ರೋಣ: ಅಂಗನವಾಡಿ ಬಳಿ ಕೈತೋಟ ನಿರ್ಮಿಸಲು ಸರ್ಕಾರದಿಂದ ಬಿಡುಗಡೆಯಾದ ₹5000 ಹಣವನ್ನು ಟೆಂಡರ್ ಕರೆಯದೇ, ಸರ್ಕಾರ ಸುತ್ತೋಲೆಯೂ ಇಲ್ಲದೆ ಒಂದೇ ಬಾರಿ ಹಣ ಪಾವತಿಸುವಂತೆ ಶುಕ್ರವಾರ ಪಟ್ಟಣದ ಸಿಡಿಪಿಒ ಶಿವಗಂಗಮ್ಮ ಆದೇಶಿಸಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಸಿಐಟಿಯು ಸಂಘಟನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.
ಈ ಹಣವನ್ನು 2 ವರ್ಷಗಳಲ್ಲಿ ಖರ್ಚು ಮಾಡಬೇಕೆಂಬ ನಿಯಮವಿದೆ. ಆದರೆ ಸಿಡಿಪಿಒ ಶಿವಗಂಗಮ್ಮ ಅವರು, ತಮ್ಮ ಮೇಲಧಿಕಾರಿಗಳು ಮೌಖಿಕವಾಗಿ ಸೂಚಿಸಿದ್ದಾರೆಂದು ಪೋಷಣ ವಾಟಿಕ ಅನುದಾನದ ₹5 ಸಾವಿರ ಒಂದೇ ಬಾರಿಗೆ ಸಸಿ ಪಡೆದು ಪಾವತಿಸಬೇಕು ಎಂದು ಸೂಚಿಸಿದ್ದಲ್ಲದೇ, ಸಸಿಗಳನ್ನು ಸಹ ಗೋಕಾಕ್ ಮೂಲದ ವ್ಯಾಪಾರಸ್ಥರಿಂದಲೇ ಖರೀದಿಸಬೇಕು ಎಂದು ಸ್ಥಳಕ್ಕೆ ವ್ಯಾಪಾರಸ್ಥರನ್ನು ಕರೆಯಿಸಿಲ್ಲದೇ ಮಾವು, ಪೇರಲ, ಚಿಕ್ಕು, ಕರಿಬೇವು ಮತ್ತು ನುಗ್ಗೆ ಸಸಿಗಳು, ಗೊಬ್ಬರ ಮಾರಾಟಕ್ಕೆ ಮುಂದಾಗಿದ್ದರು.
ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದ್ದಲ್ಲೇ, ನಾನಾ ರೀತಿಯ ಸಂಶಯ ಮೂಡಿದವು. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಐಟಿಯು ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ ಅವರು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿ, ಅಂಗನವಾಡಿಗಳಲ್ಲಿ ತೋಟ ನಿರ್ಮಾಣಕ್ಕೆ ಬೇಕಾದ ಸಸಿ, ಬೀಜ, ಗೊಬ್ಬರ ಖರೀದಿಗೆ ಕಾಯ್ದಿರಿಸಿ ₹5 ಸಾವಿರಗಳನ್ನು 2 ವರ್ಷದವರೆಗೂ ಖರ್ಚು ಮಾಡಬಹುದು ಎಂಬ ನಿಯಮವಿದೆ.ಆದರೆ ನೀವು ಒಂದೇ ಬಾರಿಗ ಪಾವತಿಸುವಂತೆ ಮತ್ತು ಯಾವುದೇ ಲಿಖಿತ ಆದೇಶವನ್ನು ನೀಡದೇ ಕೇವಲ ಮೌಖಿಕವಾಗಿ ಸೂಚಿಸಿದರೇ, ಮುಂದೊಂದು ದಿನ ಈ ಬಗ್ಗೆ ಮಾಹಿತಿ ನೀಡಿಲು ಅಂಗನವಾಡಿ ಕಾರ್ಯಕರ್ತೆಯರಿಗೆ ತಾಂತ್ರಿಕ ತೊಂದರೆಯಾಗುವುದರ ಜತೆಗೆ ಸಮಸ್ಯೆ ಸುಳಿಯಲ್ಲಿ ಸಿಲುಕಿಸಿದಂತಾಗುತ್ತದೆ. ಮೊದಲು ಅಂಗನವಾಡಿಗಳಿಗೆ ಸಮರ್ಪಕ ನೀರು ಪೂರೈಸಿ. ತೋಟ ನಿರ್ಮಾಣಕ್ಕೆ ಅಗತ್ಯ ಜಾಗ ಇದೆಯೇ ಎಂಬುದನ್ನು ಪರಿಶೀಲಿಸಿ. ಈ ಬಗ್ಗೆ ಲಿಖಿತ ಆದೇಶ ನೀಡುವಂತೆ ಆಗ್ರಹಿಸಿದರು. ಈ ವೇಳೆ ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು.
ಮೇಲಧಿಕಾರಿಗಳಿಗೆ ದೂರು:
ಸಭೆಯಲ್ಲಿ ರೋಣ ಮತ್ತು ಗಜೇಂದ್ರಗಡ ತಾಲೂಕಿನ ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಉಪಸ್ಥಿತರಿದ್ದರು.