ಮುಳವಾಡದಲ್ಲಿ ಕ್ಯಾಂಪಾ ಕೋಲಾ ಘಟಕಕ್ಕೆ ಭೂಮಿಪೂಜೆ

KannadaprabhaNewsNetwork |  
Published : Nov 17, 2026, 03:00 AM IST
ಮುಳವಾಡದಲ್ಲಿ ₹1,652 ಕೋಟಿ ವೆಚ್ಚದ ಕ್ಯಾಂಪಾ ಕೋಲಾ ಘಟಕಕ್ಕೆ ಭೂಮಿಪೂಜೆ | Kannada Prabha

ಸಾರಾಂಶ

ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಕೊಲ್ಹಾರ ತಾಲೂಕಿನ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ₹1,652 ಕೋಟಿ ವೆಚ್ಚದಲ್ಲಿ ಸ್ಥಾಪನೆಯಾಗುವ ಕ್ಯಾಂಪಾ ಕೋಲಾ ಪಾನೀಯ ಉತ್ಪಾದನಾ ಘಟಕಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಕೊಲ್ಹಾರ ತಾಲೂಕಿನ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ₹1,652 ಕೋಟಿ ವೆಚ್ಚದಲ್ಲಿ ಸ್ಥಾಪನೆಯಾಗುವ ಕ್ಯಾಂಪಾ ಕೋಲಾ ಪಾನೀಯ ಉತ್ಪಾದನಾ ಘಟಕಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಲಾಯಿತು. ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಎಫ್‌ಎಂಸಿಜಿ ವಿಭಾಗವಾದ ರಿಲಾಯನ್ಸ್ ಕಂಜೂಮರ್‌ ಪ್ರೊಡಕ್ಟ್‌ ಲಿಮಿಟೆಡ್ (ಆರ್‌ಸಿಪಿಎಲ್)ನಿಂದ ಕೆಐಎಡಿಬಿ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಈ ಹಸಿರು ಕ್ಷೇತ್ರದ ಉತ್ಪಾದನಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಚಾಲನೆ ನೀಡಿದರು.

ಈ ವೇಳೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಮುಳವಾಡ ಕೈಗಾರಿಕಾ ಪ್ರದೇಶವಾಗಿದ್ದರೂ ವಿವಿಧ ಕಾರಣಗಳಿಂದ ಈವರೆಗೆ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿರಲಿಲ್ಲ. ಇದೀಗ ರಿಲಾಯನ್ಸ್ ಸಂಸ್ಥೆಯ ಕ್ಯಾಂಪಾ ಕೋಲಾ ಘಟಕವು ಸುಮಾರು ₹1,652 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿರುವುದು ಸಂತಸ ತಂದಿದೆ. 100 ಎಕರೆ ವಿಸ್ತೀರ್ಣದಲ್ಲಿ ಸ್ಥಾಪನೆಯಾಗುವ ಈ ಕಂಪನಿಯಲ್ಲಿ 2000 ಉದ್ಯೋಗಾವಕಾಶಗಳು ಸಿಗಲಿದ್ದು, ಮುಂದೆ ಈ ಭಾಗದಲ್ಲಿ ಬೃಹತ್ ಕೈಗಾರಿಕಾ ಹಬ್ ಸ್ಥಾಪಿಸುವ ಉದ್ದೇಶವಿದೆ. ಸುಮಾರು 10 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಸ್ಥಳೀಯರಿಗೆ ಖಾಯಂ ಉದ್ಯೋಗ ನೀಡುವುದರ ಜತೆಗೆ ಲಿಂಬೆ, ದಾಳಿಂಬೆಯಂತಹ ಸ್ಥಳೀಯ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಪಾನೀಯ ತಯಾರಿಸುವ ಮೂಲಕ ರೈತರಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.ಹೆಚ್ಚಿನ ಕೈಗಾರಿಕೆಗಳು ಬೆಂಗಳೂರಿನ ಸುತ್ತಲಿನ ಪ್ರದೇಶಗಳಲ್ಲೇ ಹೂಡಿಕೆ ಮಾಡಲು ಆಸಕ್ತಿ ತೋರುತ್ತವೆ. ಹೀಗಾಗಿ, ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕೈಗಾರಿಕೆಗಳನ್ನು ತರಲು ಸವಾಲುಗಳಿವೆ. ಆದರೂ, ಕಳೆದ ಮೂರು ವರ್ಷಗಳಲ್ಲಿ ಟೆರಾ ಸರ್ಕ್ಯೂಟ್ ಪಿಸಿಬಿ, ಜನಿತ್ ಎನರ್ಜಿ, ಹೈಟೆಕ್ ಪೈಪ್, ಸರ್ವೋಟೆಕ್ ಪವರ್ ಸಿಸ್ಟಮ್ಸ್, ಮೆಟಾ, ಟೋಂಬೊ ಎನರ್ಜಿ, ಯುವ್ಹೆಲರಿ ಮೋಟರ್ಸ್, ಸುಜಲಾನ್, ವಿಂಗ್ಸ್ ವಿಟಾರಾ ಹಾಗೂ ಎಜಾಕಿಯಾ ವೈರಿಂಗ್ ಕಂಪನಿ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ ಎಂದರು.ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಕ್ಯಾಂಪಾ ಕೋಲಾ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತಿರುವುದು ಈ ಭಾಗದ ಬಹುದಿನಗಳ ಕನಸು ನನಸಾದಂತಾಗಿದೆ. ಬಂಜರು ಭೂಮಿಯಲ್ಲಿ ಕೈಗಾರಿಕಾ ಕ್ರಾಂತಿ ಆಗಬೇಕು ಎಂಬ ಉದ್ದೇಶದಿಂದ ಸಾವಿರಾರು ಎಕರೆಯಲ್ಲಿ ಕೈಗಾರಿಕಾ ವಲಯ ಸ್ಥಾಪನೆಯಾಗುತ್ತಿದ್ದು, ಭೂಮಿ ನೀಡಿದ ಮುಳವಾಡದ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಿಲಾಯನ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಬೃಹತ್ ಉದ್ಯಮ ಸ್ಥಾಪನೆಗೆ ಕಾರಣರಾದ ಸಚಿವ ಎಂ.ಬಿ.ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ಆಲಮಟ್ಟಿ ಯೋಜನೆಗಾಗಿ ಅವಿಭಜಿತ ಬಸವನ ಬಾಗೇವಾಡಿ ತಾಲೂಕು ದೊಡ್ಡ ತ್ಯಾಗ ಮಾಡಿದೆ. ಹಾಗಾಗಿ, ಕ್ಯಾಂಪಾ ಕೋಲಾ ಸಂಸ್ಥೆಯು ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಸ್ಥಳೀಯರಿಗೆ ಆದ್ಯತೆ ಮೇರೆಗೆ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿ, ಲಿಂಬೆ ಹಾಗೂ ದಾಳಿಂಬೆಯಿಂದ ಪಾನೀಯಗಳನ್ನು ತಯಾರಿಸುವ ಮೂಲಕ ಸ್ಥಳೀಯ ರೈತರಿಗೂ ಅನುಕೂಲ ಕಲ್ಪಿಸಬೇಕು. ಈ ಘಟಕ ಸ್ಥಾಪನೆಗೆ ನಮ್ಮೆಲ್ಲರ ಸಂಪೂರ್ಣ ಸ್ವಾಗತವಿದೆ ಎಂದರು.ಕ್ಯಾಂಪಾ ಕೋಲಾದ ಕಾರ್ಯನಿರ್ವಾಹಕ ನಿರ್ದೇಶಕ ಕೇತನ ಮೋದಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಪಾನೀಯ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತಿರುವುದು ಸಂತಸದ ಸಂಗತಿ. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದಕ್ಕೆ ಆದ್ಯತೆ ನೀಡಲಾಗುವುದು. ಸಚಿವರು, ಶಾಸಕರು ಹಾಗೂ ಜಿಲ್ಲೆಯ ಜನತೆಯ ಸಹಕಾರದೊಂದಿಗೆ ಇಲ್ಲಿ ಉತ್ತಮ ಕೈಗಾರಿಕಾ ಘಟಕ ಸ್ಥಾಪಿಸುವ ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಕ್ಯಾಂಪಾ ಕೋಲಾ ಕಂಪನಿ ಉಪಾಧ್ಯಕ್ಷ ಅರ್ಪನ್ ಬಸು, ಕೈಗಾರಿಕಾ ಇಲಾಖೆ ಅಧಿಕಾರಿಗಳಾದ ಗೋವಿಂದರೆಡ್ಡಿ, ಶಂಕರ ರಾಠೋಡ, ಎಸ್ಪಿ ಲಕ್ಷ್ಮಣ ನಿಂಬರಗಿ, ಉಪವಿಭಾಗಾಧಿಕಾರಿ ಶುಫಿಜಾನ ಹಕ್, ದೊಡ್ಡ ಬಸವರಾಜು, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಉಪಸ್ಥಿತರಿದ್ದರು.------ಕೋಟ್‌ಮುಂಬರುವ ದಿನಗಳಲ್ಲಿ ನಾಲ್ಕೈದು ಪ್ರಮುಖ ಕೈಗಾರಿಕೆಗಳು ಜಿಲ್ಲೆಗೆ ಬರುವ ನಿರೀಕ್ಷೆಯಿದೆ. ಇಟ್ಟಂಗಿಹಾಳದಲ್ಲಿ ಕೆಎಸ್‌ಡಿಎಲ್‌ನ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನೆಯ ಎರಡನೇ ಘಟಕ ಸ್ಥಾಪನೆಯಾಗಲಿದೆ. ಹೈನುಗಾರಿಕೆ ಉತ್ತೇಜನಕ್ಕಾಗಿ ಬಿಎಲ್‌ಡಿಇ ಸಂಸ್ಥೆ ಹಾಗೂ ಅಕ್ಷಯಕಲ್ಪ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ರೈತರಿಗೆ ನೆರವಾಗುವ ಕಾರ್ಯ ನಡೆಯುತ್ತಿದೆ.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡಪ್ರಭ ವಾರ್ತೆ ವಿಜಯಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯವ ನೀರಿಗಾಗಿ ಇಳಕಲ್ಲ ಜನರ ಪರದಾಟ
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ