ಮಳೆಯನ್ನು ಲೆಕ್ಕಿಸದೇ ಹರಿದು ಬರುತ್ತಿದೆ ಜನಸ್ತೋಮ । ಮೆರಗು ನೀಡುತ್ತಿದೆ ಸಾಂಸ್ಕೃತಿಕ ,ಧಾರ್ಮಿಕ ಕಲರವ । ರಾಜಬೀದಿ ಉತ್ಸವ
ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ದಿನೇ ದಿನೇ ಕಳೆಗಟ್ಟುತ್ತಿದೆ. ದೇವಿ ಸನ್ನಿದಿಯಲ್ಲಿ ನಡೆಯುತ್ತಿರುವ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳು, ಜಗದ್ಗುರುಗಳ ನವರಾತ್ರಿಯ ದರ್ಬಾರ್, ದಿಂಡೀ ದೀಪಾರಾಧನೆ, ರಾಜಬೀದಿ ಹಾಗೂ ನವರಾತ್ರಿ ಉತ್ಸವಕ್ಕೆ ವಿಶೇಷ ಮೆರಗು ನೀಡುತ್ತಿದೆ. ಆಗಾಗ ಸುರಿಯುತ್ತಿರುವ ಮಳೆ ಲೆಕ್ಕಿಸದೇ ಶೃಂಗೇರಿಯತ್ತ ಜನ ಸ್ತೋಮವೇ ಹರಿದು ಬರುತ್ತಿದೆ.
ಶರನ್ನವರಾತ್ರಿ ಮೋಹೋತ್ಸವ ಮೂರನೆ ದಿನವಾದ ಬುಧವಾರ ಶಾರದಾಂಬೆಗೆ ವೃಷಭವಾಹಿನಿ ಅಲಂಕಾರದಲ್ಲಿ ಪೂಜಿಸಲಾಯಿತು. ಹಂಸವಾಹಿನಿ, ಬ್ರಾಹ್ಮಿ ಸ್ವರೂಪಿಣಿಯಾಗಿ ಕಂಗೊಳಿಸಿದ ವಾಗ್ದೇವಿ, ಜಗಜ್ಜನನಿ ಶಾರದೆ ಬುಧವಾರ ವೃಷಭ ವಾಹನವನ್ನೇರಿ ಮಾಹೇಶ್ವರಿಯಾಗಿ ಭಕ್ತರನ್ನು ಅನುಗ್ರಹಿಸಿದಳು. ಶಿವನ ಶಕ್ತಿ ಪಡೆದು ದುಷ್ಟನಿಗ್ರಹ,ಶಿ ಷ್ಟಪರಿಪಾಲನೆ ಮಾಡುವ ಮಾಹೇಶ್ವರಿಗೆ ಕರದಲ್ಲಿ ತ್ರಿಶೂಲ ವಿರಾಜಿಸಿತ್ತು.ಶೃಂಗೇರಿಯಲ್ಲಿ ಶಿವ ಮತ್ತು ಶಕ್ತಿ ಎರಡೂ ಶಾರದೆಯೇ. ಆದ್ದರಿಂದಲೇ ಆಕೆಗೆ ಶಾರದಾ ಪರಮೇಶ್ವರಿ ಎಂಬ ನಾಮಧೇಯ. ದೇಶದ ಇತರೆ ಶಕ್ತಿ ಸ್ಥಳಗಳಲ್ಲಿ ಶಿವಲಿಂಗವಿರುತ್ತದೆ. ಆದರೆ ಶೃಂಗೇರಿಯಲ್ಲಿ ಲಿಂಗವಿಲ್ಲ. ಶಾರದೆಯೇ ಪರಮೇಶ್ವರಿ ಯಾಗಿರುವುದರಿಂದ ಲಿಂಗವಿಲ್ಲ ಎನ್ನಲಾಗಿದೆ. ಹೀಗೆಂದೇ ಮಾಹೇಶ್ವರಿ ಪೂಜೆ ವಿಶೇಷ ಶ್ರದ್ಧೆಯಿಂದ ಸಲ್ಲುತ್ತದೆ. ಅದ್ವೈತ ಕೇಂದ್ರ ಸ್ಥಳ ಶೃಂಗೇರಿಯಲ್ಲಿ ಪರಮಾತ್ಮ ಒಂದೇ ಚೈತನ್ಯ ಸ್ವರೂಪ. ಶಾರದೆಯೇ ಶಿವಶಕ್ತಿ, ಶೀಘ್ರ ವರಪ್ರಸಾದಿನಿ, ಭಕ್ತ ರಕ್ಷಿಣಿ ಎಂದೇ ಪ್ರಖ್ಯಾತಿಗೊಂಡು ಪೊರೆಯುತ್ತಿದ್ದಾಳೆ.
ಪ್ರತಿದಿನ ರಾತ್ರಿ ಜಗದ್ಗುರುಗಳು ಚಂದ್ರಮೌಳೇಶ್ವರ ಪೂಜೆ ಮಾಡುತ್ತಾರೆ. ಶ್ರೀ ಶಂಕರಾಚಾರ್ಯರು ತಮ್ಮ ಶಿಷ್ಯ ಸುರೇಶ್ವರಾ ಚಾರ್ಯರಿಗೆ ಕೈಲಾಸದಿಂದ ತಂದ ಚಂದ್ರಮೌಳೇಶ್ವರನನ್ನು ದಯಪಾಲಿಸಿ ಅನುಗ್ರಹಿಸಿದ್ದರು. ಅಂದಿನಿಂದ ಶೃಂಗೇರಿಯಲ್ಲಿ ಜಗದ್ಗುರುಗಳಿಂದ ಅವಿಚ್ಛಿನ್ನವಾಗಿ ಚಂದ್ರಮೌಳೇಶ್ವರ ಪೂಜೆ ನಡೆದುಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ನೂರಾರು ಕಂಠ ಗಳಿಂದ ಹೊರಹೊಮ್ಮುವ ರುದ್ರಪಠಣ ಅಲೌಕಿಕ ವಾತಾವರಣ ಸೃಷ್ಠಿಸುತ್ತದೆ. ಚಂದ್ರಮೌಳೇಶ್ವರ ಪೂಜೆ ನಂತರವೇ ಚಂದ್ರಮೌಳೇಶ್ವರ ತೊಟ್ಟಿಯಲ್ಲಿ ರಾಜಪೋಷಕು ಧರಿಸಿ ಜಗದ್ಗುರು ಹೊರಬರುವುದು. ನಂತರ ಬಂಗಾರದ ದಂಡ ಹಿಡಿದ ಪಾಠಕರು ಜಗದ್ಗುರು ಸ್ತುತಿಸುತ್ತಾ ಮುಂದೆ ಸಾಗುತ್ತಾರೆ. ಇದು ರಾಜವೈಭವದ ಮೆರವಣಿಗೆ. ನವರಾತ್ರಿ ಕೊನೆ ದಿನದವರೆಗೂ ವೈಭವದ ದಸರೆ ದರ್ಬಾರ್ ನಡೆಯುತ್ತದೆ.
ರಾಜಬೀದಿ ಉತ್ಸವದಲ್ಲಿ ಕೂತಗೋಡು ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ವಿವಿಧ ಸ್ತಬ್ದ ಚಿತ್ರಗಳು ಪಾಲ್ಗೊಂಡಿದ್ದವು.ಸಾಂಸ್ಕೃತಿಕ ಮಹೋತ್ಸವದಲ್ಲಿ ಶೃಂಗೇರಿ ಸಿಸ್ಟರ್ಸ್ ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಗುರುವಾರ ಶಾರದೆಗೆ ಮಯೂರ ವಾಹಿನಿ ಅಲಂಕಾರ ನಡೆಯಲಿದೆ ರಾಜಬೀದಿ ಉತ್ಸವದಲ್ಲಿ ವಿದ್ಯಾರಣ್ಯ ಪುರ ಪಂಚಾಯಿತಿ ವ್ಯಾಪ್ತಿ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು ಪಾಲ್ಗೊಳ್ಳಲಿದೆ. ಸಾಂಸ್ಕೃತಿಕ ಮಹೋತ್ಸವದಲ್ಲಿ ಚೆನೈನ ವಿದುಷಿ ಭುವನೇಶ್ವರಿ ಮತ್ತು ಕೃತಿಗಾ ತಂಡದವರಿಂದ ಹಾಡುಗಾರಿಕೆ ನಡೆಯಲಿದೆ.
24 ಶ್ರೀ ಚಿತ್ರ 1-ಶೃಂಗೇರಿಯಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಶಾರದೆಗೆ ವೃಷಭವಾಹಿನಿಯಲಂಕಾರ ಮಾಡಲಾಗಿತ್ತು.