'ಗೃಹಲಕ್ಷ್ಮೀ ಹಣದಿಂದ ತಂದೆ-ತಾಯಿ ಆರೋಗ್ಯ ಕಾಳಜಿ ಸಾಧ್ಯವಾಯಿತು'

KannadaprabhaNewsNetwork | Updated : Apr 26 2025, 01:09 PM IST

ಸಾರಾಂಶ

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಕೃಷಿ ಗೋದಾಮಿನಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ನಡೆ ಗ್ರಾಪಂಗಳ ಕಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಫಲಾನುಭವಿಗಳು ಅನಿಸಿಕೆಗಳನ್ನು ಹಂಚಿಕೊಂಡರು.

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಕೃಷಿ ಗೋದಾಮಿನಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ನಡೆ ಗ್ರಾಪಂಗಳ ಕಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಫಲಾನುಭವಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ತಂಬ್ರಹಳ್ಳಿ ಗ್ರಾಮದ ಯುವತಿ ಆಯಿಶಾಬಾನು, ಗೃಹಲಕ್ಷ್ಮೀ ಹಣದಿಂದ ನನ್ನ ವಯಸ್ಸಾದ ತಂದೆ ತಾಯಿಗಳನ್ನು ಆಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಲು ಮತ್ತು ಔಷಧಿಗಳ ಖರ್ಚಿಗೆ ಈ ಹಣ ಸಹಾಯವಾಯಿತು ಎಂದು ಕಣ್ಣೀರಿಟ್ಟರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೆನೆದರು.

ಯುವಕ ಪಿ. ರಾಜಭಕ್ಷಿ, ನನ್ನ ಮನೆಯಲ್ಲಿ ಮೂರು ಜನರಿಗೆ ಗೃಹಲಕ್ಷ್ಮೀ ಹಣ ಬರುತ್ತಿರುವುದರಿಂದ ನಾನು ನನ್ನ ಸ್ವಂತ ಹೊಲದಲ್ಲಿ ಸಾಲವಿಲ್ಲದೆ ಭತ್ತ ಬೆಳೆಯಲು ಅನುಕೂಲವಾಯಿತು ಎಂದರು.

ಟಿಎಚ್‌ಎಂ ರುದ್ರೇಶ್ ಮಾತನಾಡಿ, ತಂಬ್ರಹಳ್ಳಿಯಿಂದ ಹಗರಿಬೊಮ್ಮನಹಳ್ಳಿಗೆ ಮತ್ತು ಹಡಗಲಿ, ಹೊಸಪೇಟೆಗೆ ಹೋಗಲು ಹೆಚ್ಚು ಬಸ್‌ ಬಿಡಬೇಕು. ಹಗರಿಬೊಮ್ಮನಹಳ್ಳಿಯಿಂದ ತಂಬ್ರಹಳ್ಳಿಗೆ ನಿರಂತರವಾಗಿ ಟ್ರಿಪ್ ಬಸ್‌ನ್ನು ಬಿಡಬೇಕು ಎಂದರು.

ಗ್ರಾಪಂ ಸದಸ್ಯ ಸಂಡೂರು ಮೆಹಬೂಬ್ ಮಾತನಾಡಿ, ಗ್ರಾಮದ ಮೂರನೇ ವಾರ್ಡ್‌ನಲ್ಲಿ ೭ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಹಣ ಬರುತ್ತಿಲ್ಲ, ಅದನ್ನು ಸರಿಪಡಿಸಿ ಫಲಾನುಭವಿಗಳಿಗೆ ಹಣ ಬರುವಂತೆ ಮಾಡಿ ಎಂದು ಕೋರಿದರು.

ಯುವತಿ ರೂಪ ಯಳಕಪ್ಪನವರ ಮಾತನಾಡಿ, ಸರ್ಕಾರ ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತವಾಗಿ ಓಡಾಡಲು ಅನುಕೂಲವಾಗಿದೆ. ಸಣ್ಣ ವ್ಯಾಪಾರಸ್ಥರಿಗೆ, ವಿದ್ಯಾರ್ಥಿನಿಯರಿಗೆ, ಕೂಲಿಕಾರ್ಮಿಕ ಮಹಿಳೆಯರಿಗೆ ತುಂಬ ಸಹಕಾರಿಯಾಗಿದೆ ಎಂದರು.

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ನೀಡುವ ಮೂಲಕ ಮಹಿಳೆಯರ ಆರ್ಥಿಕ ಶಕ್ತಿ ಬಲಪಡಿಸಿ ಉತ್ತಮ ಜೀವನಕ್ಕೆ ಅಡಿಪಾಯ ಹಾಕಿದೆ ಎಂದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಿ. ಪರಮೇಶ್ವರ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಿದ್ದು, ತಾಲೂಕಿನಲ್ಲಿ ಸದ್ಬಳಕೆಯಾಗುತ್ತಿದೆ ಎಂದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಗೌರಜ್ಜನವರ ಗಿರೀಶ್ ಮಾತನಾಡಿ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಗ್ಯಾರಂಟಿ ಯೋಜನೆಯ ಜಿಲ್ಲಾ ಸಮಿತಿ ಸದಸ್ಯ ಹೆಗ್ಡಾಳ್ ಪರುಶುರಾಮ, ಸದಸ್ಯ ಉಲುವತ್ತಿ ರಾಘವೇಂದ್ರ ಮಾತನಾಡಿದರು.

ಗ್ರಾಪಂ ಸದಸ್ಯರಾದ ಮೈಲಾರ ಶಿವಕುಮಾರ, ಕೆ. ಸಲೀಮಾಬೇಗಂ, ಸಪ್ಪರದ ಕಮಲಾಕ್ಷಿ, ಬಸಮ್ಮ, ತಾಪಂ ಮಾಜಿ ಸದಸ್ಯ ಪಿ. ಕೊಟ್ರೇಶ, ಪಿಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಸರ್ದಾರ ರಾಮಣ್ಣ, ವೆಂಕಟೇಶ, ದೊಡ್ಡಬಸಪ್ಪ, ವಿಎಸ್‌ಎಸ್‌ಎನ್ ಸಂಘದ ಉಪಾಧ್ಯಕ್ಷೆ ಹನುಮಂತಮ್ಮ, ನಿರ್ದೇಶಕ ಮೈನಳ್ಳಿ ಸೌಭಾಗ್ಯ, ರೆಡ್ಡಿ ಮಂಜುನಾಥ ಪಾಟೀಲ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಯುವ ಮುಖಂಡ ಹುಸೇನ್‌ಬಾಷಾ ಕಾರ್ಯಕ್ರಮ ನಿರ್ವಹಿಸಿದರು.

Share this article