ಗಣೇಶ್ ತಮ್ಮಡಿಹಳ್ಳಿ ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಜನಪ್ರಿಯ ಗೃಹಲಕ್ಷ್ಮಿ ಯೋಜನೆಗೆ ಜಿಲ್ಲೆಯಿಂದ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದವರ ಪೈಕಿಯೇ 17 ಸಾವಿರ ಮಂದಿ ಗೃಹಲಕ್ಷ್ಮಿಯರಾಗಲು ಇನ್ನೂ ಸಾಧ್ಯವಾಗಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 3.40 ಲಕ್ಷ ಮಂದಿ ಯೋಜನೆ ಫಲಾನುಭವಿಗಳಾಗಿದ್ದು, ಇವರ ಖಾತೆಗೆ ತಲಾ ₹2 ಸಾವಿರ ಹಾಕಲು ಅನುದಾನ ಬಿಡುಗಡೆಯಾಗಿತ್ತು. ಆದರೆ, ವಿವಿಧ ತಾಂತ್ರಿಕ ಕಾರಣಗಳಿಂದಾಗಿ 3.40 ಲಕ್ಷ ಮಂದಿ ಪೈಕಿ 3.23 ಲಕ್ಷ ಮಂದಿಗೆ ಮಾತ್ರವೇ 2 ಸಾವಿರ ರು. ತಲುಪಿದ್ದು, ಉಳಿದ 17 ಸಾವಿರ ಮಂದಿ ಗೃಹಲಕ್ಷ್ಮಿಯಿಂದ ವಂಚಿತರಾಗಿದ್ದಾರೆ. ಹಣ ಬಾರದಿರಲು ಕಾರಣವೇನು?: ಈಗಾಗಲೇ ಅರ್ಜಿ ಸಲ್ಲಿಸಿದ 3.40 ಲಕ್ಷ ಮಂದಿಯ ಪೈಕಿ 17 ಸಾವಿರ ಮಂದಿಗೆ ಅನುದಾನ ತಲುಪಿಲ್ಲ. ಇದಕ್ಕೆ ಮೂರು ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ. ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಹೆಸರು ಹೊಂದಾಣಿಕೆಯಾಗದೇ ಇರುವುದರಿಂದ, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದಿರುವುದು ಮತ್ತು ಪಡಿತರ ಪಡೆಯದೇ ಕೆವೈಸಿ ದಾಖಲಾಗಿ ಅಪ್‌ಡೇಟ್ ಮಾಡದಿರುವುದರಿಂದಲೂ ಗೃಹಲಕ್ಷ್ಮಿ ಫಲಾನುಭವಿಗಳಾಗಲು ಸಾಧ್ಯವಾಗಿಲ್ಲ. ಸರ್ವರ್ ಸಮಸ್ಯೆಯಿಂದ ವಿಳಂಬ: ಗೃಹಲಕ್ಷ್ಮಿ ಯೋಜನೆ ಆರಂಭವಾದ ಕೆವೈಸಿ ಮಾಡಿಸದ, ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸದ ಹಾಗೂ ಹೆಸರುಗಳ ಹೊಂದಾಣಿ ಆಗದ, ಪಡಿತರ ಚೀಟಿಯಲ್ಲಿ ಯಜಮಾನಿ ಆಗಿರದ ಮಹಿಳೆಯರು ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಈಗಾಗಲೇ ಸೇವಾ ಕೇಂದ್ರಗಳಿಗೆ ಮುಗಿ ಬೀಳುತ್ತಿದ್ದಾರೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಸಕಾಲದಲ್ಲಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ಬದಲಾವಣೆ ಮಾಡಿಕೊಂಡವರ ಹೆಸರುಗಳು ಅಪಡೇಟ್ ಆಗಿ, ಹೊಸ ಪಡಿತರ ಚೀಟಿ ಬಾರದೇ ಇರುವುದರಿಂದಲೂ ಗೃಹಲಕ್ಷ್ಮಿಗೆ ನೋಂದಣಿ ಸಾಧ್ಯವಾಗುತ್ತಿಲ್ಲ . ಇವೆಲ್ಲಾ ಸಮಸ್ಯೆಗಳಿಂದಾಗಿ 17 ಸಾವಿರ ಮಂದಿಗೆ ಗೃಹಲಕ್ಷ್ಮಿ ಭಾಗ್ಯ ಕೈಗೆಟುಕದಂತಾಗಿದೆ. ನೂರಾರು ಮಂದಿ ಗೃಹಲಕ್ಷ್ಮಿ ನೋಂದಣಿ ಸಾಧ್ಯವಾಗದೇ ಪ್ರತಿ ನಿತ್ಯವೂ ಪರದಾಡುತ್ತಿದ್ದಾರೆ. ಇಂಥವರು ಮುಂದೆ ಏನು ಮಾಡಬೇಕು ಎಂಬ ಗೊಂದಲ ಉಂಟಾಗಿದೆ. ಮೊದಲು ಬ್ಯಾಂಕ್ ಖಾತೆ ಆಧಾರ್ ಲಿಂಕ್ ಮಾಡಿಸಿ, ಪಡಿತರ ಚೀಟಿಯಲ್ಲಿ ಯಜಮಾನಿಯನ್ನು ಗುರುತಿಸಿಕೊಂಡು, ಹೆಸರು ವಿಳಾಸದ ಅಥವಾ ಬ್ಯಾಂಕ್ ಖಾತೆಯ ಮೊಬೈಲ್ ಸಂಖ್ಯೆಯ ಬದಲಾವಣೆಗಳಿದ್ದರೆ ಸರಿಪಡಿಸಿಕೊಳ್ಳಬೇಕು. ಈ ಮಾಹಿತಿ ಸರಿಯಾಗಿ ಅಪಡೇಟ್ ಆದ ಮೇಲೆ ಆಯಾ ತಾಲೂಕಿನ ಸಿಡಿಪಿಒ ಕಚೇರಿ ಅಥವಾ ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ತೆರಳಿ, ಅಲ್ಲಿನ ಗೃಹಲಕ್ಷ್ಮಿಗಾಗಿಯೇ ಸ್ಥಾಪಿಸಿರುವ ಕೌಂಟರ್‌ನಲ್ಲಿ ನೋಂದಣಿ ಕಾರ್ಯವನ್ನು ಮಾಡಿಸಿಕೊಳ್ಳಬೇಕು. ಹೀಗೆ ನೋಂದಣಿ ಮಾಡಿಸಿಕೊಂಡ ನಂತರ ಕನಿಷ್ಠ ಒಂದು ತಿಂಗಳಾದರೂ ಕಾದರೆ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು. ಒಂದು ತಿಂಗಳಾದ ನಂತರವೂ ಖಾತೆಗೆ 2 ಸಾವಿರ ಬಾರದಿದ್ದರೆ ಸಿಡಿಪಿಒ ಕಚೇರಿಗೆ ತೆರಳಿ ತಮ್ಮ ಅರ್ಜಿಯ ಸ್ಥಿತಿ ಏನಾಗಿದೆ ಎಂಬುದನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕಿದೆ. ಗೃಹಲಕ್ಷ್ಮಿ ನೋಂದಣಿಗೆ ಇರುವ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲೆಯ ತಾಲೂಕು ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅರ್ಜಿ ಸಲ್ಲಿಸಿ, ಹಣ ಬಾರದೇ ಇರುವವರ ಮನೆಗೆ ತೆರಳಿ ಏನೂ ಸಮಸ್ಯೆಯಾಗಿದೆ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಮಾಹಿತಿ. - - - ಕೋಟ್ ಮೊದಲ ಹಂತದಲ್ಲಿ 17 ಸಾವಿರ ಮಂದಿಗೆ ಹಣ ಪಾವತಿ ಆಗಿಲ್ಲ. ಅದಕ್ಕೆ ಕಾರಣವನ್ನು ಗುರುತಿಸಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಶೀಘ್ರವೇ ಅವರಿಗೂ ಹಣ ಪಾವತಿ ಆಗುತ್ತದೆ. ಎರಡನೇ ಹಂತದಲ್ಲಿ ಅರ್ಜಿದಾರರ ಸಂಖ್ಯೆ 3.51 ಲಕ್ಷಕ್ಕೆ ಏರಿಕೆಯಾಗಿದೆ, 11 ಸಾವಿರಕ್ಕೂ ಹೆಚ್ಚು ಮಂದಿ ಎರಡನೇ ಹಂತದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 3.51 ಅರ್ಹ ಅರ್ಜಿದಾರರ ಪೈಕಿ ಈಗಾಗಲೇ 3.46 ಲಕ್ಷ ಮಂದಿಯ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ. ಉಳಿದ 5 ಸಾವಿರ ಮಂದಿಗೂ ಸದ್ಯದಲ್ಲೆ ಹಣ ಜಮಾ ಆಗಲಿದೆ - ಡಾ. ಎಚ್.ಸಂತೋಷಕುಮಾರ್, ಪ್ರಭಾರ ಉಪನಿರ್ದೇಶಕ, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ. - - - -(ಸಾಂದರ್ಭಿಕ ಚಿತ್ರ)