿ ಶಾಲೆಗಳು ಆರಂಭವಾದ ನಂತರವೂ ತಿಂಗಳುಗಳ ಕಾಲ ಪುಸ್ತಕಗಳಿಗಾಗಿ ವಿದ್ಯಾರ್ಥಿಗಳು ಕಾಯಬೇಕಾಗುತ್ತಿದ್ದ ಪರಿಸ್ಥಿತಿ ಈ ಬಾರಿ ಬಹುತೇಕ ತಪ್ಪುವ ಸಾಧ್ಯತೆ ಇದೆ.
ಅಂಕೋಲಾ ತಾಲೂಕಿನಲ್ಲಿ 78 ಕಿರಿಯ ಪ್ರಾಥಮಿಕ, 79 ಹಿರಿಯ ಪ್ರಾಥಮಿಕ ಹಾಗೂ 30 ಪ್ರೌಢಶಾಲೆಗಳು ಸೇರಿ ಒಟ್ಟು 187 ಶಾಲೆಗಳಿವೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಗುತ್ತಿದ್ದು, ಖಾಸಗಿ ಶಾಲೆಗಳಿಗೆ ಬೇಡಿಕೆಯ ಅನುಗುಣವಾಗಿ ಹಣ ಪಡೆದು ಪುಸ್ತಕಗಳನ್ನು ನೀಡಲಾಗುತ್ತದೆ.
ತಾಲೂಕಿನ ಒಟ್ಟು 12,623 ಸಂಭವನೀಯ ವಿದ್ಯಾರ್ಥಿಗಳಿದ್ದು, (ದಾಖಲಾತಿ ಪ್ರಗತಿಯಲ್ಲಿದೆ) ಬೇಡಿಕೆಗೆ ಅನುಗುಣವಾಗಿ 1,47,727 ಪಠ್ಯಪುಸ್ತಕಗಳ ಅಗತ್ಯವಿದ್ದು, ಈ ವರೆಗೆ ಶೇ. 69ರಷ್ಟು ಪುಸ್ತಕ (1,01,411) ಗಳು ಮಾತ್ರ ತಲುಪಿವೆ. ಇನ್ನೂ 46,316 ಪುಸ್ತಕಗಳು ಬರಬೇಕಿದ್ದು, ಮೇ 29ರಂದು ಶಾಲೆಗಳು ಆರಂಭವಾಗುವ ವೇಳೆಗೆ ಶೇ. 100ರಷ್ಟು ಪೂರೈಕೆ ಪೂರ್ಣಗೊಳಿಸಲು ಇಲಾಖೆ ಪಣತೊಟ್ಟಿದೆ.
ಸರಬರಾಜಾಗಿರುವ ಪುಸ್ತಕಗಳನ್ನು ಹನುಮಟ್ಟಾದ ನಂ. 2 ಶಾಲೆಯ ಕೊಠಡಿಯಲ್ಲಿ ದಾಸ್ತಾನು ಇಡಲಾಗಿದ್ದು, ಶಿಕ್ಷಣ ಸಂಯೋಜಕ ನದೀಮ್ ಶೇಖ ಅವರು ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಿಗೆ ಪುಸ್ತಕ ಹಸ್ತಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶಾಲೆ ಆರಂಭವಾಗುವ ದಿನವೇ ಮಕ್ಕಳಿಗೆ ಪುಸ್ತಕ ವಿತರಿಸಲು ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ.
ಆದರೆ ಸಮವಸ್ತ್ರ ವಿತರಣೆಯಲ್ಲಿ ಮಾತ್ರ ಮತ್ತೆ ವಿಳಂಬದ ಲಕ್ಷಣ ಕಾಣುತ್ತಿದೆ. ಕಳೆದ ವರ್ಷವೂ ಸಮವಸ್ತ್ರ ವಿತರಣೆ ಸಾಕಷ್ಟು ತಡವಾಗಿದ್ದ ಹಿನ್ನೆಲೆ, ಈ ಬಾರಿಯೂ ವಿದ್ಯಾರ್ಥಿಗಳು ಕೆಲಕಾಲ ಹಳೆಯ ಸಮವಸ್ತ್ರದಲ್ಲೇ ಶಾಲೆಗೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.ಮುಖ್ಯಾಧ್ಯಾಪಕರಿಗೆ ಹೆಚ್ಚುವರಿ ಕಾರ್ಯ ಹೊರೆ:
ಪ್ರತಿ ವರ್ಷವೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಪ್ರತಿ ಶಾಲೆಗಳಿಗೆ ಪುಸ್ತಕ ಪೂರೈಸಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಶಿಕ್ಷಣ ಇಲಾಖೆಯ ವ್ಯವಸ್ಥಾಪಕರ ಆದೇಶದಂತೆ ಆಯಾ ಮುಖ್ಯ ಶಿಕ್ಷಕರೇ ಗೋದಾಮುಗಳಿಗೆ ತೆರಳಿ ಪಠ್ಯ-ಪುಸ್ತಕ ತೆಗೆದುಕೊಂಡು ಬರಬೇಕು. ಸಾಗಾಣಿಕಾ ವೆಚ್ಚವನ್ನು ಮುಖ್ಯಾಧ್ಯಾಪಕರ ಡಿಬಿಟಿ ಖಾತೆಗೆ ಜಮಾ ಮಾಡಲಾಗುವುದು ಎಂದು ಆದೇಶ ಮಾಡಲಾಗಿದೆ. ಇದರಿಂದಾಗಿ ಮುಖ್ಯಾಧ್ಯಾಪಕರು ಹೆಚ್ಚುವರಿ ಕಾರ್ಯ ಹೊರೆ ಹೊರುವಂತಾಗಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ.ಈಗಾಗಲೇ ಶೇ. 69ರಷ್ಟು ಪಠ್ಯಪುಸ್ತಕಗಳು ತಾಲೂಕಿಗೆ ಬಂದಿವೆ. ಶಾಲಾರಂಭಕ್ಕೂ ಮುನ್ನ ಉಳಿದ ಪುಸ್ತಕಗಳೂ ತಲುಪಲಿದ್ದು, ಮೊದಲ ದಿನವೇ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಶಿಕ್ಷಣ ಸಂಯೋಜಕ ನದೀಮ್ ಶೇಖ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.