ಅರ್ಧಕ್ಕೆ ನಿಲ್ಲುತ್ತಾ ಗ್ರೀನ್‌ ಕಾರಿಡಾರ್‌?

KannadaprabhaNewsNetwork |  
Published : Feb 07, 2024, 01:48 AM IST
ಸ್ಮಾರ್ಟ್, ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯ ಒಂದು ನೋಟ | Kannada Prabha

ಸಾರಾಂಶ

ಸ್ಮಾರ್ಟ್‌ಸಿಟಿ ಯೋಜನೆಯನ್ನೇ ಕೇಂದ್ರ ಸರ್ಕಾರ ಸ್ಥಗಿತಗೊಳಿಸಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಗ್ರೀನ್‌ ಕಾರಿಡಾರ್‌ ಅರ್ಧಕ್ಕೆ ನಿಲ್ಲುವ ಶಂಕೆ ಮೂಡುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ನಗರದ ಕೊಳಚೆಯನ್ನು ಹೊರ ವಲಯಕ್ಕೆ ಸಾಗಿಸುವ ರಾಜಕಾಲುವೆಯನ್ನು ರಾಜನಂತೆ ಸಿಂಗರಿಸುವ ದೇಶದ ಮೊದಲ ‘ಗ್ರೀನ್‌ ಮೊಬಿಲಿಟಿ ಕಾರಿಡಾರ್‌’ ಅರ್ಧಕ್ಕೆ ನಿಲ್ಲುತ್ತದೆಯೇ?

ಇಂತಹ ಪ್ರಶ್ನೆ ಇದೀಗ ಜನರಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮಾರ್ಚ್‌ ಅಂತ್ಯಕ್ಕೆ 2ನೇ ಹಂತದ ಕಾಮಗಾರಿ ಮುಗಿಯುತ್ತದೆ. ತದನಂತರ 3ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಆದರೆ ಇದು ಪ್ರಾರಂಭವಾಗುತ್ತದೆಯೋ ಇಲ್ಲವೋ ಅದು ಗೊತ್ತಿಲ್ಲ. ಏಕೆಂದರೆ ಸ್ಮಾರ್ಟ್‌ಸಿಟಿ ಯೋಜನೆಯನ್ನೇ ಕೇಂದ್ರ ಸರ್ಕಾರ ಸ್ಥಗಿತಗೊಳಿಸಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ಈ ನಾಗರಿಕರಿಗೆ ಈ ಶಂಕೆ ಮೂಡಿದೆ.

ರಾಜಕಾಲುವೆ

ರಾಜಕಾಲುವೆ ಎಂದರೆ ಗಬ್ಬುವಾಸನೆ, ಸಾಂಕ್ರಾಮಿಕ ರೋಗಗಳ ತಾಣ ಎಂಬುದು ಮಾಮೂಲು. ಇದರ ಸಮೀಪ ಹೋಗಲು ಜನತೆ ಹಿಂಜರಿಯುವುದು ಸಹಜ. ಆದರೆ ಹುಬ್ಬಳ್ಳಿಯಲ್ಲಿನ ರಾಜಕಾಲುವೆ ಮಾತ್ರ ಇದಕ್ಕೆ ಹೊರತಾಗಿ ಸುಂದರ ತಾಣವಾಗಿ, ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಡಿಸುವ ಯೋಜನೆಯೇ ಗ್ರೀನ್‌ ಕಾರಿಡಾರ್‌. ಮೊದಲು ಅದರತ್ತ ಸುಳಿಯಲು ಹಿಂಜರಿಯುತ್ತಿದ್ದ ಜನತೆಗೀಗ ಇದು ವಾಯುವಿಹಾರಕ್ಕೆ ಹೇಳಿ ಮಾಡಿಸಿದ ಜಾಗೆ. ಅಷ್ಟೊಂದು ಸುಂದರವಾಗುತ್ತಿದೆ.

ಮೊದಲು ಹೇಗಿತ್ತು?

ಉಣಕಲ್‌ ಕೆರೆಯಿಂದ ಗಬ್ಬೂರು ಕ್ರಾಸ್‌ ವರೆಗೂ ಬರೋಬ್ಬರಿ 11 ಕಿಲೋ ಮೀಟರ್‌ ರಾಜಕಾಲುವೆ ಇದೆ. ಮೊದಲು ಇದು ಕೂಡ ಉಳಿದ ಕಾಲುವೆಗಳಂತೆ ಕೊಳಚೆ, ನೀರು ಎಂಬಂತಾಗಿತ್ತು. ಮಳೆ ಬಂದಾಗ 18 ಕಡೆಗಳಲ್ಲಿ ಪ್ರವಾಹ ಉಂಟಾಗುತ್ತಿತ್ತು. ಸುತ್ತಮುತ್ತಲಿನ ನಾಗರಿಕರು ಪ್ರತಿವರ್ಷ ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿದ್ದರು. 2019ರಲ್ಲಂತೂ ಕೆಲ ಕಡೆಗಳಲ್ಲಿ ಅಕ್ಷರಶಃ ನಡುಗಡ್ಡೆಯಂತಾಗಿತ್ತು. ಮಳೆಗಾಲದಲ್ಲಿ ರಾಜಕಾಲುವೆಯಿಂದ ಪ್ರವಾಹ ಎದುರಾಗದಂತೆ ನೋಡಿಕೊಳ್ಳಬೇಕು. ಜತೆಗೆ ರಾಜಕಾಲುವೆಯನ್ನು ಸುಂದರ ತಾಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಗ್ರೀನ್‌ ಕಾರಿಡಾರ್‌ ಯೋಜನೆ ಕೈಗೆತ್ತಿಕೊಳ್ಳಲಾಯಿತು.

ಏನಿದು ಗ್ರೀನ್‌ ಕಾರಿಡಾರ್‌?

11 ಕಿಮೀ ಉದ್ದದ ರಾಜಕಾಲುವೆಯಲ್ಲಿ ಮೊದಲಿಗೆ 0.65 ಕಿಮೀ (650 ಮೀಟರ್‌) ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿತ್ತು. ಎರಡನೆಯ ಹಂತದಲ್ಲಿ 4.9 ಕಿಮೀ ಉದ್ದದ ಕಾರಿಡಾರ್‌ ನಿರ್ಮಾಣ ನಡೆಯುತ್ತಿದ್ದು, ಮುಕ್ತಾಯದ ಹಂತಕ್ಕೆ ತಲುಪಲಿದೆ.

ರಾಜಕಾಲುವೆಗೆ ಎತ್ತರದ ತಡೆಗೋಡೆ ನಿರ್ಮಿಸಲಾಗಿದೆ. ಮಹಾನಗರ ಪಾಲಿಕೆಯ ಅಕ್ಕಪಕ್ಕದ ಜಾಗೆ ಬಳಸಿ ಎರಡು ಬದಿಗಳಲ್ಲಿ 2.5 ಮೀಟರ್‌ ಅಗಲದ ವಾಕಿಂಗ್‌ ಪಾಥ್‌, 2.5 ಮೀಟರ್‌ ಅಗಲದ ಸೈಕಲ್‌ ಪಾಥ್‌ ನಿರ್ಮಿಸಲಾಗಿದೆ. ಎರಡು ಭಾಗದ ಸಂಪರ್ಕಕ್ಕೆ ಪಾದಚಾರಿ ಸೇತುವೆ ನಿರ್ಮಿಸಲಾಗುತ್ತಿದೆ. ಕಾರಿಡಾರ್‌ ಮಧ್ಯದಲ್ಲಿ ಧ್ಯಾನ, ಓಪನ್‌ ಜಿಮ್‌, ಉದ್ಯಾನವನ ನಿರ್ಮಿಸಲಾಗುತ್ತಿದೆ. ಜತೆಗೆ ಒಂದೆರಡು ಕಡೆಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಸೈಕಲ್‌ ಸವಾರಿ ಸ್ಟ್ಯಾಂಡ್‌ ಸಿದ್ಧಪಡಿಸಲಾಗಿದೆ. ಇಲ್ಲಿ ಸಾರ್ವಜನಿಕರು ಸೈಕಲ್‌ಗಳನ್ನು ಬಾಡಿಗೆ ರೂಪದಲ್ಲೂ ಪಡೆದುಕೊಳ್ಳಬಹುದಾಗಿದೆ. ಕಾಲುವೆ ಪಕ್ಕದಲ್ಲಿ ತಡೆಗೋಡೆಯನ್ನು ಗಿಡಬಳ್ಳಿ ಬೆಳೆಯಲು ಅನುಕೂಲವಾಗುವ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಹೀಗಾಗಿ ತಡೆಗೋಡೆ ಮೇಲೆ ಹಸಿರು ಕಂಗೊಳಿಸುತ್ತಿದೆ. ವಾಕಿಂಗ್‌ ಪಾಥ್‌, ಸೈಕಲ್‌ ಪಾಥ್‌ ಪಕ್ಕದಲ್ಲೂ ಹಸಿರೀಕರಣವಾಗಿದೆ. ಮೊದಲ ಹಾಗೂ 2ನೇ ಹಂತ ಸೇರಿ ಒಟ್ಟು ₹130 ಕೋಟಿ ಖರ್ಚಾಗಿದೆ.

ಈಗ ಏನಾಗಬೇಕಿದೆ?

ಕೇಂದ್ರದ ಸೀಟಿಸ್‌ ಯೋಜನೆಯಡಿ ಕೈಗೆತ್ತಿಕೊಂಡಿರುವ ಈ ಯೋಜನೆಯನ್ನು ಸ್ಮಾರ್ಟ್‌ಸಿಟಿ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದೀಗ 3ನೇ ಹಂತದಲ್ಲಿ ಉಳಿದ 4 ಕಿಮೀಗೂ ಅಧಿಕ ರಾಜಕಾಲುವೆಯನ್ನು ಕೈಗೆತ್ತಿಕೊಳ್ಳಬೇಕಿದೆ. ಇದಕ್ಕಾಗಿ 35 ಕೋಟಿ ಮಂಜೂರಾಗಿದೆ. ಟೆಂಡರ್‌ ಕೂಡ ಕರೆಯಲಾಗಿದೆ.

ಇದೀಗ ಎದುರಾಗಿರುವ ಸಮಸ್ಯೆಯೆಂದರೆ 5.5 ಕಿಮೀ ಕಾರಿಡಾರ್‌ ನಿರ್ಮಿಸಲು ₹130 ಕೋಟಿ ಖರ್ಚಾಗಿದೆ. ಇನ್ನುಳಿದ ನಾಲ್ಕು ಕಿಮೀಗೆ 35 ಕೋಟಿ ಸಾಕಾಗುತ್ತದೆಯೇ? ಎಂಬ ಪ್ರಶ್ನೆ ಒಂದೆಡೆಯಾದರೆ, ಸ್ಮಾರ್ಟ್‌ಸಿಟಿ ಯೋಜನೆಯೇ ಜೂನ್‌ನಲ್ಲಿ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸ್ಮಾರ್ಟ್‌ಸಿಟಿ ಯೋಜನೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟರೆ ಅದ್ಹೇಗೆ ಉಳಿದ 4 ಕಿಮೀ ಕಾರಿಡಾರ್‌ ಕಾಮಗಾರಿ ಕೈಗೆತ್ತಿಕೊಳ್ಳುತ್ತದೆ? ಎಂಬುದು ಮತ್ತೊಂದು ಪ್ರಶ್ನೆ.

ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿ ವರ್ಗ ಮಾತ್ರ ಹಾಗೇನೂ ಆಗಲ್ಲ. ಈ ಅನುದಾನ ಖರ್ಚಾದ ಬಳಿಕ ಮತ್ತೆ ಅನುದಾನ ಕೇಳುವಂತೆ ಕೇಂದ್ರ ತಿಳಿಸಿದೆ. ಹೀಗಾಗಿ, ಅನುದಾನಕ್ಕೇನೂ ಸಮಸ್ಯೆಯಾಗಲ್ಲ ಎಂದು ತಿಳಿಸುತ್ತದೆ.

ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಜೂನ್‌ನೊಳಗೆ ಪೂರ್ಣಗೊಳಸಬೇಕು ಎಂಬ ಸೂಚನೆಯಿದೆ. ಆದರೆ ಜೂನ್‌ನಲ್ಲೇ ಯೋಜನೆಯೇ ಸ್ಥಗಿತಗೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಹಾಗಂತ ಸರ್ಕಾರವೇನೂ ತಿಳಿಸಿಲ್ಲ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಘಾಳಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!