ರಾಣಿಬೆನ್ನೂರು: ತಾಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಾನುಭವ ಶಿಬಿರದ ಪ್ರಯುಕ್ತ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ರೈತ ಫಕ್ಕೀರಪ್ಪ ಕಳ್ಳಿಹಾಳ ಶೇಂಗಾ ಹೊಲಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಂಡರು. ಪ್ರಾಧ್ಯಾಪಕ ಡಾ. ಅಶೋಕ ಪಿ., ಶೇಂಗಾ ಬೆಳೆಯ ಕುರಿತು ವಿವರಿಸುತ್ತಾ, ಜಿಲ್ಲೆಯಲ್ಲಿ ಶೇಂಗಾ ಒಂದು ಮುಖ್ಯ ಎಣ್ಣೆಕಾಳು ಬೆಳೆ. ಸಮಗ್ರ ನಿರ್ವಹಣೆ ಮಾಡಿದಲ್ಲಿ ರೈತರಿಗೆ ಒಳ್ಳೆಯ ಆದಾಯ ತಂದುಕೊಡುವ ಬೆಳೆಯಾಗಿದೆ. ಈ ಬೆಳೆಯು ಮರಳು ಮಿಶ್ರಿತ ಜೇಡಿ ಮಡುಕಟ್ಟು ಮತ್ತು ಮಸಾರಿ ಭೂಮಿಗೆ ಯೋಗ್ಯವಾಗಿದ್ದಲ್ಲದೆ ಇಳುವರಿ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ವಲಯವಾರು ಸೂಕ್ತವಾದ ತಳಿಗಳನ್ನು ಬೆಳೆಯುವುದು ಉತ್ತಮ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಈ ಬೆಳೆಗೆ ಎಲೆ ತಿನ್ನುವ ಕೀಟಭಾದೆ ಕಂಡುಬಂದಿದ್ದು, ಮರಿಹುಳುಗಳು ಎಲೆ ಕೆಳಭಾಗದಲ್ಲಿ ಗುಂಪಾಗಿ ಬೆಳೆಯ ಎಲೆಯ ಹಸಿರು ಭಾಗವನ್ನು ಕೆರೆದು ತಿಂದು ನಂತರ ಹುಳುಗಳು ರಾತ್ರಿಯ ಸಮಯದಲ್ಲಿ ಎಲೆಗಳನ್ನು ತಿನ್ನುವುದು ಸಾಮಾನ್ಯ. ಇವುಗಳ ನಿರ್ವಹಣೆಗಾಗಿ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್‌ಜಿ ಅಥವಾ 0.5 ಮಿ.ಲೀ ಲ್ಯಾಂಬ್ಡಾಸೈಯಲೋಥ್ರಿನ್ 5 ಹನಿ ಪ್ರತಿ ಲೀಟರ್‌ಗೆ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕೆಂದು ತಿಳಿಸಿದರು.ಸಮಗ್ರ ಕೀಟ ನಿರ್ವಹಣೆಗಾಗಿ ಮೋಹಕ ಬಲೆಯನ್ನು ಹೇಗೆ ಅಳವಡಿಸುವುದು ಹಾಗೂ ಅದರ ಉಪಯುಕ್ತತೆಯನ್ನು ಕುರಿತು ಕೃಷಿ ಅಧಿಕಾರಿಗಳಾದ ನಾಗರಾಜ ಅರ್ಕಾಚಾರ್ಯ, ಮೇಘನಾ ತಿಳಿಸಿದರು.