ವಾಹನ ಚಾಲನಾ ತರಬೇತಿ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ

KannadaprabhaNewsNetwork |  
Published : Nov 11, 2025, 01:30 AM IST
10ಕೆಎಂಎನ್1 ನಾಗಮಂಗಲ ತಾಲೂಕಿನ ಮಣ್ಣಹಳ್ಳಿ ಸಮೀಪ ವಾಹನ ಚಾಲನಾ ತರಬೇತಿ ಕೇಂದ್ರ (ಡ್ರೈವಿಂಗ್ ಟ್ರೈನಿಂಗ್ ಟ್ರ್ಯಾಕ್) ನಿರ್ಮಾಣ ಕಾಮಗಾರಿಗೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಸೋಮವಾರ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ವಾಹನ ಚಾಲಕರಾಗಲು ಬಯಸುವ ಯುವಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಾಲೂಕಿನಲ್ಲಿ ಲಘು ಮತ್ತು ಭಾರೀ ವಾಹನಗಳ ಚಾಲನಾ ತರಬೇತಿ ಕೇಂದ್ರ ನಿರ್ಮಿಸಲು ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ. ಆರಂಭದಲ್ಲಿ ಲಘು ವಾಹನಗಳ ಮತ್ತು ಮುಂದಿನ ದಿನಗಳಲ್ಲಿ ಭಾರೀ ವಾಹನಗಳ ಚಾಲನಾ ತರಬೇತಿ ಕೇಂದ್ರ ನಿರ್ಮಿಸಲಾಗುವುದು.

ಕನ್ನಡಪ್ರಭವಾರ್ತೆ ನಾಗಮಂಗಲ

ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ 9.20 ಎಕರೆ ಪ್ರದೇಶದಲ್ಲಿ ವಾಹನ ಚಾಲನಾ ತರಬೇತಿ ಕೇಂದ್ರ ನಿರ್ಮಿಸುವ ಜೊತೆಗೆ, ಜವಳಿ ಪಾರ್ಕ್ ನಿರ್ಮಾಣಕ್ಕೆ 28 ಎಕರೆ ಭೂಮಿ ಗುರುತಿಸಿ ಮೀಸಲಿಡಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಮಣ್ಣಹಳ್ಳಿ ಸಮೀಪದ ಬುರುಡುಗುಂಟೆ ರಸ್ತೆಯಲ್ಲಿರುವ 9.20 ಎಕರೆ ಪ್ರದೇಶದಲ್ಲಿ 5 ಕೋಟಿ ರು. ವೆಚ್ಚದ ಲಘು ವಾಹನ ಚಾಲನಾ ತರಬೇತಿ ಕೇಂದ್ರ (ಡ್ರೈವಿಂಗ್ ಟ್ರೈನಿಂಗ್ ಟ್ರ್ಯಾಕ್) ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ವಾಹನ ಚಾಲಕರಾಗಲು ಬಯಸುವ ಯುವಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಾಲೂಕಿನಲ್ಲಿ ಲಘು ಮತ್ತು ಭಾರೀ ವಾಹನಗಳ ಚಾಲನಾ ತರಬೇತಿ ಕೇಂದ್ರ ನಿರ್ಮಿಸಲು ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ. ಆರಂಭದಲ್ಲಿ ಲಘು ವಾಹನಗಳ ಮತ್ತು ಮುಂದಿನ ದಿನಗಳಲ್ಲಿ ಭಾರೀ ವಾಹನಗಳ ಚಾಲನಾ ತರಬೇತಿ ಕೇಂದ್ರ ನಿರ್ಮಿಸಲಾಗುವುದು. ಇದರಿಂದ ಜಿಲ್ಲೆಯ ಬಹಳಷ್ಟು ಯುವಕರಿಗೆ ಅನುಕೂಲವಾಗುತ್ತದೆ ಎಂದರು.

ವಾಹನ ಚಾಲನಾ ತರಬೇತಿ ಕೇಂದ್ರ ನಿರ್ಮಿಸಲು ತಾಲೂಕಿನ ಮಣ್ಣಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 9.20ಎಕರೆ ಪ್ರದೇಶದ ಭೂಮಿಯನ್ನು ಈಗಾಗಲೇ ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರ ಹುದ್ದೆಗಳ ನೇಮಕಾತಿ ನಿರಂತರವಾಗಿರುತ್ತದೆ. ಸರಿಯಾದ ರೀತಿಯಲ್ಲಿ ತರಬೇತಿ ಪಡೆದುಕೊಂಡಿದ್ದಲ್ಲಿ ಮಾತ್ರ ಕೆಎಸ್‌ಆರ್‌ಟಿಸಿ ಅಥವಾ ಖಾಸಗಿ ವಾಹನಗಳ ಚಾಲಕರಾಗಿ ಆಯ್ಕೆಯಾಗಿ ಉದ್ಯೋಗ ಪಡೆದುಕೊಳ್ಳಬಹುದು.

ತಾಲೂಕಿನ ಯುವಕರು ಮತ್ತು ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಸಲುವಾಗಿ ಜವಳಿ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಮಣ್ಣಹಳ್ಳಿ ಗ್ರಾಪಂ ವ್ಯಾಪ್ತಿಯ ಸ.ನಂ. 298ರಲ್ಲಿ 28 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿ ಮೀಸಲಿಡಲಾಗಿದೆ. ಈ ಪ್ರದೇಶದಲ್ಲಿ ಗಾರ್ಮೆಂಟ್ಸ್ ಸೇರಿದಂತೆ ದುಡಿಯುವ ಕೈಗಳಿಗೆ ಕೆಲಸ ಕೊಡುವ ಹಲವು ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸರ್ಕಾರದಿಂದ ಅಥವಾ ಖಾಸಗಿ ಸಂಸ್ಥೆಯವರು ಮುಂದೆ ಬಂದಲ್ಲಿ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡುವ ಘಟಕಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗುವುದು. ಇದರಿಂದ ತಾಲೂಕಿನ ಯುವ ಸಮುದಾಯಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಬಿ.ಎಸ್.ಸತೀಶ್, ಎಆರ್‌ಟಿಒ ಹೊನ್ನೇಗೌಡ, ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಸತೀಶ್, ಸಹಬಾಜ್ ಬಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಣ್ಯ ವೆಂಕಟೇಶ್, ಮುಖಂಡರಾದ ಸುನಿಲ್ ಲಕ್ಷ್ಮಿಕಾಂತ್, ಕೊಣನೂರು ಹನುಮಂತು, ಡಿ.ಕೃಷ್ಣೇಗೌಡ, ಹೊಣಕೆರೆ ಬಸವರಾಜು, ಆರ್.ಕೃಷ್ಣೇಗೌಡ, ಜವರಪ್ಪ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ