ಸಭೆ ಬಹಿಷ್ಕರಿಸಿದ ಮುಖಂಡರು, ತಡವಾಗಿ ಬಂದ ಎಸ್ಪಿ, ಸಭೆಯಲ್ಲಿದ್ದ ಬೆರಳೆಣಿಕೆಯ ಮಂದಿಯಿಂದ ಅಹವಾಲು ಸ್ವೀಕಾರ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಪರಿಶಿಷ್ಟ ಜಾತಿ, ಪಂಗಡದವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಲು ಕರೆಯಲಾಗುವ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ ಎರಡನೇ ಬಾರಿ ಕೂಡ ದಲಿತ ಮುಖಂಡರ ಅಸಹಕಾರದ ಕಾರಣ ವಿಫಲವಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆಯಿತು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯನ್ನು ಬುಧವಾರ ಮಧ್ಯಾಹ್ನ 3 ಗಂಟೆಗೆ ಆಯೋಜನೆ ಮಾಡಲಾಗಿತ್ತು.
ಸಮಯ 4 ಗಂಟೆಯಾದರೂ ಎಸ್ಪಿ, ಡಿವೈಎಸ್ಪಿಗಳು ಸೇರಿ ಪ್ರಮುಖ ಅಧಿಕಾರಿಗಳು ಬಾರದ ಕಾರಣ ದಲಿತ ಮುಖಂಡರು ಸಭೆಯಿಂದ ಹೊರನಡೆಯುವ ಮೂಲಕ ಸಭೆಯನ್ನು ಬಹಿಷ್ಕರಿಸಿದರು.ದಲಿತ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರನಡೆಯುತ್ತಿರುವಂತೆ ಸಭೆಗೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಎಎಸ್ಪಿ ಜಗನ್ನಾಥ ರೈ, ಸಿಇಎನ್ ಡಿವೈಎಸ್ ಪಿ ರವಿಕುಮಾರ್ ಸಭೆಯನ್ನು ಅಧಿಕೃತವಾಗಿ ಪ್ರಾರಂಭಿಸಿದರು. ದಲಿತ ಮುಖಂಡರು ಆಗಮಿಸುತ್ತಾರೆ ಎಂಬ ಉದ್ದೇಶದಿಂದ ಹಾಕಿದ್ದ ಎಲ್ಲಾ ಖುರ್ಚಿಗಳು ಖಾಲಿಯಾಗಿದ್ದವು. ಬೆರಳೆಣಿಕೆಯಷ್ಟಿದ್ದ ಮಂದಿಯಿಂದಲೇ ಅಹವಾಲು ಸ್ವೀಕರಿಸಿ ಸಭೆಯನ್ನು ಮುಗಿಸಿದರು.
ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಎಸ್ಪಿ ಕುಶಾಲ್ ಚೌಕ್ಸೆ, ಸೆಪ್ಟಂಬರ್ 20ಕ್ಕೆ ಮೊದಲ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ ಏರ್ಪಾಡಾಗಿತ್ತು. ಅಂದು ಕೂಡ ದಲಿತ ಮುಖಂಡರು ಪೂರ್ಣ ಪ್ರಮಾಣದಲ್ಲಿ ಭಾಗವಹಿಸದ ಪರಿಣಾಮ ಅವರ ಮನವಿಯಂತೆ ಸೆ. 23ಕ್ಕೆ ಮುಂದೂಡಲಾಗಿತ್ತು. ಇಂದಿನ ಸಭೆಗೆ 3 ಗಂಟೆಗೆ ಬರಬೇಕಾಗಿತ್ತು, ಆದರೆ ಎಡಿಜಿಪಿ ಅವರ ತುರ್ತು ಭೇಟಿಯಿದ್ದ ಪರಿಣಾಮ 4 ಗಂಟೆಗೆ ಸಭೆಯನ್ನು ಆರಂಭಿಸಲಾಗಿದೆ. ಇದನ್ನೇ ದೊಡ್ಡದು ಮಾಡಿಕೊಂಡು ದಲಿತ ಮುಖಂಡರು ಸಭೆಯಿಂದ ಹೊರನಡೆದಿದ್ದಾರೆ. ಯಾರಿಗೆ ಸಮಸ್ಯೆಯಿದೆಯೋ ಅವರು ಅರ್ಜಿಯನ್ನು ನೀಡಿ ಪರಿಹಾರ ಕೋರಿದ್ದಾರೆ. ಈ ಮುಖಂಡರೂ ಕೂಡ ಅವರಿಗೆ ಯಾವಾಗ ಅನುಕೂಲ ಆಗುತ್ತದೆಯೋ ಆಗ ಬಂದು ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಲಿ. ಜಿಲ್ಲಾ ಪೊಲೀಸ್ ಇಲಾಖೆಯ ಬಾಗಿಲು ಸದಾ ತೆರೆದಿರುತ್ತದೆ ಎನ್ನುವ ಮೂಲಕ ಮಾತು ಮುಗಿಸಿದರು.ಸಭೆಗೆ ದಲಿತ ಮುಖಂಡರ ಬಹಿಷ್ಕಾರ:
ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದಲಿತರ ಮೇಲೆ ದಾಖಲಾಗಿರುವ ಸುಳ್ಳು ಕೇಸುಗಳನ್ನು ಕೈಬಿಡಬೇಕು. ಕಾಲಕಾಲಕ್ಕೆ ದಲಿತರ ಕುಂದುಕೊರತೆ ಸಭೆ ನಡೆಸಿ ದಲಿತರ ಸಮಸ್ಯೆಗಳನ್ನು ಆಲಿಸಬೇಕು. ಇದನ್ನು ಮಾಡದ ಜಿಲ್ಲಾ ಪೊಲೀಸರು ದುರುದ್ದೇಶದಿಂದ ದಲಿತರು ನೀಡುವ ದೂರಿಗೆ ಪ್ರತಿದೂರನ್ನು ದಾಖಲಿಸುವ ಮೂಲಕ ಕೇಸನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ. 3 ಗಂಟೆಗೆ ಕರೆದಿರುವ ಸಭೆಗೆ 4 ಗಂಟೆಯಾದರೂ ಎಸ್ಪಿ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಾರದೆ ಸಭೆಯನ್ನು ನಿರ್ಲಕ್ಷಿಸಿದ್ದಾರೆ. ಹೀಗಾಗಿ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯನ್ನು ಎಲ್ಲಾ ದಲಿತ ಮುಖಂಡರು ಬಹಿಷ್ಕರಿಸಿದ್ದೇವೆ ಎಂದು ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಸಭೆಯಲ್ಲಿ ಒಬ್ಬಿಬ್ಬರು ದಲಿತ ಮುಖಂಡರು ಭಾಗಿಯಾಗಿ ತಮಗಾಗಿರುವ ಸಮಸ್ಯೆಗಳನ್ನು ಎಸ್ಪಿ ಗಮನಕ್ಕೆ ತರುವ ಪ್ರಯತ್ನ ಮಾಡಿದರು. ಈ ವೇಳೆ ಪೊಲೀಸ್ ಇಲಾಖೆಯ ಸಿಬ್ಬಂದಿ, ಬೆರಳೆಣಿಕೆ ಮಂದಿ ದಲಿತ ಮುಖಂಡರು ಇದ್ದರು.