₹54 ಕೋಟಿ ವೆಚ್ಚದಲ್ಲಿ 888 ಮನೆಗಳ ನಿರ್ಮಾಣಕ್ಕೆ ಮುಹೂರ್ತ

KannadaprabhaNewsNetwork |  
Published : Aug 22, 2026, 01:15 AM IST
5.ಸಂಗ್ರಹ ಚಿತ್ರ | Kannada Prabha

ಸಾರಾಂಶ

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ರವರು ಸಂಸದರಾಗಿದ್ದ ಅವಧಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರೊಂದಿಗೆ ಜಮೀನಿನ ವಿವಾದ ಬಗೆಹರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆನಂತರ ಇಕ್ಬಾಲ್ ಹುಸೇನ್ ಅವರೇ ವಿಶೇಷ ಕಾಳಜಿ ವಹಿಸಿ ಜಮೀನನ್ನು ಗುರುತಿಸುವ ಜೊತೆಗೆ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಹಂತಕ್ಕೆ ತಂದಿದ್ದಾರೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ 888 ಮನೆಗಳನ್ನು ನಿರ್ಮಿಸುವ ಕಾರ್ಯಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.

ರಾಮನಗರ ಟೌನಿನಲ್ಲಿರುವ ಸೂರು ಮತ್ತು ನಿವೇಶನ ಇಲ್ಲದ ಕೊಳಚೆ ಪ್ರದೇಶದ ನಿವಾಸಿಗಳು, ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಸೂರು ಕಲ್ಪಿಸುವ ಈ ವಸತಿ ಯೋಜನೆ ಜಮೀನಿನ ವಿವಾದದಿಂದಾಗಿ ಕಾರ್ಯಗತಗೊಂಡಿರಲಿಲ್ಲ.

ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ರವರು ಸಂಸದರಾಗಿದ್ದ ಅವಧಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರೊಂದಿಗೆ ಜಮೀನಿನ ವಿವಾದ ಬಗೆಹರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆನಂತರ ಇಕ್ಬಾಲ್ ಹುಸೇನ್ ಅವರೇ ವಿಶೇಷ ಕಾಳಜಿ ವಹಿಸಿ ಜಮೀನನ್ನು ಗುರುತಿಸುವ ಜೊತೆಗೆ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಹಂತಕ್ಕೆ ತಂದಿದ್ದಾರೆ.

6 ಎಕರೆಯಲ್ಲಿ 888 ಮನೆಗಳ ನಿರ್ಮಾಣ :

ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಶಿಡ್ಲುಕಲ್ಲು ಗ್ರಾಮದ ಸರ್ವೇ ನಂಬರ್ 29ರಲ್ಲಿನ 6 ಎಕರೆ 38 ಗುಂಟೆ ಜಮೀನಿನಲ್ಲಿ ಸುಮಾರು ₹54 ಕೋಟಿ ವೆಚ್ಚದಲ್ಲಿ 888 ಮನೆಗಳು ನಿರ್ಮಾಣಗೊಳ್ಳಲಿವೆ. ಒಂದು ಬ್ಲಾಕಿನಲ್ಲಿ ಜಿ + 4 ವಿನ್ಯಾಸದಲ್ಲಿ 37 ಮನೆಗಳಂತೆ ಒಟ್ಟು 24 ಬ್ಲಾಕ್ ಗಳಲ್ಲಿ 888 ಮನೆಗಳು ನಿರ್ಮಾಣವಾಗಲಿವೆ.

ಇದರಲ್ಲಿ ಮನೆಗಳ ನಿರ್ಮಾಣಕ್ಕೆ ₹49 ಕೋಟಿ 32 ಲಕ್ಷ, ಮೂಲ ಸೌಕರ್ಯ ಕಲ್ಪಿಸಲು ₹1 ಕೋಟಿ 11 ಲಕ್ಷ ವೆಚ್ಚವಾಗಲಿದೆ. ಪ್ರತಿಯೊಂದು ಮನೆ 27.22 ಚದರ ವಿಸ್ತೀರ್ಣ ಇರಲಿದ್ದು, ಒಂದು ಮನೆ ₹5 ಲಕ್ಷ 55 ಸಾವಿರ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.

ನಗರದ ವಿವಿಧ ಕೊಳಚೆ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಯೋಜನೆ ಅಡಿಯಲ್ಲಿ 888 ಮನೆಗಳನ್ನು ನಿರ್ಮಿಸಲು 2018-19ನೇ ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್) ವತಿಯಿಂದ ಮಂಜೂರಾಗಿತ್ತು. ಈ ವರ್ಷದ ಸೆಪ್ಟೆಂಬರ್ ತಿಂಗಳೊಳಗೆ ಮನೆಗಳ ನಿರ್ಮಾಣ ಪ್ರಾರಂಭವಾಗದಿದ್ದರೆ ಎಲ್ಲ ಮನೆಗಳು ರದ್ದುಗೊಳ್ಳುತ್ತಿದ್ದವು.

ಹೀಗಾಗಿ ಆ.22ರಂದು ಶಾಸಕ ಇಕ್ಬಾಲ್ ಹುಸೇನ್ ರವರ ಅಧ್ಯಕ್ಷತೆಯಲ್ಲಿ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಮತ್ತು ವಸತಿ ಸಚಿವ ಜಮೀರ್ ಅಹಮದ್ ರವರು ಮನೆಗಳ ನಿರ್ಮಾಣ ಕಾರ್ಯಕ್ಕೆ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ.

ಕೊತ್ತಿಪುರ - ದೊಡ್ಡಮಣ್ಣುಗುಡ್ಡೆಯಲ್ಲಿ ವಿವಾದ :

ಈ ಮೊದಲು 2021ರ ಡಿಸೆಂಬರ್ 20ರಂದು ಸ್ಲಂ ಬೋರ್ಡಿಗೆ ಸೇರಿದ ಕೊತ್ತಿಪುರ ಸರ್ವೇ ನಂ.96 ಮತ್ತು 97ರಲ್ಲಿ 7 ಎಕರೆ 35 ಗುಂಟೆ ಜಮೀನಿನಲ್ಲಿ ವಸತಿ ಯೋಜನೆ ಪ್ರಾರಂಭಿಸಲು ಹೋದಾಗ ಮೂಲ ಮಾಲೀಕರು ಅಡ್ಡಿ ಪಡಿಸಿದ್ದರು. ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಯಥಾಸ್ಥಿತಿ ಕಾಪಾಡಲು ಆದೇಶಿಸಿತು. ವ್ಯಾಜ್ಯ ಇತ್ಯರ್ಥವಾಗದ ಕಾರಣ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಲಿಲ್ಲ.

2006ರಲ್ಲಿ ಸ್ಲಂ ಬೋರ್ಡಿಗೆ ಮಂಜೂರಾಗಿದ್ದ ದೊಡ್ಡಮಣ್ಣುಗುಡ್ಡೆ ಸರ್ವೇ ನಂ.1ರ 30 ಎಕರೆ 30 ಗುಂಟೆ ಜಮೀನನ್ನು ಮನೆಗಳ ನಿರ್ಮಾಣಕ್ಕಾಗಿ ಗುತ್ತಿಗೆದಾರರಿಗೆ 2022ರ ನವೆಂಬರ್ 15ರಂದು ಸ್ಥಳ ಹಸ್ತಾಂತರಿಸಾಗಿತ್ತು. ಆ ಪ್ರದೇಶದಲ್ಲಿ ಕಾಮಗಾರಿ ಪ್ರಾರಂಭಿಸಲು ಹೋದಾಗ ಅರಣ್ಯ ಇಲಾಖೆಯವರು ಸದರಿ ಜಮೀನು ತಮ್ಮ ಇಲಾಖೆಗೆ ಸೇರಿದೆ ಎಂದು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು.

ಕೊನೆಗೆ ಸ್ಲಂ ಬೋರ್ಡ್ ಬದಲಿ ಜಾಗ ನೀಡುವಂತೆ ರಾಮನಗರ ತಹಸೀಲ್ದಾರ್ ಗೆ ಪತ್ರ ಬರೆದಿತ್ತು. ಆನಂತರ ಜಿಲ್ಲಾಧಿಕಾರಿಗಳು ಶಿಡ್ಲುಕಲ್ಲು ಗ್ರಾಮದ ಸರ್ವೇ ನಂ.29ರಲ್ಲಿನ 6 ಎಕರೆ 38 ಗುಂಟೆ ಜಮೀನನ್ನು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಗೆ ಕೊಳಚೆ ಪ್ರದೇಶದ ವಿವಿಧ ನಿವಾಸಿಗಳನ್ನು ಸ್ಥಳಾಂತರ ಮಾಡುವ ಉದ್ದೇಶಕ್ಕಾಗಿ ಮಂಜೂರು ಮಾಡಿ ಹಸ್ತಾಂತರ ಮಾಡಿದೆ. ಇದೀಗ ಆ ಜಾಗದಲ್ಲಿಯೇ 888 ಮನೆಗಳು ನಿರ್ಮಾಣಗೊಳ್ಳಲಿವೆ.

------

ಅನುದಾನದ ವಿವರ

ಅನುದಾನದ ಪಾಲು, ಎಸ್ಸಿ - ಎಸ್ಟಿ, ಇತರೆ ವರ್ಗ

ಭಾರತ ಸರ್ಕಾರ, 1.50 ಲಕ್ಷ, 1.50 ಲಕ್ಷ

ಕರ್ನಾಟಕ ಸರ್ಕಾರ, 2 ಲಕ್ಷ, 1.20 ಲಕ್ಷ

ಫಲಾನುಭವಿ ಪಾಲು, 1 ಲಕ್ಷ, 1 ಲಕ್ಷ

ಕ.ಸರ್ಕಾರದ ವಿಶೇಷ ಅನುದಾನ, 1.55 ಲಕ್ಷ, 1.85 ಲಕ್ಷ

----

ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಸೂರು ಕಲ್ಪಿಸಲು ಡಿ.ಕೆ.ಸುರೇಶ್ ರವರು ಸಂಸದರಾಗಿದ್ದಾಗ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ ರಾಮನಗರಕ್ಕೆ 888 ಮನೆಗಳನ್ನು ಮಂಜೂರು ಮಾಡಿಸಿದ್ದರು. ಇದರ ಅನುಷ್ಠಾನಕ್ಕೆ ಜಮೀನಿನ ಸಮಸ್ಯೆ ಅಡ್ಡಿಯಾಗಿತ್ತು. ಎಲ್ಲ ಅಡೆತಡೆಗಳು ನಿವಾರಣೆಯಾಗಿ ಶಿಡ್ಲುಕಲ್ಲು ಗ್ರಾಮದ 6 ಎಕರೆಯಲ್ಲಿ ಮನೆಗಳು ನಿರ್ಮಾಣಗೊಳ್ಳಲಿವೆ.

- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ 888 ಮನೆಗಳನ್ನು ನಿರ್ಮಿಸಲು 2018-19ನೇ ಸಾಲಿನಲ್ಲಿ ಸ್ಲಂ ಬೋರ್ಡಿನಿಂದ ಮಂಜೂರಾಗಿತ್ತು. ಕೊತ್ತಿಪುರ ಮತ್ತು ದೊಡ್ಡಮಣ್ಣುಗುಡ್ಡೆಯಲ್ಲಿ ಜಮೀನಿನ ಸಮಸ್ಯೆಯಿಂದ ಕಾರ್ಯಗತಗೊಳ್ಳಲಿಲ್ಲ. ಈಗ ಶಿಡ್ಲುಕಲ್ಲು ಗ್ರಾಮದಲ್ಲಿ 1 ಬ್ಲಾಕಿನಲ್ಲಿ ಜಿ + 4 ವಿನ್ಯಾಸದಲ್ಲಿ 37 ಮನೆಗಳಂತೆ ಒಟ್ಟು 24 ಬ್ಲಾಕ್ ಗಳಲ್ಲಿ 888 ಮನೆಗಳು ನಿರ್ಮಾಣವಾಗಲಿವೆ.

- ಚೇತನ್ ಕುಮಾರ್, ಎಇಇ, ಸ್ಲಂ ಬೋರ್ಡ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಭಿವೃದ್ಧಿಯೇ ಲಯನ್ಸ್ ಧ್ಯೇಯ: ಡಾ.ಕೃಷ್ಣೇಗೌಡ
ಮಂಡ್ಯ: ೬೭ ಆಸ್ತಿ ಮಾಲೀಕರಿಂದ ರಾಜಕಾಲುವೆ ಒತ್ತುವರಿ..!