ಆತ್ಮಭೂಷಣ್ ಕನ್ನಡಪ್ರಭ ವಾರ್ತೆ ಮಂಗಳೂರು ಆಯುಷ್ ಪ್ರವೇಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಎರಡನೇ ಸುತ್ತಿನ ಆಯ್ಕೆ ಪ್ರಕ್ರಿಯೆ ವೇಳೆ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳನ್ನು ಆಯ್ದುಕೊಳ್ಳುವ ಅವಕಾಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಿರಾಕರಿಸಿದೆ. ಇದರಿಂದಾಗಿ ಮೊದಲ ಸುತ್ತಿನಲ್ಲಿ ಸೀಟು ಸಿಗದೇ ಇರುವವರು ಕೂಡ ಬೇರೆ ಕಾಲೇಜು ಆಯ್ಕೆಗೆ ಅವಕಾಶ ಸಿಗದೆ ನಿರಾಸೆ ಪಡುವಂತಾಗಿದೆ. ಈ ಹಿಂದೆ ಆರಂಭದಲ್ಲೇ ನೀಟ್ ಪ್ರವೇಶ ವೆರಿಫಿಕೇಷನ್ ಸ್ಲಿಪ್‌ಗೆ ವಿದ್ಯಾರ್ಥಿಗಳು ಪರದಾಟ ನಡೆಸಿದ್ದರು. ಬಳಿಕ ಆಯುಷ್ ಕೌನ್ಸಿಲಿಂಗ್ ಫಲಿತಾಂಶವನ್ನೂ ವಿಳಂಬ ಮಾಡಲಾಗಿತ್ತು. ಇದೀಗ ಆಯುಷ್ ಸೀಟು ಹಂಚಿಕೆಗೆ ಹೊಸ ಕಾಲೇಜು ಆಯ್ಕೆಗೆ ಅವಕಾಶ ನಿರಾಕರಿಸುವ ಮೂಲಕ ಕೆಇಎ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸುವಂತೆ ಮಾಡಿದೆ. ಎಂಬಿಬಿಎಸ್, ಬಿಡಿಎಸ್ ಕೋರ್ಸ್‌ಗಳ ಪ್ರವೇಶ ವೇಳೆ ಎರಡನೇ ಸುತ್ತಿನಲ್ಲಿ ಬೇರೆ ಬೇರೆ ಕಾಲೇಜುಗಳ ಆಯ್ಕೆಗೆ ಅವಕಾಶ ನೀಡಲಾಗಿದೆ. ಆದರೆ ಆಯುಷ್ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇಂತಹ ಅವಕಾಶ ನೀಡದೆ ಕೆಇಎ ಅನ್ಯಾಯ ಎಸಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೆಇಎ ಪ್ರಕಾರ ಕಳೆದ 10 ವರ್ಷಗಳಿಂದ ಎರಡನೇ ಸುತ್ತಿನ ಸೀಟು ಹಂಚಿಕೆ ವೇಳೆ ಹೊಸ ಕಾಲೇಜು ಆಯ್ಕೆಗೆ ಅವಕಾಶ ನೀಡುವ ಕ್ರಮ ಇಲ್ಲ ಎನ್ನುತ್ತಿದೆ. ಆದರೆ ಕಾಲಕಾಲಕ್ಕೆ ತನ್ನ ನಿಯಮದಲ್ಲಿ ಬದಲಾವಣೆ ಮಾಡುತ್ತಾ, ಈ ಬಾರಿ ಎಂಬಿಬಿಎಸ್‌ಗೆ ಇಂತಹ ಅವಕಾಶ ಕಲ್ಪಿಸಿದೆ ಎನ್ನುವುದು ಆಯುಷ್ ವಿದ್ಯಾರ್ಥಿಗಳ ಆರೋಪ. ಪ್ರಥಮ ನೋಟಿಫಿಕೇಷನ್‌ನಲ್ಲಿ ಆಯುಷ್ ಪ್ರವೇಶಕ್ಕೆ 2ನೇ ಸುತ್ತಿನಲ್ಲಿ ಹೊಸ ಕಾಲೇಜು ಆಯ್ಕೆ ಮಾಡಬಹುದು ಎಂದು ತಿಳಿಸಲಾಗಿತ್ತು. ಆದರೆ ಈಗ ಮಾತ್ರ ಅಂತಹ ಅವಕಾಶವೇ ಇಲ್ಲ ಎನ್ನುತ್ತಿದೆ ಕೆಇಎ. ಹೀಗಾಗಿ ಈಗಾಗಲೇ ನಮೂದಿಸಿರುವ ಕಾಲೇಜುಗಳಲ್ಲಿ ಮೆರಿಟ್ ಸೀಟು ಸಿಕ್ಕಿದರೆ ಅದೃಷ್ಟ, ಇಲ್ಲದಿದ್ದರೆ ಹೊಸ ಕಾಲೇಜು ನಮೂದಿಸಲು ಮತ್ತೆ ಅವಕಾಶ ಇಲ್ಲದಿರುವುದು ವಿಪರ್ಯಾಸ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಮೋಕ್ ಸೀಟು ಹಂಚಿಕೆಯೂ ಇಲ್ಲ: ಎಂಬಿಬಿಎಸ್‌ಗೆ ಮೋಕ್(ಅಣಕು) ಸೀಟು ಹಂಚಿಕೆ ನಡೆಸಿದ್ದ ಕೆಇಎ, ಆಯುಷ್‌ಗೆ ಮಾತ್ರ ಅಂತಹ ಯಾವುದೇ ಪ್ರಯತ್ನ ಮಾಡಿಲ್ಲ. ಮೋಕ್ ಸೀಟು ಹಂಚಿಕೆ ಪ್ರಕಟಿಸಿದ್ದರೆ, ಆರಂಭಿಕ ಹಂತದಲ್ಲೇ ಸೀಟು ಹಂಚಿಕೆಯ ಬಗ್ಗೆ ಲೆಕ್ಕಾಚಾರ ಹಾಕಲು ವಿದ್ಯಾರ್ಥಿಗಳಿಗೆ ಸುಲಭವಾಗುತ್ತಿತ್ತು. ಅಂತಹ ಸಾಧ್ಯತೆ ಇಲ್ಲದೆ ಆಯುಷ್ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ಮೆನೇಜ್‌ಮೆಂಟ್ ದುಬಾರಿ ಸೀಟು ಗತಿ?: ಈಗ 2ನೇ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಹೊಸ ಕಾಲೇಜುಗಳನ್ನು ಆಯ್ಕೆ ಮಾಡಲು ಅವಕಾಶ ನೀಡದೇ ಇದ್ದರೆ ಮೆರಿಟ್ ಸೀಟು ಸಿಗದೇ ಇರುವ ಆಯುಷ್ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮೆನೇಜ್‌ಮೆಂಟ್ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕಾಗುತ್ತದೆ. ಇದು ದುಬಾರಿ ಶುಲ್ಕ ತೆತ್ತು ಮೆನೇಜ್‌ಮೆಂಟ್ ಸೀಟಿಗೆ ಹೋಗಬೇಕಾದ ಸಂದರ್ಭವನ್ನು ಕೆಇಎ ಸೃಷ್ಟಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಸೀಟು ಹಂಚಿಕೆ ಪ್ರಕ್ರಿಯೆ ಇಂದೇ ಅಂತಿಮ ಆಯುಷ್ ವಿಭಾಗದ ಸೀಟು ಹಂಚಿಕೆಗೆ ಸಂಬಂಧಿಸಿದ 2ನೇ ಹಂತದ ಪ್ರಕ್ರಿಯೆ ಅ.21ರಂದು ಬೆಳಗ್ಗೆ 11 ಗಂಟೆಗೆ ಕೊನೆಗೊಳ್ಳಲಿದೆ. ಶನಿವಾರ ರಾತ್ರಿಯೇ ಸೀಟು ಹಂಚಿಕೆಯ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ. ಬಳಿಕ ಶುಲ್ಕ ಪಾವತಿ, ಕಾಲೇಜು ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂದು ಕೆಇಎ ಮೂಲಗಳು ತಿಳಿಸಿವೆ.