ಹುಬ್ಬಳ್ಳಿ: ನಗರದ ಮಂಟೂರು ರಸ್ತೆಯ ಅರಳಿಕಟ್ಟಿ ಓಣಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಪೂರ್ವ ನಿಯೋಜಿತವಲ್ಲ. ಆದರೆ, ಹಳೇ ವೈಷಮ್ಯದಿಂದ ನಡೆದಿರುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ 20 ಜನರನ್ನು ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ ತಿಳಿಸಿದರು. ಇದು ಗ್ಯಾಂಗ್‌ವಾರ್ ಅಲ್ಲ ಎಂದು ಸ್ಪಷ್ಟಪಡಿಸಿದರಲ್ಲದೇ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಯಾರೇ ಪ್ರಯತ್ನಿಸಿದರೂ ಸುಮ್ಮನೆ ಬಿಡಲ್ಲ ಎಂದು ಇದೇ ವೇಳೆ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಟಿವಿ ಹಾಗೂ ವಿಡಿಯೋ ದೃಶ್ಯಗಳ ಸಾಕ್ಷಿಯಾಗಿ ಇಟ್ಟುಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರು ಇದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ. ಶೀಘ್ರವೇ ಬಂಧಿಸಲಾಗುವುದು ಎಂದರು.ಸೆಟ್ಲಮೆಂಟ್‌ನ ಗಣೇಶ ಜಾಧವ, ಸುಭಾಸ ಬಿಜವಾಡ, ಗೌತಮ ಗಾಯಕವಾಡ, ರಾಘವೇಂದ್ರ ಭಜಂತ್ರಿ, ವಿಶಾಲ ಕರಿಗಾರ, ಮಂಜುನಾಥ ಗಾಯಕವಾಡ, ರಾಜೇಶ ಕೊರವರ, ಶೇಖರ ಯರಕಲ್, ಯಲ್ಲಾಪುರ ಓಣಿಯ ಪವನ ಇಂದರಗಿ, ಹಳೇಹುಬ್ಬಳ್ಳಿ ಅರವಿಂದ ನಗರದ ವಿನಾಯಕ ದೊಂಡಿ, ಬಿಡ್ನಾಳ ಬಸವೇಶ್ವರ ವೃತ್ತದ ಅಶೋಕ ಮಡಿವಾಳವರ, ಮಂಟೂರ ರಸ್ತೆಯ ಜಾಕಿರಹುಸೇನ ಶೇಖ್, ಮಹಮ್ಮದ್ ಹಾದ ಮಿಠಾಯಿಗರ್, ಮೆಹಬೂಬ ಮುಲ್ಲಾ, ಮುರಾದ ಬೇಪಾರಿ, ಅರಳಿಕಟ್ಟಿ ಕಾಲನಿಯ ನರೋತ್ತಮ್ ಸಿಂಗ್ ಬದೋರಿಯಾ, ಕುಮಾರ ಬಿಜಾಪುರ, ಮಜೀದ್ ಬೇಪಾರಿ, ಇಸಾಕ ಬೇಪಾರಿ, ಗಣೇಶ ಪೇಟೆಯ ಸನ್ನಿ ಮುದಮ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಐವರು ರೌಡಿಶೀಟರ್ಸ್, ಮೂವರು ಎಂಒಬಿಗಳಿದ್ದಾರೆ ಎಂದು ತಿಳಿಸಿದರು.
ಸೆಂಟ್ಲಮೆಂಟ್ ಭಾಗದವರು ಅರಳಿಕಟ್ಟಿ ಓಣಿಗೆ ಹೋಗಲ್ಲ. ಅರಳಿಕಟ್ಟಿ ಓಣಿಯವರು ಸೆಟ್ಲೆಮೆಂಟ್ ಭಾಗಕ್ಕೆ ಹೋಗುವುದಿಲ್ಲ. ಬುಧವಾರ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಹೋದ ಸಂದರ್ಭವನ್ನು ಬಳಸಿಕೊಂಡು ಗಲಾಟೆ ಮಾಡಿದ್ದಾರೆ. ಘಟನೆಯಲ್ಲಿ 5ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಎರಡು ಗುಂಪಿನ ಕೆಲ ವ್ಯಕ್ತಿಗಳ ಮಧ್ಯೆ ವೈಯಕ್ತಿಕ ದ್ವೇಷವಿತ್ತು. ಅದೇ ಕಾರಣಕ್ಕೆ ಈ ಘರ್ಷಣೆ ನಡೆದಿದ್ದು, ಮಾರಕಾಸ್ತ್ರ ಬಳಸಿದ ವ್ಯಕ್ತಿ ಯಾರೆಂದು ಗುರುತಿಸಲಾಗಿದೆ. ಆತನ ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದರು.ಎರಡು ಗುಂಪುಗಳಿಗೆ ಯಾವುದೇ ನಾಯಕನಿಲ್ಲ. ಅಪರಾಧ ಕೃತ್ಯದಲ್ಲಿ ತೊಡಗಿದಾಗ ಯಾರೇ ಇದ್ದರೂ ಆರೋಪಿಗಳಾಗಿರುತ್ತಾರೆ. ಇದು ಗ್ಯಾಂಗ್ ವಾರ್ ಅಲ್ಲ. ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಾಗಿದೆ. ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡಲಾಗಿದೆ. ಸಾಕಷ್ಟು ಖಾತೆ ಸ್ಥಗಿತಗೊಳಿಸಲಾಗಿದೆ. ಕೆಲವರ ಮೇಲೆ ಪ್ರಕರಣಗಳನ್ನು ಸಹ ದಾಖಲಿಸಲಾಗಿದೆ ಎಂದರು.
ಆದರೆ, ಮಂಟೂರ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಜಗದೀಶ ಹಾಗೂ ರಾಠೋಡ ಎಂಬುವರ ಸಕಾಲಿಕ ಪ್ರವೇಶದಿಂದ ಎರಡೂ ಗುಂಪಿನ ನಡುವೆ ದೊಡ್ಡ ಅನಾಹುತ ಆಗುವುದು ತಪ್ಪಿದೆ ಎಂದರು.ಅಪರಾಧ ಕೃತ್ಯಗಳನ್ನು ತಡೆಗಟ್ಟಲು ರೌಡಿಶೀಟರ್ ಹಾಕುವ ಕೆಲಸ ನಿರಂತರವಾಗಿ ಮುಂದುವರಿದಿದೆ. ಇನ್ನು ಈ ಹಿಂದೆ ರೌಡಿಶೀಟರ್ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗಿದವರ ಮನೆ ಮೇಲೆ ದಾಳಿ ನಡೆಸಿದಂತೆ ಮತ್ತೊಂದು ಬಾರಿ ದಾಳಿ ನಡೆಸಲಿದ್ದೇವೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ ಮಾಹಿತಿ ನೀಡಿದರು.
ತಪ್ಪು ಮಾಡಿಲ್ಲ ಬಿಟ್ಟುಬಿಡಿ: ನಮ್ಮ ಮಕ್ಕಳು ಅಮಾಯಕರು, ನಮ್ಮ ಮಗನಿಗೆ ಹೃದಯ ಕಾಯಿಲೆ ಇದೆ. ಪೊಲೀಸರು ಸುಖಾಸುಮ್ಮನೆ ಕರೆದುಕೊಂಡು ಬಂದಿದ್ದಾರೆ. ಮಕ್ಕಳನ್ನು ಬಿಟ್ಟು ಬಿಡಿ ಎಂದು ಪಾಲಕರು ಕಮಿಷನರ್ ಎದುರು ಗೋಗರೆದ ಘಟನೆಯೂ ನಡೆಯಿತು.ಶಹರ ಠಾಣೆಯಲ್ಲಿ ಪೊಲೀಸ್ ಕಮಿಷನರ್ ಮಾಧ್ಯಮದವರಿಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ಬಂಧಿತ ಆರೋಪಿಗಳ ಪಾಲಕರು ಆಗಮಿಸಿ, ನಮ್ಮ ಮಗನಿಗೆ ಹೃದಯ ಕಾಯಿಲೆ ಇದೆ. ಏನಾದರೂ ಹೆಚ್ಚು ಕಡಿಮೆಯಾದರೆ ಪೊಲೀಸರೇ ಹೊಣೆ ಎಂದು ಕೆಲ ಪಾಲಕರು ಹೈಡ್ರಾಮಾ ಮಾಡಿದರೆ, ಕೆಲವರು ತಮ್ಮ ಮಕ್ಕಳು ಅಮಾಯಕರು, ಪೊಲೀಸರು ಸುಖಾಸುಮ್ಮನೆ ಕರೆದುಕೊಂಡು ಬಂದಿದ್ದಾರೆ ಎಂದು ಕೂಡ ಹೇಳುತ್ತಿದ್ದರು.
ಈ ಸಂದರ್ಭದಲ್ಲಿ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿಗಳಾದ ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯಕ, ಸಿಪಿಐಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.