ಮಳೆಗಾಗಿ ಕಾಯುತ್ತಿರುವ ಹಾನಗಲ್ಲ ತಾಲೂಕಿನ ಅಡಕೆ ಬೆಳೆಗಾರರು

KannadaprabhaNewsNetwork |  
Published : May 13, 2024, 12:06 AM IST
ಪೋಟೋ ಇಧೆ. | Kannada Prabha

ಸಾರಾಂಶ

ನಾಲ್ಕೈದು ತಿಂಗಳಿಂದ ಕೈಕೊಟ್ಟ ಮಳೆಗೆ ಅಡಕೆ ತೋಟಗಳು ಒಣಗಿ ದೀರ್ಘಾವಧಿಯ ರೈತನ ಕನಸು ಕಮರಿದಂತಾಗಿದೆ. ದೀರ್ಘ ಕಾಲದ ಬೆಳೆ ಉಳಿಸಿಕೊಳ್ಳಲು ಹರ ಸಾಹಸವನ್ನೇ ಮಾಡುತ್ತಿರುವ ರೈತ ಮಳೆಗಾಗಿ ಕಾತರದಿಂದ ಕಾಯುತ್ತಿದ್ದಾನೆ.

ಹಾನಗಲ್ಲ: ನಾಲ್ಕೈದು ತಿಂಗಳಿಂದ ಕೈಕೊಟ್ಟ ಮಳೆಗೆ ಅಡಕೆ ತೋಟಗಳು ಒಣಗಿ ದೀರ್ಘಾವಧಿಯ ರೈತನ ಕನಸು ಕಮರಿದಂತಾಗಿದೆ. ದೀರ್ಘ ಕಾಲದ ಬೆಳೆ ಉಳಿಸಿಕೊಳ್ಳಲು ಹರ ಸಾಹಸವನ್ನೇ ಮಾಡುತ್ತಿರುವ ರೈತ ಮಳೆಗಾಗಿ ಕಾತರದಿಂದ ಕಾಯುತ್ತಿದ್ದಾನೆ.

ಹಾನಗಲ್ಲ ತಾಲೂಕಿನ ೪೭೬೬೩ ಹೆಕ್ಟೇರ್ ಕೃಷಿ ಭೂಮಿಯಲ್ಲಿ ೧೪೬೬೨ ಹೆಕ್ಟೇರ್ ತೋಟಗಾರಿಕಾ ಕೃಷಿ ಮಾಡುತ್ತಿದ್ದು, ೯೫೦೦ ಹೆಕ್ಟೇರನಷ್ಟು ಅಡಕೆ ಬೆಳೆಯೆ ಇದೆ. ಕಳೆದ ಹತ್ತು ವರ್ಷಗಳಲ್ಲಿ ಅತಿ ಹೆಚ್ಚು ತೋಟಗಾರಿಕೆ ಬೆಳೆಗೆ ಮುಂದಾದ ರೈತ ಅದರಲ್ಲೂ ಅಡಕೆ ಬೆಳೆಗೆ ಮುಂದಾಗಿದ್ದು, ಎಲ್ಲೆಂದರಲ್ಲಿ ಅಡಕೆ ಬೆಳೆ ಕಾಣುತ್ತಿದೆ. ಕಳೆದ ೩ ವರ್ಷಗಳಿಂದ ಬಾಳಂಬೀಡ ಏತ ನೀರಾವರಿ ಕಾಮಗಾರಿ ಆರಂಭವಾದಾಗಿನಿಂದ ಇನ್ನಷ್ಟು ಅಡಕೆ ಬೆಳೆಯಲು ಮುಂದಾಗಿದ್ದಾನೆ.. ಈ ಬಾರಿ ಬಾಳಂಬೀಡ ಏತ ನೀರಾವರಿ ಆರಂಭವಾಗುವ ಬಹು ನಿರೀಕ್ಷೆ ಇದೆ. ಆದರೆ ಕಳೆದ ಡಿಸೆಂಬರ್ ಪೂರ್ವದಲ್ಲಿಯೇ ಮಳೆ ನಿಂತು ಹೋಗಿದ್ದರಿಂದ, ಅಂತರ್ಜಲವೂ ಕುಸಿದು ಹೋಗಿದೆ. ಕೃಷಿ ಕಾರ್ಮಿಕರ ಕೊರತೆಯೂ ಕೂಡ ಅಡಕೆ ಬೆಳೆಯತ್ತ ರೈತ ದಾಪುಗಾಲು ಹಾಕಲು ಬಹುತೇಕ ಕಾರಣವಾಗಿದೆ. ಕೊಳವೆ ಬಾವಿಗಳನ್ನು ನೆಚ್ಚಿಕೊಂಡ ರೈತನಿಗೆ ಶೇ. ೫೦ರಷ್ಟು ಕೊಳವೆ ಬಾವಿಗಳು ಮಾರ್ಚ್‌ ಮೊದಲ ವಾರದಲ್ಲೇ ಬಹುತೇಕ ಕೈ ಕೊಟ್ಟಿದ್ದು, ಅಲ್ಲಿಂದ ಅಡಕೆ ತೋಟಗಳನ್ನು ಉಳಿಸಿಕೊಳ್ಳಲು ಕೊಳವೆ ಬಾವಿ ಕೊರೆಸುವತ್ತ ರೈತರು ಸಾಗಿದ್ದಾರೆ. ಈಗಲೂ ಅಡಕೆ ಬೆಳೆ ಉಳಿಸಿಕೊಳ್ಳಲು ಒಬ್ಬೊಬ್ಬ ರೈತರು ಹತ್ತಾರು ಸಂಖ್ಯೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸುತ್ತಿರುವ ದೃಶ್ಯಗಳು ಕಾಣುತ್ತಿವೆ.ಕಳೆದ ತಿಂಗಳಿನಲ್ಲಿ ಎರಡು ದಿನ ಅಪರೂಪಕ್ಕೆ ಬಂದ ಮಳೆ ರೈತನ ಕಂಗಳ ಸಂತಸದ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಹಾನಗಲ್ಲಿನಲ್ಲಿ ರೈತನೊಬ್ಬ ಬಂದ ಮೊದಲ ಮಳೆಯಲ್ಲಿ ಕುಣಿದುಕುಪ್ಪಳಿಸಿದ ಸುದ್ದಿ ಹರಿದಾಡಿತ್ತು. ಮತ್ತೆ ಮಳೆ ಇಲ್ಲ. ಶನಿವಾರ ತಾಲೂಕಿನ ಅಲ್ಲಲ್ಲಿ ಮಳೆಯಾಗಿದೆ. ಈಗಾಗಲೇ ಭರಪೂರ ಮಳೆಯಾಗುವ ನಿರೀಕ್ಷೆ ರೈತನದಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.ಕಳೆದ ಎರಡು ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಅಡಕೆ ತೋಟ ಮಾಡುವ ರೈತರ ಸಂಖ್ಯೆ ಶೇ.೯೦ ರಷ್ಟು ಇಳಿಮುಖವಾಗಿದೆ. ಇರುವ ತೋಟಗಳನ್ನು ಉಳಿಸಿಕೊಳ್ಳುವುದೇ ಹರಸಾಹಸವಾಗಿದೆ. ಈಗಿರುವ ತೋಟಗಳಲ್ಲಿ ಶೇ.೧೦ರಷ್ಟು ಅಡಕೆ ತೋಟಗಳು ಒಣಗಿವೆ ಎಂಬ ಅಂದಾಜಿದೆ. ತೋಟಗಳನ್ನು ಉಳಿಸಿಕೊಳ್ಳಲು ದೂರದ ಕೊಳವೆ ಬಾವಿಗಳಿಂದ ನೀರು ತರಲಾಗುತ್ತಿದೆ. ಈ ಬಿಸಿಲಿನ ಕಾರಣದಿಂದಾಗಿ ಈ ಬಾರಿ ಅಡಕೆ ಇಳುವರಿಯಲ್ಲಿ ಭಾರೀ ಹಿನ್ನಡೆ ಸಾಧ್ಯತೆ ಇದೆ, ಈ ತಾಪಮಾನ ಅಡಕೆ ಬೆಳೆಗೆ ಸೂಕ್ತವಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ನರೇಗಾ ಯೋಜನೆಯಲ್ಲಿ ಹನಿ ನೀರಾವರಿಗೆ ಹೆಚ್ಚು ಬೇಡಿಕೆ ಇದ್ದು ಬಹುತೇಕ ರೈತರು ತೋಟಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಆದರೆ ಕೊಳವೆ ಬಾವಿಗಳೇ ನೀರಿಲ್ಲದಿರುವಾಗ ಅತ್ಯಂತ ಜಾಗರೂಕವಾಗಿ ಇರುವ ನೀರನ್ನೇ ಸರಿಯಾಗಿ ಬಳಸಿಕೊಳ್ಳುವ ಯತ್ನ ರೈತರಿಂದ ನಡೆದಿದೆ. ಆದಾಗ್ಯೂ ಕೃಷಿಕ ಮಾತ್ರ ಅಡಕೆ ಬೆಳೆಯಿಂದ ಭಾರೀ ಲಾಭ ನಿರೀಕ್ಷೆಯಲ್ಲಿದ್ದು ಮಳೆ ಅಭಾವದಿಂದ ನಿರಾಸೆಗೆ ಒಳಗಾಗಿದ್ದಾನೆ.ಬಿರು ಬೇಸಿಗೆಯಲ್ಲಿ ತೊಟಗಾರಿಕಾ ಭೂಮಿಯನ್ನು ಉಳುಮೆ ಮಾಡದೇ ಇರುವುದು ಸೂಕ್ತ. ಭೂಮಿಗೆ ಹೊದಿಕೆ ಪದ್ಧತಿಯನ್ನು ಅನುಸರಿಸಿದರೆ ಉತ್ತಮ. ಇರುವ ನೀರನ್ನು ಹನಿ ನೀರಾವರಿ ಮೂಲಕ ಬಳಸಿದರೆ ಹೆಚ್ಚು ಕಾಲ ನೀರು ಕೊಡಲು ಸಾಧ್ಯ. ಏನೇ ಆದರೂ ಭಾರೀ ಬಿಸಿಲಿನಿಂದಾಗಿ ತೋಟಗಾರಿಕೆ ಬೆಳೆಗೆ ಹಾನಿಯಾಗುತ್ತಿದೆ ಹಾನಗಲ್ಲ ಕೃಷಿ ಅಧಿಕಾರಿ ಮಂಜುನಾಥ ಬಣಕಾರ ಹೇಳಿದರು.

ಟ್ಯಾಂಕರನಿಂದ ಕಾಲುವೆಗೆ ನೀರು ಹಾಕಿಸಿ ಗಿಡ ಉಳಿಸಿಕೊಂಡಿದ್ದೇನೆ. ಹರಳು ಉದುರುತ್ತಿದೆ, ಶೇ.೫೦ರಷ್ಟು ಅಡಕೆ ಬೆಳೆ ನಷ್ಟವಾಗುತ್ತದೆ. ಇದನ್ನು ಸುಧಾರಿಸಿಕೊಳ್ಳಲು ಮತ್ತೆ ನಾಲ್ಕಾರು ವರ್ಷಗಳೇ ಬೇಕು. ಅಡಕೆ ಆಧಾರದಲ್ಲಿ ಬೆಳೆಯುವ ಕಾಳು ಮೆಣಸಿಗೂ ಬಹಳಷ್ಟು ತೊಂದರೆ ಆಗಿದೆ. ಬಿಸಿಲಿನ ತಾಪಕ್ಕೆ ಕಾಳು ಮೆಣಸು ಬಳ್ಳಿಗಳು ಒಣಗಿವೆ. ಪ್ರಕೃತಿಯ ಮುನಿಸಿಗೆ ರೈತನ ಶ್ರಮ ವಿಫಲವಾಗುತ್ತಿದೆ. ಎಲ್ಲ ಕಷ್ಟಗಳನ್ನು ಮೆಟ್ಟಿ ನಿಲ್ಲುವವನೇ ರೈತ. ಒಳ್ಳೆಯ ಮಳೆಯಾಗುವ ನಿರೀಕ್ಷೆ ಮಾಡೋಣ ಚಿಕ್ಕಾಂಸಿ ಹೊಸೂರಿನ ವಾಸಣ್ಣ ಮೂಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೊಳಲು ಸುತ್ತಮುತ್ತ ಕಾಡಾನೆಗಳ ಉಪಟಳ
ಬೇಲೂರಿನಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ