ಕೆಎಸ್‌ಆರ್‌ಪಿ ಬೆಟಾಲಿಯನ್ ಸ್ಥಾಪನೆಗೆ ಹಸಿರು ನಿಶಾನೆ

KannadaprabhaNewsNetwork |  
Published : Sep 21, 2026, 01:15 AM IST
 | Kannada Prabha

ಸಾರಾಂಶ

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಬೆಟಾಲಿಯನ್ ಸ್ಥಾಪನೆಗೆ ಭೂಮಿ ಒದಗಿಸುವ ಪ್ರಕ್ರಿಯೆಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ವಟಗಲ್ ಗ್ರಾಮದ ಸರ್ವೆ ನಂ.25ರಲ್ಲಿರುವ 50 ಎಕರೆ ಗೋಮಾಳ ಜಮೀನನ್ನು ಕೆಎಸ್‌ಆರ್‌ಪಿ ಬೆಟಾಲಿಯನ್ ಸ್ಥಾಪನೆಗಾಗಿ ಗೃಹ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ

ಇಂದರಪಾಶ ಚಿಂಚರಕಿ

ಕನ್ನಡಪ್ರಭ ವಾರ್ತೆ ಮಸ್ಕಿ

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಬೆಟಾಲಿಯನ್ ಸ್ಥಾಪನೆಗೆ ಭೂಮಿ ಒದಗಿಸುವ ಪ್ರಕ್ರಿಯೆಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ವಟಗಲ್ ಗ್ರಾಮದ ಸರ್ವೆ ನಂ.25ರಲ್ಲಿರುವ 50 ಎಕರೆ ಗೋಮಾಳ ಜಮೀನನ್ನು ಕೆಎಸ್‌ಆರ್‌ಪಿ ಬೆಟಾಲಿಯನ್ ಸ್ಥಾಪನೆಗಾಗಿ ಗೃಹ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಗದೀಶ ಕೆ. ಅವರು ಸೆ.18ರಂದು ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಭೂ ಕಂದಾಯ ನಿಯಮಗಳು-1966ರ ನಿಯಮ 97 (4)ರನ್ವಯ ಸರ್ವೆ ನಂ.25ರ 50 ಎಕರೆ ಜಮೀನನ್ನು ‘ಗೋಮಾಳ’ ಶೀರ್ಷಿಕೆಯಿಂದ ತಗ್ಗಿಸಿ, ಕೆಎಸ್‌ಆರ್‌ಪಿ ಬೆಟಾಲಿಯನ್ ಸ್ಥಾಪನೆ ಉದ್ದೇಶಕ್ಕಾಗಿ ಗೃಹ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಲು ಅನುಮತಿ ನೀಡಲಾಗಿದೆ.

ಜಿಲ್ಲಾಧಿಕಾರಿ ಪ್ರಸ್ತಾವನೆ: ವಟಗಲ್‌ನಲ್ಲಿ ಕೆಎಸ್‌ಆರ್‌ಪಿ ಬೆಟಾಲಿಯನ್ ಸ್ಥಾಪನೆಗೆ ಅಗತ್ಯವಿರುವ ಜಮೀನು ಕಾಯ್ದಿರಿಸುವಂತೆ ರಾಯಚೂರು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ ಕಂದಾಯ ಇಲಾಖೆ ಭೂಮಿಯ ಬಳಕೆ ಬದಲಾವಣೆ ಹಾಗೂ ಕಾಯ್ದಿರಿಸುವಿಕೆಗೆ ಅನುಮತಿ ನೀಡಿದೆ. ಇದರಿಂದ ಬೆಟಾಲಿಯನ್ ಸ್ಥಾಪನೆಗೆ ಅಗತ್ಯವಿರುವ 50 ಎಕರೆ ಭೂಮಿ ಗುರುತಿಸುವ ಹಾಗೂ ಗೃಹ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸುವ ಪ್ರಮುಖ ಹಂತ ಪೂರ್ಣಗೊಂಡಂತಾಗಿದೆ.

ಗೋಮಾಳದಿಂದ ಪೊಲೀಸ್‌ ಬಳಕೆಗೆ: ಸರ್ಕಾರಿ ದಾಖಲೆಗಳಲ್ಲಿ ಗೋಮಾಳವಾಗಿ ನಮೂದಾಗಿದ್ದ ಜಮೀನನ್ನು ನಿಯಮಾನುಸಾರ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ನಿರ್ದಿಷ್ಟ ಸರ್ಕಾರಿ ಉದ್ದೇಶಕ್ಕೆ ಬಳಸಲು ಸರ್ಕಾರ ಅನುಮತಿ ನೀಡಿರುವುದು ಆದೇಶದ ಪ್ರಮುಖ ಅಂಶವಾಗಿದೆ. ವಟಗಲ್‌ನಲ್ಲಿ ಕೆಎಸ್‌ಆರ್‌ಪಿ ಬೆಟಾಲಿ ಯನ್ ಸ್ಥಾಪನೆಯಾದಲ್ಲಿ ಮಸ್ಕಿ ತಾಲ್ಲೂಕಿನ ಪೊಲೀಸ್‌ ವ್ಯವಸ್ಥೆಗೆ ಹೆಚ್ಚುವರಿ ಮೂಲಸೌಕರ್ಯ ದೊರೆಯುವುದರ ಜತೆಗೆ ಪ್ರದೇಶದಲ್ಲಿ ರಾಜ್ಯ ಮೀಸಲು ಪೊಲೀಸ್‌ ಪಡೆಯ ಶಾಶ್ವತ ನೆಲೆ ರೂಪುಗೊಳ್ಳುವ ಸಾಧ್ಯತೆ ಇದೆ.

ಮುಂದಿನ ಹಂತವೇನು?: ಸರ್ಕಾರ ಭೂಮಿ ಕಾಯ್ದಿರಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಮುಂದಿನ ಹಂತದಲ್ಲಿ ಸಂಬಂಧಿಸಿದ ಇಲಾಖೆಗಳ ಮೂಲಕ ಜಮೀನು ಹಸ್ತಾಂತರ, ದಾಖಲೆ ಪ್ರಕ್ರಿಯೆ ಹಾಗೂ ಬೆಟಾಲಿಯನ್ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯ ಯೋಜನೆಗಳ ಕುರಿತು ಕ್ರಮ ಕೈಗೊಳ್ಳಬೇಕಿದೆ.

-------

ಬಾಕ್ಸ್

ಆದೇಶದ ಸಾರಾಂಶ

ಗ್ರಾಮ: ವಟಗಲ್- ಸರ್ವೆ ನಂ.: 25- ವಿಸ್ತೀರ್ಣ: 50 ಎಕರೆ- ಪ್ರಸ್ತುತ ಸ್ವರೂಪ: ಗೋಮಾಳ- ಉದ್ದೇಶ: ಕೆಎಸ್‌ಆರ್‌ಪಿ ಬೆಟಾಲಿಯನ್ ಸ್ಥಾಪನೆ- ಕಾಯ್ದಿರಿಸುವ ಇಲಾಖೆ: ಗೃಹ ಇಲಾಖೆ- ಆದೇಶ: ಸೆ.18, 2026- ಕಾನೂನು ಆಧಾರ: ಕರ್ನಾಟಕ ಭೂ ಕಂದಾಯ ನಿಯಮಗಳು–1966, ನಿಯಮ 97(4)

--------

ಕೋಟ್ :

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಬೆಟಾಲಿಯನ್ ಸ್ಥಾಪನೆಗೆ ಭೂಮಿ ಜಿಲ್ಲೆಯಲ್ಲಿ ಭೂಮಿ ಹುಡುಕಾಟ ನಡೆಸಿದ್ದರು ಆದ್ದರಿಂದ ನಾನು ಸರ್ಕಾರಕ್ಕೆ ಪತ್ರ ಬರೆದು ಮಸ್ಕಿ ತಾಲೂಕಿನಲ್ಲಿ 50 ಎಕರೆ ಗೋಮಾಳ ಜಮೀನು ಗೃಹ ಇಲಾಖೆಗೆ ಒದಗಿಸಲು ಭೂಮಿ ಇದೆ. ಮಸ್ಕಿ ತಾಲೂಕಿನಲ್ಲಿಯೇ ಬೆಟಾಲಿಯನ್ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಸರ್ಕಾರ ಈಗ ಹಸಿರು ನಿಶಾನೆ ತೋರಿದ್ದು, ಇದರಿಂದ ಈ ಭಾಗದಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿ.

ಶಾಸಕ ಆರ್ ಬಸನಗೌಡ ತುರುವಿಹಾಳ ಮಸ್ಕಿ.

------

20-ಎಂ ಎಸ್ ಕೆ -01:ಮಸ್ಕಿ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಬೆಟಾಲಿಯನ್ ಸ್ಥಾಪನೆಗೆ ಭೂಮಿ ಒದಗಿಸುವ ಪ್ರಕ್ರಿಯೆಗೆ ಸರ್ಕಾರ ಅಧಿಕೃತವಾಗಿ ಆದೇಶ ಮಾಡಿರುವ ಪ್ರತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಾ ಬಲದಂಡೆ ನಾಲೆಗೆ ನೀರು: ಕುಂದೂರಲ್ಲಿ ರೇಣು ಬಾಗಿನ
ಪಕ್ಷ ಸಂಘಟನೆಗೆ ಎಲ್ಲರೂ ಕೈ ಜೋಡಿಸೋಣ: ಎನ್‌.ಎಸ್‌.ಬೋಸರಾಜು