;Resize=(412,232))
ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಕಸ ಸಂಗ್ರಹ, ಸಾಗಾಣೆಗೆ ವಾರ್ಷಿಕ ಸುಮಾರು 600 ಕೋಟಿ ರು. ವೆಚ್ಚದಂತೆ ಮುಂದಿನ ಏಳು ವರ್ಷಗಳಿಗೆ ಕಸ ನಿರ್ವಹಣೆ ಗುತ್ತಿಗೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಬಿಎ ಸಚಿವರೂ ಆದ ಕೃಷ್ಣಬೈರೇಗೌಡ, ಬೆಂಗಳೂರಿನಲ್ಲಿ ಕಸ ನಿರ್ವಹಣೆಗೆ ಇರುವ ವಾಹನಗಳು ಹಾಳಾಗಿವೆ. ಹಾಲಿ ಗುತ್ತಿಗೆಯಲ್ಲಿ ತುಂಬಾ ನ್ಯೂನತೆಗಳಿದ್ದು, ಸಮಪರ್ಕವಾಗಿ ಕಸ ಸಂಗ್ರಹಣೆ ಆಗುತ್ತಿಲ್ಲ. ಹೀಗಾಗಿ ಪರಿಷ್ಕೃತ ಟೆಂಡರ್‌ಗೆ ಒಪ್ಪಿಗೆ ನೀಡಲಾಗಿದೆ. ಮುಂದಿನ ಏಳು ವರ್ಷಗಳಲ್ಲಿ 4,000 ದಿಂದ 4,5000 ಕೋಟಿ ರು. ವೆಚ್ಚ ಆಗಬಹುದು ಎಂದು ಹೇಳಿದರು.
ಪ್ರಸ್ತುತ 5,200 ವಾಹನಗಳು ಇದ್ದು, ಇವುಗಳಲ್ಲಿ 3 ಚಕ್ರಗಳ ವಾಹನ ಹೆಚ್ಚಿವೆ. ಇವುಗಳಿಂದ ಹೆಚ್ಚು ಕಸ ಸಂಗ್ರಹಣೆ ಮಾಡಲು ಆಗುವುದಿಲ್ಲ. ಕೇವಲ 1-1.5 ಟನ್ ಮಾತ್ರ ಸಾಗಿಸಬಹುದು. ನೂತನ ಟೆಂಡರ್‌ನಲ್ಲಿ 4,900 ವಾಹನ ಮಾತ್ರ ಪಡೆಯುತ್ತಿದ್ದು, 4 ಚಕ್ರಗಳ ವಾಹನಕ್ಕೆ ಒತ್ತು ನೀಡಲಾಗಿದೆ. ಹೆಚ್ಚು ಪ್ರಮಾಣದ ಕಸ ಸಾಗಣೆ ಮಾಡಬಹುದು. ಜತೆಗೆ ವಾಹನಗಳಿಗೆ ಜಿಐಎಸ್ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ರಸ್ತೆ ಗುಡಿಸುವಿಕೆ ಸೇರಿದಂತೆ ಸಮಗ್ರ ನಿರ್ವಹಣೆಗೆ ಪರಿಷ್ಕೃತ ಟೆಂಡರ್‌ಗೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರು ಜಲಮಂಡಳಿ ವತಿಯಿಂದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕಾಚರಕನಹಳ್ಳಿಯಲ್ಲಿ 10 ದಶಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಸ್ಕರಣಾ ಘಟಕವನ್ನು 51.37 ಕೋಟಿ ರು. ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಡಿಪಿಆರ್‌ಗೆ ಅನುಮೋದನೆ ನೀಡಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಜಲಮಂಡಳಿ ವ್ಯಾಪ್ತಿಯಲ್ಲಿ 61.5 ಕೋಟಿ ರು. ವೆಚ್ಚದಲ್ಲಿ ಎರಡು ಜಲ ಸಂಗ್ರಹಗಾರ ನಿರ್ಮಾಣಕ್ಕೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಪುಲಕೇಶಿನಗರದ ಕಾವಲ್‌ಬೈರಸಂದ್ರ ಗ್ರಾಮದಲ್ಲಿ 22.50 ಕೋಟಿ ರು. ವೆಚ್ಚದಲ್ಲಿ 50 ಎಂಎಲ್ಡಿ ಸಾಮರ್ಥ್ಯದ ಜಲಸಂಗ್ರಹಗಾರ, ಬನಶಂಕರಿ ಸೇವಾಠಾಣೆಯಲ್ಲಿರುವ ಹಳೆಯ ಜಲಸಂಗ್ರಹಗಾರ ಕೆಡವಿ 39 ಕೋಟಿ ರು. ವೆಚ್ಚದಲ್ಲಿ 22 ಎಂಎಲ್ಡಿ ಸಾಮರ್ಥ್ಯದ ಹೊಸ ಜಲಸಂಗ್ರಹಗಾರ ನಿರ್ಮಿಸಲು ತೀರ್ಮಾನಿಸಲಾಗಿದೆ.