ಶಿರಸಿ: ಕಳೆದ ೧೫ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಘಟ್ಟದ ಮೇಲಿನ ಅಡಕೆ ತೋಟಗಳಲ್ಲಿ ನೀರು ನಿಂತು ಇನ್ನೂ ಬೆಳೆಯದ ಎಳೆ ಅಡಕೆ ಕಾಯಿಗಳು ಉದುರಲಾರಂಭಿಸಿದ್ದು, ಕೆಲವು ದಿನಗಳಲ್ಲಿಯೇ ಮರ ಬರಿದಾಗುವ ಆತಂಕವನ್ನು ಬೆಳೆಗಾರರು ಎದುರಿಸುವಂತಾಗಿದೆ.
ಈಗಾಗಲೇ ಕೆಲವೆಡೆ ಅಡಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ತಾಲೂಕಿನ ಸಂಪಖಂಡ ಮತ್ತು ಹುಲೇಕಲ್ ಹೋಬಳಿ, ಸಿದ್ದಾಪುರ ತಾಲೂಕಿನ ನಿಲ್ಕುಂದ, ವಂದಾನೆ ಭಾಗದಲ್ಲಿ ಅಡಕೆಗೆ ಕೊಳೆ ಕಾಣಿಸಿಕೊಂಡಿದೆ. ಬೋರ್ಡೋ ಸಿಂಪಡಣೆಗೆ ಇದು ಸೂಕ್ತ ಕಾಲವಾಗಿದ್ದರೂ ಅಬ್ಬರದ ಮಳೆ ಅವಕಾಶ ನೀಡುತ್ತಿಲ್ಲ. ತಾಲೂಕಿನ ಬನವಾಸಿ ಭಾಗದಲ್ಲಿಯೂ ಅಲ್ಲಲ್ಲಿ ಕೊಳೆ ರೋಗದಿಂದಾಗಿ ಅಡಕೆ ಉದುರಲಾರಂಭಿಸಿದೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಕೊಳೆ ರೋಗದ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ತೋಟಕ್ಕೆ ಪೋಟ್ಯಾಶಿಯಂ ಮತ್ತು ಪೋಷಕಾಂಶಗಳ ಕೊರತೆಯಿಂದ ಈ ರೀತಿ ಅಡಕೆ ಉದುರುತ್ತದೆ. ಬೇಸಿಗೆಯ ದಿನಗಳಲ್ಲಿ ಅಡಕೆ ಮರಗಳಿಗೆ ಸುಣ್ಣ, ಪೋಷಕಾಂಶ ನೀಡಿದರೆ ಈ ರೀತಿ ಸಮಸ್ಯೆಯಿಂದ ಬಚಾವಾಗಬಹುದು ಎಂಬುದನ್ನು ಹಲವು ರೈತರೂ ಹೇಳಿದ್ದಾರೆ. ಇನ್ನೊಂದೆಡೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಎಳೆ ಅಡಕೆಗೆ ಅನೇಕ ಕಡೆ ಪೆಂಟಾಮಿಡ್ ಬಗ್ ಕಾಟ ಕಾಣಿಸಿಕೊಳ್ಳುತ್ತವೆ. ಸೊಳ್ಳೆ ಮಾದರಿಯ ಸಣ್ಣ ಕೀಟಗಳು ಎಳೆ ಅಡಕೆಯ ಮೇಲೆ ಕುಳಿತು ರಸ ಹೀರುತ್ತವೆ. ಇದರಿಂದಾಗಿ ಅಡಕೆ ಬೆಳವಣಿಗೆ ನಿಂತು ತೊಟ್ಟಿನ ಭಾಗದಲ್ಲಿ ಕಳಚಿಕೊಳ್ಳುತ್ತಿವೆ.ಆದರೆ, ಈ ವರ್ಷ ಅಡಕೆ ಉದುರುವಿಕೆಗೆ ಪ್ರಮುಖ ಕಾರಣವಾಗಿರುವುದು ಹವಾಮಾನ ವೈಪರೀತ್ಯ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಈ ವರ್ಷ ತಾಪಮಾನ ವಿಪರೀತವಾಗಿತ್ತು. ಪ್ರತಿದಿನ ಸರಾಸರಿ ೩೫ರಿಂದ ೩೮ ಡಿಗ್ರಿ ಸೆಲ್ಶಿಯಸ್ ವರೆಗೆ ತಲುಪಿತ್ತು. ಜತೆಗೆ ಒಣ ಬಿಸಿ ಹವಾಮಾನವೂ ಅಡಕೆ ಮರಗಳಿಗೆ ಬಾಧಿಸಿತ್ತು. ಈ ವಾತಾವರಣದಿಂದ ಒಮ್ಮೆಲೇ ಮಳೆಯ ವಾತಾವರಣ ಆರಂಭವಾಗಿದೆ ಮತ್ತು ಸರಾಸರಿ ತಾಪಮಾನ ೨೪ರಿಂದ ೨೬ ಡಿಗ್ರಿಗೆ ಕುಸಿತವಾಗಿದೆ. ಅದರಿಂದ ಅಡಕೆ ಮರಗಳಲ್ಲಿ ಒಮ್ಮೆಲೇ ಅಡಕೆ ಉದುರಲಾರಂಭಿಸಿದೆ. ಈ ಸಮಸ್ಯೆಗೆ ಬೇಸಿಗೆಯ ಅವಧಿಯಲ್ಲಿಯೇ ಅಡಕೆ ಮರಗಳಿಗೆ ಸೂಕ್ತ ಪೋಷಕಾಂಶ ನೀಡುವ ಮೂಲಕ ಬಗೆಹರಿಸಬಹುದಾಗಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.ಬಾಕ್ಸ್: