ಗೃಹಜ್ಯೋತಿ, ಗೃಹಲಕ್ಷ್ಮಿ ಪರಿಷ್ಕರಣೆ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಮಾಜಿ ಸಿಎಂ ಸದಾನಂದಗೌಡ

KannadaprabhaNewsNetwork |  
Published : Jun 15, 2026, 03:15 AM IST
ಸದಾನಂದಗೌಡ | Kannada Prabha

ಸಾರಾಂಶ

ಆಡಳಿತ ವೈಫಲ್ಯ ಉಂಟಾದಾಗ ಹೊಸ ಸ್ವರೂಪದಲ್ಲಿ ಯೋಜನೆಗಳನ್ನು ಪರಿಚಯಿಸುವುದು ಕಾಂಗ್ರೆಸ್‌ ಚಾಳಿ. ಸರ್ಕಾರದ ಬಳಿ ಹಣದ ಕೊರತೆ ಉಂಟಾಗಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಆರೋಪಿಸಿದರು.

ಗದಗ: ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಫಲಾನುಭವಿಗಳಿಂದ ಮರು ಅರ್ಜಿ ಆಹ್ವಾನಿಸುವುದು, ಅವುಗಳನ್ನು ಪರಿಷ್ಕರಿಸುವುದಾಗಿ ಹೇಳುತ್ತಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಆರೋಪಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ವೈಫಲ್ಯ ಉಂಟಾದಾಗ ಹೊಸ ಸ್ವರೂಪದಲ್ಲಿ ಯೋಜನೆಗಳನ್ನು ಪರಿಚಯಿಸುವುದು ಕಾಂಗ್ರೆಸ್‌ ಚಾಳಿ. ಸರ್ಕಾರದ ಬಳಿ ಹಣದ ಕೊರತೆ ಉಂಟಾಗಿದ್ದು, ಅನಗತ್ಯ ವೆಚ್ಚಗಳಿಗೆ ಹಣ ಖರ್ಚು ಮಾಡುತ್ತಿರುವುದರಿಂದ ಜನಪರ ಯೋಜನೆಗಳಿಗೆ ಸಮರ್ಪಕ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.

ಫಲಾನುಭವಿಗಳ ಮರು ನೋಂದಣಿ ಪ್ರಕ್ರಿಯೆಯ ಅಗತ್ಯವೇ ಇಲ್ಲ. ತಾಂತ್ರಿಕ ಯುಗದಲ್ಲಿ ಸರ್ಕಾರ ಟೆಕ್ನಾಲಜಿಯ ನೆರವಿನಿಂದ ಮರಣ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳ ಆಧಾರದ ಮೇಲೆ ಫಲಾನುಭವಿಗಳ ಪಟ್ಟಿಯನ್ನು ಸ್ವಯಂಚಾಲಿತವಾಗಿ ಪರಿಷ್ಕರಿಸಬಹುದು. ತಹಸೀಲ್ದಾರರ ಮೂಲಕ ಲಭ್ಯವಿರುವ ಮಾಹಿತಿಯನ್ನು ಬಳಸಿ ಮರಣ ಹೊಂದಿದವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಬಹುದು. ಈ ಕುರಿತು ಮರು ಸರ್ವೇ ನಡೆಸುವ ಅಥವಾ ಹೊಸ ಅರ್ಜಿ ಆಹ್ವಾನಿಸುವ ಅವಶ್ಯಕತೆ ಇಲ್ಲ ಎಂದರು.

ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಆದರೆ ರೈತರು ದೇಶದ ಬೆನ್ನೆಲುಬಾಗಿದ್ದು, ಅವರ ಹಿತಾಸಕ್ತಿಗೆ ಧಕ್ಕೆ ಆಗುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳಬಾರದು. ಇತ್ತೀಚೆಗೆ ದೇವನಹಳ್ಳಿಯಲ್ಲಿ ರೈತರ ವಿರೋಧದ ಹಿನ್ನೆಲೆ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಡದಿ ಹಾಗೂ ರಾಮನಗರ ಭಾಗದ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಈ ಯೋಜನೆಯ ಹಿಂದೆ ಸ್ವಾರ್ಥ ಅಡಗಿರಬಹುದು ಎಂಬ ಅನುಮಾನವಿದೆ. ಒಬ್ಬ ನಿಸ್ವಾರ್ಥ ಮುಖ್ಯಮಂತ್ರಿ ಅಥವಾ ಆಡಳಿತಗಾರ ಸಾರ್ವಜನಿಕರ ಆಕ್ಷೇಪಣೆಗಳಿಗೆ ಸ್ಪಂದಿಸಬೇಕು. ರೈತರ ಮೇಲೆ ಬಲವಂತವಾಗಿ ಯೋಜನೆ ಹೇರಿಕೆ ಮಾಡುವುದು ಸರಿಯಲ್ಲ ಎಂದರು.

ಪಾರಂಪರಿಕ ಕಟ್ಟಡಗಳ ಧ್ವಂಸ ವಿಚಾರವಾಗಿ ಪ್ರತಿಕ್ರಿಯಿಸಿದ ಸದಾನಂದಗೌಡ, ಇಂತಹ ಕಟ್ಟಡಗಳು ರಾಜ್ಯದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಭಾಗವಾಗಿದ್ದು, ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ನಾಯಕರು, ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೂದಗಟ್ಟಿಯಲ್ಲಿ ೩೩ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ
ಎಚ್. ಕೆ. ಪಾಟೀಲರಿಗೆ ಮಂತ್ರಿಗಿರಿ ನೀಡದಿದ್ದರೆ ಸಚಿವರ ಕ್ಷೌರಸೇವೆ ಬಹಿಷ್ಕಾರ: ಎಚ್ಚರಿಕೆ