ಅಂಧ ವಧುವಿಗೆ ಬಾಳುಕೊಟ್ಟ ವರ

KannadaprabhaNewsNetwork |  
Published : Feb 21, 2026, 02:30 AM IST
೨೦ಕೆಪಿಎಲ್‌24, ಎ ಅಂಧಳನ್ನು ಮದುವೆಯಾಗಿರವುದು | Kannada Prabha

ಸಾರಾಂಶ

ಹುಟ್ಟುತ್ತಲೆ ಅಂಧಳಾಗಿರುವ ಚಂದ್ರಿಕಾಳನ್ನು ಯಲಬುರ್ಗಾದ ಗಣೇಶ ಎಂಬ ಯುವಕ ಮದುವೆಯಾಗುವ ಮೂಲಕ ಆಕೆಯ ಮುಂದಿನ ಬದುಕಿನಲ್ಲಿ ಬೆಳಕಿನ ಭರವಸೆಯಾಗಿ ಬಂದಿದ್ದಾನೆ

ಕೊಪ್ಪಳ: ಭಾಗ್ಯನಗರ ಪಟ್ಟಣದ ಖೋಡೆ ಕಲ್ಯಾಣ ಮಂಟಪದಲ್ಲಿ ಅಂಧ ವಧುವನ್ನು ವರನೊಬ್ಬ ವರಿಸುವ ಮೂಲಕ ಆಕೆಯ ಬಾಳಿಗೆ ಬೆಳಕಾಗಿದ್ದಾರೆ.

ಭಾಗ್ಯನಗರ ಪಟ್ಟಣದ ಗಂಗಮ್ಮ ಲಕ್ಷ್ಮಣಸಾ ಖೋಡೆ ಕಲ್ಯಾಣ ಮಂಟಪದಲ್ಲಿ ನಡೆದ ಅಪರೂಪದ ಮದುವೆಗೆ ಇಡೀ ಎಸ್‌ಎಸ್‌ಕೆ ಸಮಾಜವೇ ಸಾಕ್ಷಿಯಾಗಿ ಸಂಭ್ರಮದಿಂದ ಪಾಲ್ಗೊಂಡಿತ್ತು. ಭಾಗ್ಯನಗರ ಪಟ್ಟಣದ ನಿವಾಸಿಯಾಗಿರುವ ಎಸ್‌ಎಸ್‌ಕೆ ಸಮಾಜದ ಚಂದ್ರಿಕಾ ಅಂಟಾಳಮರದ ಎಂಬ ಯುವತಿ ಹಾಗೂ ಯಲಬುರ್ಗಾ ಪಟ್ಟಣದ ಎಸ್‌ಎಸ್‌ಕೆ ಸಮಾಜದ ಗಣೇಶ ಎಂಬ ಯುವಕನೊಂದಿಗೆ ನಡೆದ ಕಲ್ಯಾಣಕ್ಕೆ ಖೋಡೆ ಕಲ್ಯಾಣ ಮಂಟಪ ಸಾಕ್ಷಿಯಾಯಿತು.

ಹುಟ್ಟುತ್ತಲೆ ಅಂಧಳಾಗಿರುವ ಚಂದ್ರಿಕಾಳನ್ನು ಯಲಬುರ್ಗಾದ ಗಣೇಶ ಎಂಬ ಯುವಕ ಮದುವೆಯಾಗುವ ಮೂಲಕ ಆಕೆಯ ಮುಂದಿನ ಬದುಕಿನಲ್ಲಿ ಬೆಳಕಿನ ಭರವಸೆಯಾಗಿ ಬಂದಿದ್ದಾನೆ. ಅಂಧಳಾಗಿರುವ ಚಂದ್ರಿಕಾ ತಾನು ಎಂದೂ ಅಂಧಳು, ತನ್ನಿಂದ ಏನೂ ಆಗುವುದಿಲ್ಲ ಎಂದುಕೊಂಡವಳಲ್ಲ. ಬದಲಾಗಿ ತಂದೆ ತಾಯಿ, ಸಹೋದರಿಯ ಸಹಕಾರದಿಂದ ಸಂಗೀತದಲ್ಲಿ ಮಾಸ್ಟರ್‌ ಡಿಗ್ರಿ ಪಡೆದುಕೊಂಡಿದ್ದಾಳೆ. ಅಲ್ಲದೆ, ಬಿಸಿಎಂ ಇಲಾಖೆಯಲ್ಲಿ ಚಂದ್ರಿಕಾ ದ್ವಿತೀಯ ದರ್ಜೆ ಸಹಾಯಕಿ ಹುದ್ದೆ ಗಿಟ್ಟಿಸಿಕೊಂಡಿದ್ದಾಳೆ. ಈ ಮೂಲಕ ಭೌತಿಕವಾಗಿ ಕಣ್ಣು ಕಾಣದಿದ್ದರೂ ಬದುಕಿನಲ್ಲಿ ಬೆಳಕನ್ನು ಕಂಡುಕೊಂಡಿದ್ದಾಳೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ. ಅಂಧೆಯಾಗಿರುವ ತನಗೂ ಮದುವೆಯಾಗುತ್ತಿರೋದಕ್ಕೆ ಚಂದ್ರಿಕಾ ತುಂಬಾ ಖುಷಿಯಾಗಿದ್ದಾಳೆ. ತನಗೊಂದು ಬಾಳು ಕೊಡಲು ಗಣೇಶ ಮುಂದೆ ಬಂದಿರೋದಕ್ಕೆ ಖುಷಿ ವ್ಯಕ್ತಪಡಿಸಿದ್ದಾಳೆ.

ಅಂಧಳಾಗಿರುವ ಚಂದ್ರಿಕಾಳನ್ನು ಯಲಬುರ್ಗಾದ ಗಣೇಶ ಎಂಬ ಯುವಕ ಸಂಪ್ರದಾಯದ ಪ್ರಕಾರ ಕನ್ಯೆ ನೋಡಲು ಬಂದಿದ್ದಾನೆ. ಯುವತಿ ಅಂಧೆ ಎಂದು ಗೊತ್ತಾಗಿದೆ. ಆ ಬಳಿಕ ಚಂದ್ರಿಕಾಳನ್ನು ತಾನು ಮದುವೆಯಾಗಿ ಆಕೆಯ ಮುಂದಿನ ಬದುಕಿನ ಜತೆಗೆ ಹೆಜ್ಜೆ ಹಾಕೋದಾಗಿ ಗಣೇಶ ನಿರ್ಧರಿಸಿ ಹಿರಿಯರಿಗೆ ಹೇಳಿದ್ದಾನೆ. ಹುಡುಗನ ಒಪ್ಪಿಗೆಯಂತೆ ಚಂದ್ರಿಕಾಳನ್ನು ಗಣೇಶನಿಗೆ ಕೊಟ್ಟು ಮದುವೆ ಮಾಡಲು ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ. ಅದರಂತೆ ಭಾಗ್ಯನಗರದ ಗಂಗಮ್ಮ ಲಕ್ಷ್ಮಣಸಾ ಖೋಡೆ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರು, ಸಂಬಂಧಿಕರು, ಎಸ್‌ಎಸ್‌ಕೆ ಸಮಾಜದವರು ಖುಷಿಯಿಂದ ಶಾಸ್ತ್ರೋಕ್ತವಾಗಿ ಇಬ್ಬರಿಗೂ ಮದುವೆ ಮಾಡಿದ್ದಾರೆ. ಈ ಮೂಲಕ ವಿಶೇಷ ಮದುವೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ.

ಮೊದಲು ಭಾಗ್ಯನಗರಕ್ಕೆ ಕನ್ಯೆ ನೋಡಲು ಬಂದಿದ್ದೆ. ಕನ್ಯೆ ನೋಡಲು ಬಂದಾಗಲೇ ಚಂದ್ರಿಕಾಳಿಗೆ ಎರಡೂ ಕಣ್ಣು ಕಾಣುವುದಿಲ್ಲ. ಹುಟ್ಟುತ್ತಲೇ ಕುರುಡು ಎಂಬ ವಿಷಯ ಗೊತ್ತಾಗಿದೆ. ಆದರೆ ಅದರಿಂದ ನನಗೇನೂ ಅನ್ನಿಸಲಿಲ್ಲ. ಆಕೆಗೊಂದು ಬಾಳು ಕೊಡಬೇಕು ಎಂದು ಅನಿಸಿತು. ಹೀಗಾಗಿ ಅಂಧಳಾಗಿದ್ದರೂ ಪರವಾಗಿಲ್ಲ ಚಂದ್ರಿಕಾಳನ್ನೇ ಮದುವೆಯಾಗುವೆ ಎಂದು ಮನೆಯವರಿಗೆ, ಹಿರಿಯರಿಗೆ ತಿಳಿಸಿದೆ. ನಾನು ಮದುವೆಗೆ ಒಪ್ಪಿದ್ದರಿಂದ ಮದುವೆಯಾಗುತ್ತಿದೆ ಎಂದು ಚಂದ್ರಿಕಾಳನ್ನು ವರಿಸಿದ ವರ ಗಣೇಶ ತಿಳಿಸಿದ್ದಾರೆ.

ನಾನು ಅಂಧಳಾಗಿದ್ದರೂ ಸಹ ನನ್ನ ಕುಟುಂಬದವರ, ಸಹೋದರಿಯ ಬೆಂಬಲದೊಂದಿಗೆ ಶಿಕ್ಷಣ ಪಡೆದಿರುವೆ.ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಕೆಲಸ ಮಾಡುತ್ತಿರುವೆ. ನಾನು ಅಂಧಳೆಂದು ಗೊತ್ತಿದ್ದರೂ ನನ್ನನ್ನು ಗಣೇಶ ಮದುವೆಯಾಗುತ್ತಿದ್ದಾರೆ. ಇದರಿಂದ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಅಂಧವಧು ಚಂದ್ರಿಕಾ ತಿಳಿಸಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುತ್ತೋಲೆ ಇಲ್ಲದೇ ಕೈತೋಟದ ಸಸಿಗಳ ಹಣ ಪಾವತಿಗೆ ವಿರೋಧ
ಗುತ್ತಿಗೆದಾರರ ಬಾಕಿ ಹಣಕ್ಕಾಗಿ ಮಾ. 6ರಂದು ಬೃಹತ್ ಪ್ರತಿಭಟನೆ