ಉದ್ದೇಶಿತ ರಸ್ತೆಯ ನಿರ್ಮಾಣದಿಂದ ರೈತ ಸಮೂಹದಲ್ಲಿ ಆತಂಕ; ಆಕ್ಷೇಪಣೆಗೆ ಅವಕಾಶ
ಎಸ್.ಎಂ.ಸೈಯದ್
ಕನ್ನಡಪ್ರಭ ವಾರ್ತೆ ಗಜೇಂದ್ರಗಡಪಟ್ಟಣದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ದಿಸೆಯಲ್ಲಿ ಸರ್ಕಾರವು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಯೋಜನಾ ಇಲಾಖೆಯು ವರ್ತುಲ ರಸ್ತೆ ನಿರ್ಮಿಸಲು ಮುಂದಾಗಿದ್ದು, ಪಟ್ಟಣದ ಸುತ್ತ ರಸ್ತೆ ನಿರ್ಮಿಸಲು ಸರ್ಕಾರವು ಹಸಿರು ನಿಶಾನೆ ನೀಡಿದೆ.
ಪಟ್ಟಣದಲ್ಲಿ ವರ್ತುಲ ರಸ್ತೆ ನಿರ್ಮಾಣದಿಂದ ಪಟ್ಟಣದ ಒಳಭಾಗದ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಿ, ಸುತ್ತಲಿನ ಗ್ರಾಮಗಳ ಸಂಪರ್ಕ ರಸ್ತೆಗಳಿಗೆ ಸಹಕಾರಿ ಆಗಲಿದೆ. ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಬರುವ ವಾಹನಗಳು ಪಟ್ಟಣದೊಳಗೆ ಪ್ರವೇಶಿಸದೇ ಪರ್ಯಾಯವಾಗಿ ಸಂಚಾರಿಸಲು ಸಾಧ್ಯ ಆಗುವುದರಿಂದ ಸಂಚಾರ ಸುಗಮಗೊಳ್ಳುವ ನಿರೀಕ್ಷೆ ಇದೆ. ಆದರೆ ಪಟ್ಟಣದಲ್ಲಿ ವಾಹನಗಳು ನಿಲುಗಡೆಯಾದರೆ ಇಲ್ಲಿನ ಐತಿಹಾಸಿಕ ಸ್ಥಳಗಳ ಮಾಹಿತಿ ಮತ್ತು ಭೇಟಿಯಿಂದ ವ್ಯಾಪಾರ-ವಹಿವಾಟು ಹೆಚ್ಚಾಗುವ ಸಾಧ್ಯತೆ ಇತ್ತು. ಆದರೆ ಈಗ ಪಟ್ಟಣದ ಹೊರಭಾಗದಿಂದಲೇ ವಾಹನಗಳು ಸಂಚಾರ ಮಾಡುವುದರಿಂದ ಪಟ್ಟಣದಲ್ಲಿನ ವ್ಯಾಪಾರ ವಹಿವಾಟಿನ ಮೇಲೆ ಬರೆ ಬಿಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಿದೆರೆ, ಇನ್ನೂ ಕೆಲವರು ಆರ್ಥಿಕ ಸಬಲೀಕರಣಕ್ಕೆ ವರ್ತುಲ ರಸ್ತೆ ಸಹಾಯಕವಾಗಲಿದೆ ಎನ್ನುತ್ತಿದ್ದಾರೆ.
ಪಟ್ಟಣದ ಸುತ್ತ ವರ್ತುಲ ರಸ್ತೆ ನಿರ್ಮಿಸಲು ಕೃಷಿ ಜಮೀನು ಭೂಸ್ವಾಧೀನಕ್ಕೆ ಒಳಪಡಲಿದ್ದು, ರಸ್ತೆಯ ಎರಡೂ ಬದಿಯಲ್ಲಿ ೨ ಕಿಮೀ ಜಮೀನುಗಳನ್ನು ಪ್ರಭಾವ ವಲಯವೆಂದು ಗುರುತಿಸಲಾಗಿದೆ. ಪರಿಣಾಮ ಈ ಪ್ರದೇಶದ ಕೃಷಿ ಜಮೀನುಗಳನ್ನು ಇತರ ಉದ್ದೇಶಗಳಿಗೆ ಬಳಸಲು ಹಾಗೂ ಕೃಷಿಯೇತರ ಜಮೀನಾಗಿ ಪರಿವರ್ತಿಸಲು ಅವಕಾಶಕ್ಕೆ ಕಡಿವಾಣ ಹಾಕಲಾಗುತ್ತದೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕೃಷಿ ಜಮೀನು ಭೂಸ್ವಾಧೀನಕ್ಕೆ ಒಳಪಟ್ಟರೆ ಕೃಷಿ ಜೀವನೋಪಾಯಕ್ಕೆ ತೊಂದರೆಯಾಗಲಿದ್ದು, ಜಮೀನನ್ನು ಇತರ ಉದ್ದೇಶಕ್ಕೆ ಒಳಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಬಹುದು ಎಂದು ವರ್ತುಲ ರಸ್ತೆಯ ನಿರ್ಮಾಣದ ಭಾಧಿತ ಪ್ರದೇಶದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಪಟ್ಟಣದಲ್ಲಿ ವರ್ತುಲ ರಸ್ತೆ ನಿರ್ಮಾಣ ಹಿನ್ನೆಲೆ ಬಂದಿರುವ ಅಧಿಸೂಚನೆಯನ್ನು ಪುರಸಭೆ ಸೂಚನಾ ಫಲಕದಲ್ಲಿ ಅಂಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ತಿಳಿಸಿದ್ದಾರೆ.