ಮಂಡ್ಯ: ರಾಷ್ಟ್ರದಲ್ಲಿರುವ ಜಲವಿವಾದಗಳ ಸಂಘರ್ಷ ಪರಿಹಾರಕ್ಕೆ ರಾಷ್ಟ್ರೀಯ ಜಲನೀತಿಯೊಂದೇ ಪರಿಹಾರ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು. ಶುಕ್ರವಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಏರ್ಪಡಿಸಿದ್ದ ನಿರಂತರ ಧರಣಿಯಲ್ಲಿ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿ ಮಾತನಾಡಿದರು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಆದೇಶಗಳು ಅವೈಜ್ಞಾನಿಕವಾಗಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮಧ್ಯಪ್ರವೇಶಿಸಿ ಪರಿಹಾರ ದೊರಕಿಸಲು ಮುಂದಾಗಬೇಕು. ಸಂಕಷ್ಟದ ಸನ್ನಿವೇಶದಲ್ಲಿ ಪಾಲಿಸಬೇಕಾದ ಸಂಕಷ್ಟ ಸೂತ್ರ ಶೀಘ್ರ ರಚನೆಯಾಗುವಂತೆ ತ್ವರಿತ ಕ್ರಮ ವಹಿಸಿ ಯಾವ ರಾಜ್ಯದ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಿದೆ. ದೇಶದ ಜಲವಿವಾದಗಳಿಗೆ ಪರಿಹಾರ ಸೂಚಿಸಲು ರಾಷ್ಟ್ರೀಯ ಜಲ ನೀತಿ ರೂಪಿಸಿ ಜಾರಿಗೊಳಿಸುವಂತೆ ಒತ್ತಾಯಿಸಿದರು. ಕಾವೇರಿ ನೀರನ್ನು ಸಂರಕ್ಷಣೆ ಮಾಡುವ ವಿಚಾರದಲ್ಲಿ ರಾಜ್ಯಸರ್ಕಾರ ಇದುವರೆಗೆ ಸ್ವಷ್ಟ ನಿಲುವು ತಾಳುವಲ್ಲಿ ವಿಫಲವಾಗಿದೆ. ಕಾನೂನು ಹೋರಾಟದಿಂದ ದೂರ ಉಳಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನವಾಗಿ ನೀರು ಹರಿಸುತ್ತಾ ನಿರ್ಲಕ್ಷ್ಯ ವಹಿಸಿದ್ದಾರೆ. ನ.೧ರೊಳಗೆ ವಿಧಾನಮಂಡಲದ ಜಂಟಿ ಅಧಿವೇಶನ ಕರೆದು ನೀರು ಬಿಡುವುದಿಲ್ಲ ಎಂಬ ಒಂದು ಸಾಲಿನ ನಿರ್ಣಯವನ್ನು ಕೈಗೊಂಡು ಸುಗ್ರೀವಾಜ್ಞೆ ಹೊರಡಿಸಬೇಕು, ಬಿಕ್ಕಟ್ಟು ಸೃಷ್ಟಿಯಾದರೆ ಅದೇ ಕಾನೂನಾಗಿ ಪರಿವರ್ತನೆಗೊಳ್ಳಲಿದೆ ಹಾಗಾಗಿ ದೃಢ ಹೆಜ್ಜೆ ಇಡಬೇಕೆಂದು ಆಗ್ರಹಪಡಿಸಿದರು. ದಕ್ಷಿಣದ ಕಾವೇರಿ, ಉತ್ತರದ ಕೃಷ್ಣ ಕನ್ನಡಿಗರಿಗೆ ಎರಡು ಕಣ್ಣು ಇದ್ದಂತೆ, ಬೆಂಗಳೂರಿನ ಜನತೆಗೆ ನೀರುಣಿಸುವ ಕಾವೇರಿಯ ಋಣಭಾರ ಮುಖ್ಯಮಂತ್ರಿ ಸೇರಿ ಚುನಾಯಿತ ಜನಪ್ರತಿನಿಧಿಗಳಿಂದ ಹಿಡಿದು ಸಾಮಾನ್ಯ ಜನರ ಮೇಲಿದೆ. ಇದನ್ನು ಆಳುವವರು ಅರ್ಥಮಾಡಿಕೊಳ್ಳಬೇಕು. ಕಾವೇರಿ ಮಾತೆಗೆ ಅನ್ಯಾಯ ಆದರೆ ಕರುನಾಡಿಗೆ ಅನ್ಯಾಯ ಆದಂತೆ, ಇಂತಹ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾದದ್ದು ಸರ್ಕಾರದ ಜವಾಬ್ದಾರಿ, ಆದರೆ ಬರಗಾಲದ ಪರಿಸ್ಥಿತಿಯಲ್ಲಿ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ನಾಡಿನ ಜನತೆಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ನೀರು ಉಳಿಸಿಕೊಳ್ಳಲು ಹೋರಾಟ ಮಾಡಲಾಗುತ್ತಿದೆ. ಆದರೆ ತಮಿಳುನಾಡು ಮೂರನೇ ಬೆಳೆ ಬೆಳೆಯಲು ನೀರು ಬಿಡುವಂತೆ ಒತ್ತಡ ಹಾಕುತ್ತಿದೆ. ನೆರೆ ರಾಜ್ಯಕ್ಕೆ ಮನುಷ್ಯತ್ವವೇ ಇಲ್ಲವಾಗಿದೆ. ಕಾವೇರಿ ನದಿ ನೀರು ಪ್ರಾಧಿಕಾರ ದೆಹಲಿಯಲ್ಲಿ ಕುಳಿತು ಪೆನ್ನು ಹಿಡಿದು ಆದೇಶ ಮಾಡುತ್ತಿದೆ. ಕಾವೇರಿ ಕೊಳ್ಳದ ಜಲಾಶಯಗಳ ವಸ್ತು ಸ್ಥಿತಿಯನ್ನು ಅಧ್ಯಯನ ಮಾಡಲು ಮುಂದಾಗದೆ ನೀರು ಬಿಡಿ ಎಂದು ಹೇಳುತ್ತಿರುವುದು ಅಮಾನವೀಯ ವರ್ತನೆ ಎಂದು ಪ್ರಾಧಿಕಾರದ ವಿರುದ್ಧ ಕಿಡಿಕಾರಿದರು.