ಕೊಪ್ಪಳ: ನಗರದ ಸಿಂದೋಗಿ ರಸ್ತೆಯಲ್ಲಿರುವ 2,000 ಗುಂಪು ಮನೆಗಳ ಯೋಜನೆ ಪೂರ್ಣಗೊಂಡು 13 ವರ್ಷ 10 ತಿಂಗಳು ಕಳೆದರೂ ಅರ್ಹ ಬಡ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸದ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಗುರುವಾರ ಪಾದಯಾತ್ರೆ ನಡೆಸಲಾಯಿತು.
ಯೋಜನೆಯಡಿ ಈಗಾಗಲೇ 1,490 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ 510 ಮನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿದೆ. ಆದರೂ ಹಕ್ಕುಪತ್ರ ವಿತರಿಸಿ, ಮನೆಗಳನ್ನು ಹಸ್ತಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಆರೋಪಿಸಿತು.
ಗುಂಪು ಮನೆಗಳ ನಿರ್ಮಾಣಕ್ಕೆ ಸುಮಾರು ₹12.69 ಕೋಟಿ ವೆಚ್ಚ ಮಾಡಲಾಗಿದೆ. ಕಾಮಗಾರಿಯಲ್ಲಿ ಹಣ ದುರುಪಯೋಗ ಹಾಗೂ ಕಳಪೆ ಕಾಮಗಾರಿ ನಡೆದಿದೆ ಎಂಬ ಆರೋಪದ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಆದರೆ ಈ ದೂರು ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಬಾರದು ಎಂಬುದಕ್ಕೆ ಸಂಬಂಧಿಸಿದ್ದಲ್ಲ. ಲೋಕಾಯುಕ್ತ ತನಿಖೆಯ ನೆಪದಲ್ಲಿ ಬಡವರಿಗೆ ವಸತಿ ಕಲ್ಪಿಸುವುದನ್ನು ತಡೆಹಿಡಿಯುವುದು ನ್ಯಾಯಸಮ್ಮತವಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.ಸ್ವಂತ ಸೂರು ಹೊಂದುವ ಆಶಯದಿಂದ ಹಲವು ಫಲಾನುಭವಿಗಳು 13 ವರ್ಷಗಳ ಹಿಂದೆ ₹30 ಸಾವಿರ ವಂತಿಗೆ ಪಾವತಿಸಲು ಚಿನ್ನಾಭರಣ ಹಾಗೂ ಮನೆಯ ಸಾಮಗ್ರಿಗಳನ್ನು ಮಾರಾಟ ಮಾಡಿದ್ದರು. ಇಷ್ಟೊಂದು ವರ್ಷ ಕಳೆದರೂ ಮನೆ ಸಿಗದಿರುವುದು ನೋವಿನ ಸಂಗತಿ ಎಂದರು.
ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು, ತಾಲೂಕು ಅಧ್ಯಕ್ಷ ಮಹೇಶ ಅಲ್ಲಾನಗರ, ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮ ಓಜಿನಹಳ್ಳಿ ಪಾಲ್ಗೊಂಡಿದ್ದರು.