ಹೊಸಕೋಟೆ: ಕಳೆದ 10 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ದೇವಲಾಪುರ ರೈಲ್ವೆ ಮೇಲ್ಸೇತುವೆ ಇನ್ನು 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ದೇವಲಾಪುರದಲ್ಲಿ ಹಾದು ಹೋಗಿರುವ ರೈಲ್ವೆ ಹಳಿಗಳ ಮೇಲೆ 12 ಕೋಟಿ ವೆಚ್ಚದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ರೈಲ್ವೆ ಕೇಂದ್ರ ಮಂತ್ರಿಯಾಗಿದ್ದ ಸದಾನಂದಗೌಡರ ಅವಧಿಯಲ್ಲಿ ಯೋಜನೆಗೆ ಅನುಮೋದನೆ ನೀಡಿದ್ದರು. ಕಾರಣಾಂತರಗಳಿಂದ ಅರ್ಧಕ್ಕೆ ಈ ಕಾಮಗಾರಿ ನಿಂತು ಹೋಗಿತ್ತು. ಬಳಿಕ ಕಳೆದ ಒಂದೂವರೆ ವರ್ಷದಿಂದ ನಿರಂತರ ಪ್ರಯತ್ನದ ಫಲವಾಗಿ ಹಾಗೂ ಅಧಿಕಾರಿಗಳ ಶ್ರಮದಿಂದ ಈ ಕಾಮಗಾರಿ ಮುಂದುವರಿಯುತ್ತಿದೆ. ಈ ಭಾಗದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಹೆಚ್ಚು ಅನುಕೂಲವಾಗಲಿದೆ. ಗುಣಮಟ್ಟ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಇಲಾಖೆಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸದನದಲ್ಲಿ ಚರ್ಚೆ:
ಹೊಸಕೋಟೆ ನಗರಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣಕ್ಕೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸುಮಾರು 2.5 ಎಕರೆ ಜಾಗದಲ್ಲಿ ನಿರ್ಮಾಣಕ್ಕೆ ಸಚಿವರಿಗೆ ಮನವಿ ಮಾಡಲಾಗಿದೆ. ಸಂಚಾರ ಪೊಲೀಸ್ ಠಾಣೆ ನಿರ್ಮಾಣಕ್ಕೆ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಗೃಹ ಸಚಿವರಿಗೆ, ಸೂಲಿಬೆಲೆ ರಸ್ತೆಯಿಂದ ಕೋಲಾರ ಜಿಲ್ಲೆಯ ಮಾಸ್ತಿವರೆಗೆ ರಸ್ತೆಯನ್ನು ರಾಜ್ಯ ಹೆದ್ದಾರಿ ಮಾನ್ಯತೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ, ಕೆಆರ್ ಪುರದಿಂದ ಹೊಸಕೋಟೆಯ ಕೊಳತೂರುವರೆಗೆ ಮೆಟ್ರೋ ಜೊತೆ ಸಂಚಾರ ಮೇಲ್ಸೇತುವೆಗೂ ಮನವಿ ಹಾಗೂ ಕೊರಳೂರಿನ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೂ ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಂಬಂಧಪಟ್ಟ ಎಲ್ಲಾ ಸಚಿವರೂ ನನ್ನ ಮನವಿಯನ್ನು ಮಾನ್ಯ ಮಾಡಿದ್ದು ಶೀಘ್ರವೇ ಅಭಿವೃದ್ಧಿ ಕಾರ್ಯಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸಿ ದುರ್ಗಾಶ್ರೀ, ತಹಸೀಲ್ದಾರ್ ಸೋಮಶೇಖರ್, ಇಒ ಮುನಿಯಪ್ಪ, ಡಿವೈಎಸ್‌ಪಿ ಮಲ್ಲೇಶ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಕಾಶ್, ವಲಯ ಅರಣ್ಯಾಧಿಕಾರಿ ಪುಷ್ಪ, ಬೆಸ್ಕಾಂ ಎಇಇ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ರತ್ನಾ, ಸಮೇತನಹಳ್ಳಿ ಗ್ರಾಪಂ ಅಧ್ಯಕ್ಷ ಕಾಂತರಾಜ್, ಮುಖಂಡರಾದ ಭೋದನಹೊಸಳ್ಳಿ ಪ್ರಕಾಶ್, ಕೋಡಿಹಳ್ಳಿ ಸುರೇಶ್, ಗೀತಾ ಪ್ರಕಾಶ್, ಮಾರೇಗೌಡ, ವಿಎಸ್‌ಎಸ್‌ಎನ್ ಅಧ್ಯಕ್ಷ ಪ್ರಕಾಶ್ ಇತರರು ಹಾಜರಿದ್ದರು.