ಬಾಲಬಳಗ ಶಾಲಾ ಮಕ್ಕಳಿಂದ ಹಸಿರಿನ ಮೆರವಣಿಗೆ

KannadaprabhaNewsNetwork | Published : Jun 6, 2024 12:32 AM

ಸಾರಾಂಶ

ಇಂದಿನ ಋತುಗಳ ವ್ಯತ್ಯಾಸ, ತಾಪಮಾನ ಹೆಚ್ಚಳದಲ್ಲಿ ಪರಿಸರದ ಪಾತ್ರ ಮುಖ್ಯವಾಗಿದೆ. ಸ್ವಚ್ಛ, ಸುಂದರ, ಹಸಿರು ಪರಿಸರ ಕಾಪಾಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕು.

ಧಾರವಾಡ:

ಇಲ್ಲಿಯ ಬಾಲಬಳಗ ಶಾಲೆ ಮಕ್ಕಳು, ಶಿಕ್ಷಕರು ಹಾಗೂ ಪಾಲಕರಲ್ಲಿ ಪರಿಸರ ಪ್ರೇಮ ಬೆಳೆಸುವ ಹಾಗೂ ಪರಿಸರ ಸ್ನೇಹಿ ಜೀವನ ಶೈಲಿ ರೂಢಿಸಿಕೊಳ್ಳುವ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಬುಧವಾರ ಸಸಿಗಳ ಹಾಗೂ ಹಸಿರಿನ ಮೆರವಣಿಗೆ ಮಾಡಿದರು.ಇಲ್ಲಿಯ ರೈಲು ನಿಲ್ದಾಣದಲ್ಲಿ ರೈಲ್ವೆ ಇಲಾಖೆ ಅಧಿಕಾರಿ, ಸಿಬ್ಬಂದಿಯೊಂದಿಗೆ ಮಕ್ಕಳು ಸಸಿ ನೆಟ್ಟು ಸಾಂಕೇತಿಕವಾಗಿ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಕೈಯಲ್ಲಿ ಸಸಿ ಹಾಗೂ ಹಸಿರಿನ ಕೋಲು ಹಿಡಿದು ರೈಲ್ವೆ ನಿಲ್ದಾಣದಿಂದ ಉಳವಿ ಚನ್ನಬಸವೇಶ್ವರ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೂ ಸಸಿಗಳ ಹಾಗೂ ಹಸಿರಿನ ಮೆರವಣಿಗೆ ಮಾಡಲಾಯಿತು. ಮಾರ್ಗ ಮಧ್ಯದ ಶಾಲೆಗಳಿಗೂ ಮಕ್ಕಳು, ಪಾಲಕರು ಭೇಟಿಯಾಗಿ ಪರಿಸರದ ಬಗ್ಗೆ ಜಾಗೃತಿ, ಹಾಡು, ಕಿರು ನಾಟಕವನ್ನು ಸಹ ಮಕ್ಕಳು ಪ್ರಸ್ತುತಪಡಿಸಿದರು. ಪ್ರತಿಯೊಂದು ಮಗುವಿನ ಕೈಯಲ್ಲಿ ಪರಿಸರ ಜಾಗೃತಿ ಮೂಡಿಸುವ ಫಲಕಗಳು ಪರಿಸರ ನಾಶದಿಂದ ಆಗುವ ಪರಿಣಾಮಗಳನ್ನು ಪ್ರದರ್ಶಿಸಿದವು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಲ್ಲಿನ ಸಿಬ್ಬಂದಿ ಹಾಗೂ ಬಾಲಬಳಗ ಶಾಲಾ ಮಕ್ಕಳೊಂದಿಗೆ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಇಂದಿನ ಋತುಗಳ ವ್ಯತ್ಯಾಸ, ತಾಪಮಾನ ಹೆಚ್ಚಳದಲ್ಲಿ ಪರಿಸರದ ಪಾತ್ರ ಮುಖ್ಯವಾಗಿದೆ. ಸ್ವಚ್ಛ, ಸುಂದರ, ಹಸಿರು ಪರಿಸರ ಕಾಪಾಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ಮಕ್ಕಳಲ್ಲಿ ಹಸಿರು ಪರಿಸರ ಪ್ರೀತಿ ಹೆಚ್ಚಿಸಲು, ಬಾಂಧವ್ಯ ಬೆಳೆಸಲು ಮಕ್ಕಳೊಂದಿಗೆ ಮನೆಯ ಆವರಣದಲ್ಲಿ ಮರ ಬೆಳೆಸಬೇಕು ಎಂದರು.

ಮಕ್ಕಳು ಇಂದು ಪರಿಸರ ಜಾಗೃತಿ ಜಾಥಾ ಮೂಲಕ ಜನರಿಗೆ ಹಾಗೂ ಇತರ ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಿದ್ದು ಮತ್ತು ಜಾಥಾದಲ್ಲಿ ಉಚಿತವಾಗಿ ಸಸಿ ವಿತರಿಸುವ ಮೂಲಕ ಮಾದರಿ ಆಗಿದ್ದಾರೆ ಎಂದರು.

ಬಾಲಬಳಗ ಸಂಸ್ಥೆ ಮುಖ್ಯಸ್ಥ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಪರಿಸರ ನಾಶದಿಂದಾಗಿ ನಾವು ಹದಗೆಡುತ್ತಿರುವ ವಾತಾವರಣದ ಪರಿಸ್ಥಿತಿ, ಭೂ ತಾಪಮಾನ ಹೆಚ್ಚಳ, ಅತ್ಯಂತ ಸುಡುವ ಬೇಸಿಗೆ ಅನುಭವಿಸುತ್ತಿದ್ದೇವೆ. 2023ರಲ್ಲಿ ಬಿಸಿಯಾದ ವರ್ಷವಾಗಿದೆ. 2024 ಅದನ್ನೂ ಮೀರಿಸುವ ಬಿಸಿಯಾಗುವ ವರ್ಷವಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಬಳಗ ಮಕ್ಕಳಿಗೆ ಹಾಗೂ ಪಾಲಕರಿಗೆ ಪರಿಸರದ ಕುರಿತಾದ ಸಂವೇದನಾಶೀಲತೆ ಹೆಚ್ಚಿಸಬೇಕು ಹಾಗೂ ಪರಿಸರ ಸ್ನೇಹಿ ಜೀವನ ರೂಢಿ ಮಾಡಬೇಕೆಂದು ಈ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪಿ. ಶುಭ, ಬಾಲಬಳಗ ಶಾಲೆಯ ಪ್ರಾಚಾರ್ಯರಾದ ಪ್ರತಿಭಾ ಕುಲಕರ್ಣಿ ಹಾಗೂ ಶಿಕ್ಷಕರು, ಪಾಲಕರು ಇದ್ದರು.

Share this article