- ಹರಿಹರ ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್ ಅಧ್ಯಕ್ಷತೆ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ ಸುರಿಸಿದ ಸಾರ್ವಜನಿಕರು
ನಗರದ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಅಯವ್ಯಯ ಸಭೆಯು ಸಂಪೂರ್ಣ ಕುಂದುಕೊರತೆ ಸಭೆಯಂತಾದ ಘಟನೆ ನಡೆಯಿತು.
ನಗರಸಭೆಗೆ ಅನುದಾನ, ಆದಾಯ ಹೇಗೆ ತರಬೇಕು, ಹಣ ಹೇಗೆ ಖರ್ಚು ಮಾಡಬೇಕು ಎಂಬ ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ವಿವಿಧ ಸಂಘಗಳ ಮುಖಂಡರು ಸಾರ್ವಜನಿಕರು ಅಗತ್ಯ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ಮಾಡಬೇಕಾದೀತು ಎಂದು ಎಚ್ಚರಿಸಿದರು.ನಗರದಲ್ಲಿ ನೇಕಾರ ಬಡಾವಣೆಯಾಗಿ 15ಕ್ಕೂ ಹೆಚ್ಚು ವರ್ಷಗಳೆ ಕಳೆದಿವೆ. ಇದುವರೆಗೂ ಚರಂಡಿ, ರಸ್ತೆ, ನೀರಿನ ವ್ಯವಸ್ಥೆ ಬೀದಿದೀಪ ಇರಲಿ, ಮನೆಗಳಿಗೂ ವಿದ್ಯುತ್ ವ್ಯವಸ್ಥೆ ಮಾಡಿಲ್ಲ. ಪಕ್ಕದ ಬಡಾವಣೆಗಳಿಂದ ವಿದ್ಯುತ್ ವ್ಯವಸ್ಥೇ ಮಾಡಿಕೊಂಡರೆ, ಅದನ್ನೂ ತಿಂಗಳಿಗೆರಡು ಬಾರಿ ಬರುವ ತನಿಖಾ ದಳದವರು ಕಿತ್ತು ಹಾಕುತ್ತಾರೆ. ಎಂದು ನೇಕಾರ ಸಂಘದ ಪದಾಧಿಕಾರಿಗಳಾದ ಕೊಟ್ರಪ್ಪ ಕೊಟಿಗಿ, ಅಗಡಿ ಮಂಜುನಾಥ ಸೇರಿದಂತೆ ಇತರರು ನಗರಸಭೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಪ್ರತಿಯೊಂದು ನಗರಗಳಲ್ಲಿ ವ್ಯವಸ್ಥಿತ ತರಕಾರಿ ಮಾರುಕಟ್ಟೆ ಇವೆ. ಆದರೆ, ಹರಿಹರದಲ್ಲಿ ಮಾತ್ರ ರಸ್ತೆಯಲ್ಲಿ ಕುಳಿತು ತರಕಾರಿ ಮಾರಬೇಕಾದ ಪರಿಸ್ಥಿತಿ ಇದೆ. ಹಳೇ ಕೋರ್ಟ್ ಸ್ಥಳಾಂತರ ನಂತರ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಿ ಕೊಡುವ ಭರವಸೆ ಈಡೇರಿಲ್ಲ. ತರಕಾರಿ ಮಾರುವ ಮಹಿಳೆಯರು ಶೌಚಾಲಯಕ್ಕೆ ಹೋಗಲು ಪರದಾಡಬೇಕಾದ ಪರಿಸ್ಥಿತಿ ಇದೆ. ಹಳೇ ಕೋರ್ಟ್ ಜಾಗದಲ್ಲಿ ಮಳಿಗೆ ಬೇಡ, ಕೇವಲ ಪ್ಲಾಟ್‍ಫಾರ್ಮ್ ಮಾಡಿ, ತರಕಾರಿ ಮಾರುವವರಿಗೆ ನೀಡಿ ಲಕ್ಷಗಟ್ಟಲೇ ಆದಾಯ ಬರುತ್ತದೆ ಎಂದು ಮಾರಾಟದಾರರು ಮನವಿ ಮಾಡಿದರು.
ಸಾರ್ವಜನಿಕರಿಂದ ಸರ್ಕಾರಿ ಶಾಲೆ ಕೊಠಡಿ, ಶೌಚಾಲಯ ವ್ಯವಸ್ಥೆ, ಸಿ.ಸಿ. ಕ್ಯಾಮರಾ, ಕಳವು ಪ್ರಕರಣ, ನೀರಿನ ಕಂದಾಯ- ಮೀಟರ್ ಅಳವಡಿಕೆ, ರಸ್ತೆ, ರಸ್ತೆ ತಿರುವುಗಳಿಗೆ ನಾಮಫಲಕ, ಟ್ಯಾಕ್ಸಿ ಸ್ಟ್ಯಾಂಡ್, ನಿವೇಶನಗಳ ಹಂಚಿಕೆ, ಮನೆ ನಿರ್ಮಿಸಲು ಅನುಮತಿ, ಇಸ್ವತ್ತು, ಹೈಮಾಸ್ಟ್ ದೀಪ ವ್ಯವಸ್ಥೆ, ಸಾರ್ವಜನಿಕ ಗ್ರಂಥಾಲಯ ಮುಂತಾದ ಸಮಸ್ಯೆಗಳ ಮಹಾಪೂರವೇ ಹರಿದುಬಂದಿತು.
- - - -10ಎಚ್‌ಆರ್01- 02: