ಹೊನ್ನಾಳಿ:ತಾಲೂಕಿನ ಕುಂದೂರು ಗ್ರಾಮದ ಬಳಿ ಭದ್ರಾ ಬಲದಂಡೆ ನಾಲೆಯಲ್ಲಿ ಭದ್ರಾ ಜಲಾಶಯದಿಂದ ನೀರು ಹರಿದ ಪ್ರಯುಕ್ತ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಭದ್ರಾ ಬಲದಂಡೆ ನಾಲೆ ಮೂಲಕ ಸರ್ಕಾರ ನೀರು ಹರಿಸುವ ವ್ಯವಸ್ಥೆ ಮಾಡಿದ ಪ್ರಯುಕ್ತ ಭಾನುವಾರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕಿನ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿಗೆ ನೂರಾರು ರೈತರು ಹಾಗೂ ಕಾರ್ಯಕರ್ತರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ, ನಂತರ ಭದ್ರಾ ಬಲದಂಡೆಯಲ್ಲಿ ನೀರುತುಂಬಿ ಹರಿದ ಪ್ರಯುಕ್ತ ಬಾಗಿನ ಅರ್ಪಿಸಲಾಯಿತು.ಈ ಸಂದರ್ಭ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, 3 ವರ್ಷಗಳಲ್ಲಿ ದಾವಣಗೆರೆ ಜೆಲ್ಲೆಯ ರೈತರೊಂದಿಗೆ ಅನೇಕ ಹೋರಾಟಗಳನ್ನು ಮಾಡುತ್ತಿದ್ದು, ಇದರಲ್ಲಿ ಭದ್ರಾ ನಾಲೆ ಸೋರಿಕೆ ಆದಾಗ, ಅಪ್ಪರ್ ಭದ್ರಾಗೆ ನೀರು ಹರಿಸಬಾರದು, ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಚುನಾವಣೆ ದೃಷ್ಟಿಯಿಂದಲೂ ಯಾವತ್ತೂ ಹೋರಾಟ ಮಾಡಿಲ್ಲ. ನನ್ನ ಹೋರಾಟ ರೈತರ ಹಾಗೂ ಜನಸಾಮಾನ್ಯರಿಗಾಗಿ ಇರುತ್ತದೆ ಎಂದು ತಿಳಿಸಿದರು.
ಭದ್ರಾ ಜಲಾಶಯದಿಂದ ಅಪ್ಪರ್ ಭದ್ರಾಗೆ ನೀರು ಹರಿಸಲು ಸರ್ಕಾರ ಮುಂದಾದಾಗ ನಾನು ದಾವಣಗೆರೆ ರೈತರೊಂದಿಗೆ ದಾವಣಗೆರೆ ಬಂದ್ ಕಾರ್ಯಕ್ರಮ, ಹೆದ್ದಾರಿ ಬಂದ್ ಕಾರ್ಯಕ್ರಮ, ಡಿಸಿ ಕಚೇರಿ ಮುತ್ತಿಗೆ ಕಾರ್ಯಕ್ರಮ, ಪಾದಯಾತ್ರೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಯಿತು. ಇದರಲ್ಲಿ ಸ್ವಾರ್ಥ ರಹಿತ ಕಾಯಕವಿದೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.ಅಪ್ಪರ್ ಭದ್ರಾಗೆ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಮುನ್ನ ತುಂಗಾ ಜಲಾಶಯದಿಂದ ಶಿವಮೊಗ್ಗ ಬಳಿ ಇರುವ ಮುತ್ತಿನಕೊಪ್ಪ ಏತ ನೀರಾವರಿ ಮೂಲಕ 17.4 ಟಿಎಂಸಿ ನೀರನ್ನು ಮಳೆಗಾಲದಲ್ಲಿ ನೀರೇತ್ತಿ ಭದ್ರಾ ಜಲಾಶಯಕ್ಕೆ ಹರಿಸಿ ನಂತರ ಅಪ್ಪರ್ ಭದ್ರಾಗೆ ನೀರು ಕೊಡಿ ಎಂದು ನಾನು ಹೋರಾಟ ಮಾಡಿದ್ದು ನಿಜ. ಇದಕ್ಕೆ ಪಕ್ಷಾತೀತವಾಗಿ ರೈತರು ನನಗೆ ಕೈ ಜೋಡಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷ ತರಗನಹಳ್ಳಿ ರಮೇಶಗೌಡ ಸೇರಿದಂತೆ ಕುಂದೂರು, ಕೂಲಂಬಿ, ಚಿಕ್ಕ ಹಾಲಿವಾಣ, ಎಕ್ಕನಹಳ್ಳಿ ಸೇರಿದಂತೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಇತರರು ಬಾಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭದ್ರಾ ಅಚ್ಚಕಟ್ಟು ಪ್ರದೇಶಕ್ಕೆ ಭದ್ರಾ ಜಲಾಶಯದಿಂದ ನೀರು ಹರಿಸುವ ಸರ್ಕಾರದ ಆದೇಶ ಮೊದಲು ನನ್ನ ಕೈಸೇರಿದ್ದು, ಇದಕ್ಕಾಗಿ ಭದ್ರಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತರ ಪರವಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಸಚಿವ ಮಧು ಬಂಗಾರಪ್ಪ, ನೀರಾವರಿ ಸಚಿವ ಚಲುವರಾಯ ಸ್ವಾಮಿ ಅವರನ್ನು ಭೆಟಿ ಮಾಡಿ ನೀರು ಹರಿಸಲು ಒತ್ತಾಯ ಮಾಡಿದ್ದೆ.- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.