ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಾಡಿನ ಜನರ ಆರೋಗ್ಯ ಸೇವೆಯಲ್ಲಿ ಮಾತೃ ಹೃದಯದಿಂದ ಕಾರ್ಯನಿರ್ವಹಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಬೃಹತ್ ಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಪ್ರಾರಂಭಿಸಿ ಸಕಲ ಸೌಕರ್ಯಗಳನ್ನು ಒದಗಿಸಿಕೊಂಡು ಗುಣಮಟ್ಟದ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಖ್ಯಾತ ಎಲುವು-ಕೀಲು ರೋಗ ಶಸ್ತ್ರ ತಜ್ಞ ಡಾ.ಮಂಜುನಾಥ ಮುದಕನಗೌಡರ ಹೇಳಿದರು. ಪಟ್ಟಣದ ಮಲಪ್ರಭಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ವೈದ್ಯರನ್ನು ಪೂಜ್ಯ ಭಾವದಿಂದ ಕಾಣಲಾಗುತ್ತದೆ. ಹಲವರ ಪಾಲಿಗೆ ದೈವ ಸ್ವರೂಪಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಯುವ ವೈದ್ಯರೆಲ್ಲ ಸೇರಿ ಉತ್ತಮ ಕಾರ್ಯ ಮಾಡುತ್ತ ಬಂದಿದ್ದೇವೆ. ಎಲ್ಲ ವೈದ್ಯರು ಒಂದೆಡೆ ಸಿಗುವಂತೆ ಮಾಡಲು ಸಾಕಷ್ಟು ಪರಿಶ್ರಮವಹಿಸಿದ್ದೇವೆ. ನಾಡಿನ ಜನರ ಸಹಕಾರ-ಪ್ರೀತಿ-ವಿಶ್ವಾಸ, ಆಶೀರ್ವಾದ ಹೀಗೆ ನಿರಂತರವಾಗಿರಲಿ ಎಂದು ಸಲಹೆ ನೀಡಿದರು.ಆಸ್ಪತ್ರೆಯಲ್ಲಿ ಸಾಮಾನ್ಯ ರೋಗ ಮತ್ತು ಹೃದಯರೋಗ ತಜ್ಞರು, ಎಲುವು ಮತ್ತು ಕೀಲು ರೋಗ ಶಸ್ತ್ರ ತಜ್ಞರು, ನವಜಾತು ಶಿಶು ಮತ್ತು ಚಿಕ್ಕಮಕ್ಕಳ ರೋಗ ತಜ್ಞರು, ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರು, ಅರವಳಿಕೆ ತಜ್ಞರು, ಪಿಜಿಯೋಥೆರೆಪಿ ತಜ್ಞರು ಸೇರಿದಂತೆ ಇನ್ನೂ ಅನೇಕ ಪ್ರಸಿದ್ಧ ವೈದ್ಯರ ಸಂದರ್ಶನದ ವ್ಯವಸ್ಥೆ ಇದೆ ಎಂದರು.ಹೆರಿಗೆ ಮತ್ತು ಸ್ತ್ರೀ ರೋಗ ಡಾ.ಅಶೋಕ ದೊಡವಾಡ, ನವಜಾತ ಶಿಶು ಮತ್ತು ಚಿಕ್ಕಮಕ್ಕಳ ತಜ್ಞ ಡಾ.ಶರಣಕುಮಾರ ಅಂಗಡಿ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುವುದು ಸರ್ವಕಾಲಿಕ ಮಾತು. ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಮದ್ದು ನೀಡಿ, ಗುಣ ಪಡಿಸುವುದು ವೈದ್ಯರ ಕರ್ತವ್ಯವಾಗಿದೆ. ವೈದ್ಯೋ ನಾಯಾರಣ ಹರಿ ಎನ್ನುವುದು ಅದಕ್ಕೆ ಸಾಕ್ಷಿಯಾಗಿದ್ದು, ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನ ಆಚರಿಸಲಾಗುತ್ತದೆ. ಭಾರತದಲ್ಲಿ 1991 ರಲ್ಲಿ ಮೊದಲ ಬಾರಿ ವೈದ್ಯರ ದಿನವನ್ನು ಆಚರಿಸಲಾಯಿತು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ಶ್ರೇಷ್ಠ ವೈದ್ಯ ಬಿಧನ್ ಚಂದ್ರ ರಾಯ್ ನೀಡಿರುವ ಕೊಡುಗೆ ಪರಿಗಣಿಸಿ, ಅವರ ಜ್ಞಾಪಕಾರ್ಥವಾಗಿ ಪ್ರತಿ ವರ್ಷ ಜು.1 ರಂದು ರಾಷ್ಟ್ರೀಯ ವೈದ್ಯ ದಿನವಾಗಿ ಆಚರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಿಬ್ಬಂದಿಯರಾದ ಹನುಮಂತ ಹೊಸವಾಳ, ಜಗದೀಶ ದಾದಾನಾಯ್ಕರ, ಸುನೀಲ ಸಮಪಗಾಂವಿ, ಗಂಗಮ್ಮ ಅರಳೀಕಟ್ಟಿ, ಪೂರ್ಣಿಮಾ ಐಹೊಳೆ, ಶಿಲ್ಪಾ ತಳವಾರ, ಪೂಜಾ ಬೆಳವಡಿ, ಸುಮ್ಮಯ್ಯಾ ನದಾಫ ಇದ್ದರು.ನಮ್ಮ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. 52 ಹಾಸಿಗೆಗಳ ಆಸ್ಪತ್ರೆಯಲ್ಲಿ 24/ 7 ಸೇವೆಯಲ್ಲಿರುತ್ತದೆ. ಸುಸಜ್ಜಿತ ಚಿಕಿತ್ಸಾ ಉಪಕರಣಗಳು, ಅಪಘಾತ ತುರ್ತು ಚಿಕಿತ್ಸಾ ಘಟಕ, ಐಸಿಯು, ಎಂಸಿಯು, ಪಿಐಸಿಯು ಸೌಲಭ್ಯ ಇದೆ. ಹೆರಿಗೆ ವಿಭಾಗದ ಆಧುನಿಕ ಶಸ್ತ್ರಚಿಕಿತ್ಸೆಯ ಆಪರೇಷನ್ ಥಿಯೇಟರ್, ಡಿಜಿಟಲ್ ಎಕ್ಸರೇ, ಅಲ್ಟ್ರಾ ಸೋನೋಗ್ರಾಫಿ, ನುರಿತ ಆಸ್ಪತ್ರೆ ಸಿಬ್ಬಂದಿ, ಶೀಘ್ರದಲ್ಲಿ ವೆಂಟಿಲೇಟರ್ ಅಳವಡಿಕೆ, ಸೂಕ್ತವಾದ ಆಪರೇಶನ್ ಥೇಟರನಲ್ಲಿ ಎಲ್ಲ ಮಷಿನ್‌ಗಳ ವ್ಯವಸ್ಥೆ ಇದೆ.-ಡಾ.ಮಂಜುನಾಥ ಮುದಕನಗೌಡರ,
ಎಲುವು-ಕೀಲು ರೋಗ ಶಸ್ತ್ರ ತಜ್ಞ.