ಹಾಲಿನ ದರವನ್ನು 12ರಿಂದ 15 ರು.ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ರೈತರ ನಷ್ಟ ತಡೆಯಲು 8 ರು. ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.ಹಾಲಿನ ದರ ಹೆಚ್ಚಳ ಮಾಡಬೇಕೆಂದು ಪಕ್ಷಾತೀತವಾಗಿ ಎಲ್ಲ ಪಕ್ಷದ ಶಾಸಕರು ಬೇಡಿಕೆ ಇಟ್ಟಿದ್ದರು.

ಬೆಂಗಳೂರು : ಹಾಲಿನ ದರವನ್ನು 12ರಿಂದ 15 ರು.ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ರೈತರ ನಷ್ಟ ತಡೆಯಲು 8 ರು. ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಮಾಡಬೇಕೆಂದು ಪಕ್ಷಾತೀತವಾಗಿ ಎಲ್ಲ ಪಕ್ಷದ ಶಾಸಕರು ಬೇಡಿಕೆ ಇಟ್ಟಿದ್ದರು. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ನಂದಿನಿ ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ. ರೈತರು ನಮಗೆ ಮುಖ್ಯ ಎಂದರು.

ಹಾಲಿನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ರೈತರಿದ್ದರೆ ಹಾಲು ಕುಡಿಯಬಹುದು. ಇಲ್ಲದಿದ್ದರೆ ಹಾಲು ಕುಡಿಯಲು ಸಾಧ್ಯವೇ ಎಂದು ಮರು ಪ್ರಶ್ನೆ ಹಾಕಿದರು. ಪ್ಲಾಸ್ಟಿಕ್ ಕವರ್, ಡೀಸೆಲ್, ಪೆಟ್ರೋಲ್ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಾಗಿದೆ. ಹಾಲಿನ ಸಾರಿಗೆ ವೆಚ್ಚವೂ ಏರಿಕೆಯಾಗಿದೆ. ಎಲ್ಲರೊಂದಿಗೆ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ನಮ್ಮಲ್ಲಿ ಬೆಲೆ ಕಡಿಮೆ ಇದ್ದಿದ್ದರಿಂದ ಆಂಧ್ರ, ಮಹಾರಾಷ್ಟ್ರಕ್ಕೂ ಹಾಲು ಹೋಗುತ್ತಿತ್ತು. ಅದನ್ನು ತಡೆಯಬೇಕಿತ್ತು. ತಿರುಪತಿಗೆ ನಂದಿನಿ ತುಪ್ಪವನ್ನೇ ಖರೀದಿ ಮಾಡುತ್ತಾರೆ. ಮೈಸೂರು ಪಾಕ್ ಸೇರಿದಂತೆ ಇತರೆ ಪದಾರ್ಥಗಳಿಗೆ ನಂದಿನಿ ತುಪ್ಪದ ಬೇಡಿಕೆ ಇದೆ. ಇದರ ಜೊತೆಗೆ ಸರ್ಕಾರದಿಂದಲೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರೈತರಿಗೆ ನಷ್ಟವಾಗುತ್ತಿರುವುದರಿಂದ ಸರ್ಕಾರ ಈ ತೀರ್ಮಾನವನ್ನು ಮಾಡಿದೆ ಎಂದರು.

ಬಸ್ ದರ ಏರಿಕೆ:

ಸಾರಿಗೆ ಇಲಾಖೆಯಲ್ಲಿ ಬಹಳ ನಷ್ಟವಾಗಿದ್ದು, ಡೀಸೆಲ್‌ಗೆ ಕೂಡ ಅನುದಾನವಿರಲಿಲ್ಲ. ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತವಾಗಿ ಸರ್ಕಾರ ನೀಡಲಾಗುತ್ತಿದೆ. ಹಾಗಾಗಿ ಸಾರಿಗೆ ಇಲಾಖೆಯವರೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ತಿಳಿಸಲಾಗಿದೆ ಎಂದರು.

ಯಾವ ಪ್ಯಾಕೆಟ್‌ ಹಾಲಿಗೆ ಎಷ್ಟು? ಇಂದು ದರ ಪಟ್ಟಿ

ರಾಜ್ಯ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರು.ಹೆಚ್ಚಿಸಲು ನಿರ್ಧರಿಸಿದ್ದು ಪರಿಷ್ಕೃತ ದರ ನ.1ರಂದು ಜಾರಿಗೆ ಬರಲಿದೆ. ಹಾಲು, ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳ ಹೊಸದರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡುವಾಗಿ ಕೆಎಂಎಫ್‌ ಮೂಲಗಳು ಮಾಹಿತಿ ನೀಡಿವೆ. 16 ಹಾಲು ಒಕ್ಕೂಟಗಳು ಪರಿಷ್ಕೃತ ದರದಂತೆ ಹಾಲು ಉತ್ಪಾದಕರಿಗೆ ನ.1ರಿಂದ 7 ರು.ಹೆಚ್ಚುವರಿ ಹಣ ಸೇರಿಸಿ ಕೊಡಬೇಕಿದೆ. ವಿವಿಧ ಒಕ್ಕೂಟಗಳಿಂದ ರೈತರಿಗೆ ಪ್ರತೀ ಲೀಟರ್ ಹಾಲಿಗೆ ಸಿಗುವ ದರ ಇಂತಿದೆ.

ದಕ್ಷಿಣ ಕನ್ನಡ ಹಾಲು ಒಕ್ಕೂಟ (ಡಿಕೆಎಂಯುಎಲ್‌) 47.10 ರು.(ಪ್ರಸ್ತುತ ದರ- 40.10 ರು.), ಬಮೂಲ್‌ 43.15 ರು. (36.15 ರು.), ಮೈಮೂಲ್‌ 43.10 ರು.( 36.10 ರು.), ತುಮೂಲ್‌ 43 ರು. (36 ರು.), ಚಿಮೂಲ್‌ 42.40 ರು. (35.40 ರು.), ಕೊಮೂಲ್‌ 42.20 ರು.(35.40 ರು.), ಮನ್‌ಮೂಲ್‌ 42.30 ರು. (35.30 ರು.), ಚಮೂಲ್‌ 42.20 ರು. (35.20 ರು.), ಧಮೂಲ್‌ 42 ರು. (35 ರು.), ಹಾಮೂಲ್‌ 41.50 ರು. (34.50 ರು.), ಹಾವೆಮೂಲ್‌ 41.50 ರು.(34.50 ರು.), ಕಲಬುರಗಿ-ಬೀದರ್‌-ಯಾದಗಿರಿ ಒಕ್ಕೂಟ (ಕೆಬಿವೈ ಮೂಲ್‌) 41.41 ರು. (34.41 ರು.), ಶಿಮೂಲ್‌ 41.21 ರು. (34.21 ರು.), ಆರ್‌ಬಿಕೆವಿಮೂಲ್‌ 41.10 ರು.(34.10 ರು.), ಬೆಳಗಾವಿ- ಬೆಮೂಲ್‌ 41 ರು. (34 ರು.), ವಿಮೂಲ್‌ 40.40ರು (33.40 ರು) ನಂತೆ ಡೈರಿ ಕೋಆಪರೇಟಿವ್‌ ಸೊಸೈಟಿಗಳು ಹಾಲು ಉತ್ಪಾದಕರಿಗೆ ಹಣ ನೀಡಲಿವೆ. ಅಂದರೆ ಸರಾಸರಿ ಹಾಲು ಉತ್ಪಾದಕರಿಗೆ ಲೀಟರ್‌ ಹಾಲಿಗೆ 42.24 ರು. ಸಿಗಲಿದೆ. ಇದರೊಂದಿಗೆ ರಾಜ್ಯ ಸರ್ಕಾರವು ಪ್ರತೀ ಲೀ. ಹಾಲಿಗೆ ನೀಡುವ ಪ್ರೋತ್ಸಾಹ ಧನ 5 ರು.ಕೂಡ ಸೇರಲಿದೆ.