ಡೀಸೆಲ್‌ ಬೆಲೆ ಆರು ಬಾರಿ ಹೆಚ್ಚಳವಾಗಿದೆ. ಪ್ರತಿ ವರ್ಷ ಸಾರಿಗೆ ನಿಗಮಗಳಿಗೆ 2,000 ಕೋಟಿ ರು. ನಷ್ಟ ಉಂಟಾಗುತ್ತಿದ್ದು, ದರ ಏರಿಕೆ ಅನಿವಾರ್ಯವಾಗಿದೆ. ಹೀಗಾಗಿ ನ.3ರಂದು ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನ.4 ರಂದು ನಿರ್ಧಾರ ಪ್ರಕಟಿಸುತ್ತೇವೆ

ಬೆಂಗಳೂರು : ಡೀಸೆಲ್‌ ಬೆಲೆ ಆರು ಬಾರಿ ಹೆಚ್ಚಳವಾಗಿದೆ. ಪ್ರತಿ ವರ್ಷ ಸಾರಿಗೆ ನಿಗಮಗಳಿಗೆ 2,000 ಕೋಟಿ ರು. ನಷ್ಟ ಉಂಟಾಗುತ್ತಿದ್ದು, ದರ ಏರಿಕೆ ಅನಿವಾರ್ಯವಾಗಿದೆ. ಹೀಗಾಗಿ ನ.3ರಂದು ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನ.4 ರಂದು ನಿರ್ಧಾರ ಪ್ರಕಟಿಸುತ್ತೇವೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ಸು ಪ್ರಯಾಣ ದರ ಹೆಚ್ಚಳ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ಈ ವೇಳೆ ಒಂದು ವರ್ಷದಲ್ಲಿ ಆರು ಬಾರಿ ಇಂಧನ ಬೆಲೆ ಹೆಚ್ಚಳ ಆಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಸುರೇಶ್‌ ಪ್ರತಿಪಾದಿಸಿದರು.

ಆದರೆ, ಹಾಲಿನ ದರ ಏರಿಕೆ ಬೆನ್ನಲ್ಲೇ ಈ ವಿಚಾರ ಬೇಡ. ಮುಂದಿನ ಸಚಿವ ಸಂಪುಟ ಸಭೆ ವೇಳೆಗೆ ನಿರ್ಧರಿಸಬಹುದು. ಅದಕ್ಕೂ ಮೊದಲು ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ. ಈ ಬಗ್ಗೆ ಇಲಾಖೆ ವತಿಯಿಂದಲೇ ನಿರ್ಧಾರ ಮಾಡಿ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಲಹೆ ನೀಡಿದರು ಎಂದು ತಿಳಿದುಬಂದಿದೆ.

ಇಲಾಖೆಗೆ ದರ ಏರಿಕೆ ಹೊಣೆ:

ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಬೈರತಿ, ಸಂಪುಟ ಸಭೆಯಲ್ಲಿ ಎಲ್ಲಾ ಸಚಿವರ ಅಭಿಪ್ರಾಯ ಪಡೆದ ನಂತರ ಸಿಎಂ ಅವರು ಪ್ರಯಾಣ ದರ ಏರಿಕೆ ಮಾಡುವ ನಿರ್ಧಾರವನ್ನು ನಮ್ಮ ಸಾರಿಗೆ ಇಲಾಖೆಗೆ ವಹಿಸಿದ್ದಾರೆ ಎಂದು ತಿಳಿಸಿದರು. ಸಿಎಂ ನೀಡಿರುವ ಜವಾಬ್ದಾರಿ ಹಿನ್ನೆಲೆಯಲ್ಲಿ ನ.3 ರಂದು ಎಲ್ಲಾ ನಾಲ್ಕೂ ಸಾರಿಗೆ ನಿಗಮಗಳ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ನ.4 ರಂದು ಈ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ವರ್ಷದಲ್ಲಿ ಆರು ಬಾರಿ ಡೀಸೆಲ್‌, ಪೆಟ್ರೋಲ್‌ ದರ ಹೆಚ್ಚಳ ಆಗಿದೆ. ರಾಜ್ಯದಲ್ಲಿ ಹತ್ತು ವರ್ಷದ ಬಳಿಕ ಕಳೆದ ವರ್ಷ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಸಾರಿಗೆ ನಿಗಮಗಳಿಗೆ ವರ್ಷಕ್ಕೆ 2,000 ಕೋಟಿ ರು. ನಷ್ಟ ಆಗುತ್ತಿದೆ. ಐದು ವರ್ಷದಲ್ಲಿ 10 ಸಾವಿರ ಕೋಟಿ ರು. ನಷ್ಟ ಉಂಟಾಗಿದೆ. ಹೀಗಾಗಿ ಹೆಚ್ಚಳ ಮಾಡಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನ.5 ರಿಂದ ದರ ಹೆಚ್ಚಳ ಖಚಿತವೇ ಎಂಬ ಪ್ರಶ್ನೆಗೆ, ಇನ್ನೂ ಯಾವ ನಿರ್ಧಾರವೂ ಆಗಿಲ್ಲ. ಅತುಲ್‌ ತಿವಾರಿ ಅವರ ನೇತೃತ್ವದಲ್ಲಿನ ಸಮಿತಿ ನೀಡಿರುವ ವರದಿ ಹಾಗೂ ನಿಗಮಗಳ ವಾಸ್ತವ ಸ್ಥತಿಗತಿ ಆಧರಿಸಿ ನ.3 ರಂದು ಸಭೆ ನಡೆಸಲಾಗುವುದು. ಬಳಿಕ ನ.4 ರಂದು ತೀರ್ಮಾನಿಸಲಾಗುವುದು ಎಂದು ಹೇಳಿದರು.

ಪ್ರಯಾಣ ದರ ಹೆಚ್ಚಳ ಮುಂದೂಡಿಕೆ: ಕೃಷ್ಣಬೈರೇಗೌಡ

ಸಚಿವ ಸಂಪುಟ ಸಭೆಯಲ್ಲಿ ಬಸ್ಸು ಪ್ರಯಾಣ ದರ ಹೆಚ್ಚಳ ಬಗ್ಗೆ ಚರ್ಚಿಸಲಾಯಿತು. ಸಾರಿಗೆ ಸಚಿವರು ಇಂಧನ ಬೆಲೆ ಹೆಚ್ಚಳದಿಂದಾಗಿ ಪ್ರಯಾಣ ದರ ಹೆಚ್ಚಳ ಅನಿವಾರ್ಯ ಎಂದು ಪ್ರತಿಪಾದಿಸಿದರು. ವಿಷಯವನ್ನು ಮುಂದಿನ ಸಂಪುಟಕ್ಕೆ ಮುಂದೂಡಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.