ಕನ್ನಡಿಗರ ಒಗ್ಗಟ್ಟಿನಲ್ಲಿ ಅಪಾರ ಶಕ್ತಿ

KannadaprabhaNewsNetwork | Published : Dec 8, 2023 1:45 AM

ಸಾರಾಂಶ

ಕನ್ನಡಿಗರ ಒಗ್ಗಟ್ಟಿನಲ್ಲಿ ಅಪಾರ ಶಕ್ತಿಯಿದೆ. ಆದ್ದರಿಂದ ಕನ್ನಡ ನಾಡು, ನುಡಿ, ನೆಲ, ಜಲ ವಿಷಯ ಬಂದಾಗ ಕನ್ನಡಿಗರೆಲ್ಲರೂ ಒಂದಾಗಬೇಕು. ಅಂದಾಗ ಕರ್ನಾಟಕ ಏಕೀಕರಣವಾಗಿದ್ದಕ್ಕೂ ಸಾರ್ಥಕವಾಗಲಿದೆ ಎಂದು ಕಸಾಪ ರೋಣ ತಾಲೂಕು ಅಧ್ಯಕ್ಷ ರಮಾಕಾಂತ ಕಮತಗಿ ಹೇಳಿದರು. ತಾಲೂಕಿನ ಸವಡಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ರೋಣ ತಾಲೂಕು ಘಟಕ ಮತ್ತು ಶ್ರೀ ಸಂಗಮೇಶ್ವರ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ ಅಂಗವಾಗಿ ಜರುಗಿದ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.

ರೋಣ: ಕನ್ನಡಿಗರ ಒಗ್ಗಟ್ಟಿನಲ್ಲಿ ಅಪಾರ ಶಕ್ತಿಯಿದೆ. ಆದ್ದರಿಂದ ಕನ್ನಡ ನಾಡು, ನುಡಿ, ನೆಲ, ಜಲ ವಿಷಯ ಬಂದಾಗ ಕನ್ನಡಿಗರೆಲ್ಲರೂ ಒಂದಾಗಬೇಕು. ಅಂದಾಗ ಕರ್ನಾಟಕ ಏಕೀಕರಣವಾಗಿದ್ದಕ್ಕೂ ಸಾರ್ಥಕವಾಗಲಿದೆ ಎಂದು ಕಸಾಪ ರೋಣ ತಾಲೂಕು ಅಧ್ಯಕ್ಷ ರಮಾಕಾಂತ ಕಮತಗಿ ಹೇಳಿದರು.

ತಾಲೂಕಿನ ಸವಡಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ರೋಣ ತಾಲೂಕು ಘಟಕ ಮತ್ತು ಶ್ರೀ ಸಂಗಮೇಶ್ವರ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ ಅಂಗವಾಗಿ ಜರುಗಿದ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿಯೇ ಕನ್ನಡಿಗರು ಒಗ್ಗೂಡಬೇಕು. ಕರ್ನಾಟಕ ಏಕೀಕರಣಗೊಳ್ಳಬೇಕು ಎಂಬ ಹೋರಾಟ ಆರಂಭವಾಗಿತ್ತು ಎಂಬುದು ಗಮನಾರ್ಹ. ಕರ್ನಾಟಕ ಈಗಿನ ಹಾಗೆ ಆಗ ಇರಲಿಲ್ಲ. ಮದ್ರಾಸ್, ಬಾಂಬೆ, ಮೈಸೂರು ಸಂಸ್ಥಾನ, ಹೈದರಾಬಾದ್​​ನ ನಿಜಾಮರು, ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಕೊಡಗು ಇತ್ಯಾದಿ ಹಲವು ಆಡಳಿತಾತ್ಮಕ ಘಟಕಗಳು ಆಗಿನ ಕರ್ನಾಟಕದಲ್ಲಿತ್ತು. ಹೀಗೆ ವಿವಿಧ ಪ್ರಾಂತ್ಯಗಳಾಗಿ ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದು ಗೂಡಿಸಿ, ಕರ್ನಾಟಕ ಕಟ್ಟುವ ಕಾಯಕ ಅತ್ಯಂತ ಕಠಿಣದಾಯಕವಾಗಿತ್ತು. ಆದ್ದರಿಂದ ಬಹು ದೊಡ್ಡ ಹೋರಾಟವನ್ನೆ ಮಾಡಬೇಕಾದ ಸನ್ನಿವೇಶವಿತ್ತು. ಈ ನಿಟ್ಟಿನಲ್ಲಿ ಅನೇಕ ಮಹನೀಯರು ಕರ್ನಾಟಕ ಏಕೀಕರಣ ಚಳವಳಿ ಆರಂಭಿಸಿ, ಕನ್ನಡ ನಾಡನ್ನು ಕಟ್ಟುವಲ್ಲಿ ಯಶಸ್ವಿಯಾದರು. ಇದರ ಫಲವಾಗಿ 1973 ನವಂಬರ್‌ 1 ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂತು.‌ ಕನ್ನಡಿಗರೆಲ್ಲರೂ ಒಂದಾದರು. ಅನೇಕ‌ ಮಹನೀಯರ ತ್ಯಾಗ, ಬಲಿದಾನ, ಹೋರಾಟದ ಪ್ರತೀಕವಾಗಿ ಕರ್ನಾಟಕ ಏಕೀಕರಣಗೊಂಡಿದ್ದು, ಆ ಸಂದರ್ಭದಲ್ಲಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ಅತಿ ಮುಖ್ಯವಾಗಿದೆ ಎಂದರು.

ಶಿಕ್ಷಕ ಈರಪ್ಪ ಮಾದರ ಅವರು, ಕನ್ನಡ ನಾಡಿನ ಹಿರಿಮೆ ಮತ್ತು ಕರ್ನಾಟಕ ಸುವರ್ಣ ಸಂಭ್ರಮ ಕುರಿತು ವಿವರಿಸಿದರು. ಶಂಕ್ರಪ್ಪ‌ ಗಡಗಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯೋಪಾಧ್ಯಾಯ ಉದಯಕುಮಾರ ಧನವಂತ, ವಿ.ಎ. ನದಾಫ್‌, ಮಂಜುನಾಥ ಗದಗ, ಎಸ್.ಎಂ. ಪರಡ್ಡಿ, ಶರಣಪ್ಪ ಮಂಗಳೂರು, ಸುರೇಶ ನಡುವಿನಮನಿ ಉಪಸ್ಥಿತರಿದ್ದರು. ಬಿ.ಸಿ. ಗುಳೇದ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ರೇಖಾ ಜಾಧವ ವಂದಿಸಿದರು.

Share this article