ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ರೈತ ದಿನಾಚರಣೆ
- ರೈತ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಿರಿಧಾನ್ಯಹಬ್ಬಉದ್ಘಾಟನೆ---
ಕನ್ನಡಪ್ರಭ ವಾರ್ತೆ ಮೈಸೂರುಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳನ್ನು ಬೆಳೆಸಿ ಮತ್ತು ಬಳಸಿ. ಹಿಂದೆ ಬಡವರ ಆಹಾರವಾಗಿದ್ದ ಸಿರಿಧಾನ್ಯಗಳು ಇಂದು ಶ್ರೀಮಂತರ ಆಹಾರದ ಪ್ರಮುಖ ಭಾಗವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ಭಾರತ ಹಳ್ಳಿಗಾಡಿನ ದೇಶ. ನಮ್ಮ ಮೂಲಭೂತ ಕಸುಬು ವ್ಯವಸಾಯ. ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಹಳ್ಳಿಗಳು ಉದ್ಧಾರ ಆಗದ ಹೊರತು ದೇಶ ಉದ್ಧಾರವಾಗುವುದಿಲ್ಲ ಎಂಬ ಮಹಾತ್ಮ ಗಾಂಧೀಜಿ ಅವರ ಮಾತು ಹಾಗೂ ರೈತನಿಗೆ ಜಮೀನಿರುವುದು ಆತನಿಗೆ ಸಾಮಾಜಿಕ ಘನತೆ ತಂದುಕೊಡುತ್ತದೆ ಎಂಬ ಅಂಬೇಡ್ಕರ್ ಅವರ ಅಭಿಪ್ರಾಯ ಬಹಳ ಅರ್ಥಗರ್ಭಿತವಾದವು. ಭಾರತದಲ್ಲಿ ಚೌದರಿ ಸಿಂಗ್ ಅವರ ನೇತೃತ್ವದಲ್ಲಿ ರೈತ ಚಳುವಳಿ ಪರಿಣಾಮಕಾರಿಯಾಗಿತ್ತು. ಅವರ ಸ್ಮರಣಾರ್ಥ ಈ ದಿನ ರೈತ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರು.
ಸಿ.ಎಫ್.ಟಿ.ಆರ್.ಐ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಅವರು ಮಾತನಾಡಿ, ಸಿ.ಎಫ್.ಟಿ.ಆರ್.ಐ ಸಂಸ್ಥೆಯು 1950ರಲ್ಲಿ ಮೈಸೂರಿನಲ್ಲಿ ಆರಂಭವಾಗಿ ರೈತರಿಂದ ಉತ್ಪಾದನೆಯಾದ ವಸ್ತುಗಳಿಗೆ ಮೌಲ್ಯವರ್ಧನೆ ಮಾಡುವ ಕೆಲಸವನ್ನು ನಿರ್ವಹಿಸುತ್ತಿದೆ. ಸಿರಿಧಾನ್ಯಗಳ ಕುರಿತು ಪ್ರಸ್ತುತ 45 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, 85 ಜನ ಈ ತಂತ್ರಜ್ಞಾನವನ್ನು ಕಲಿಯುತ್ತಿದ್ದಾರೆ. ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ 15 ಜನ ಮಹಿಳೆಯರ ಒಳಗೊಂಡ ಆಸರೆ ಸಂಜೀವಿನಿ ಉದ್ಯೋಗ ತಂಡವು ನಮ್ಮ ಸಂಸ್ಥೆಯಲ್ಲಿ ನಾಲ್ಕು ತಂತ್ರಜ್ಞಾನಗಳ ಕುರಿತು ತರಬೇತಿ ಪಡೆದು ಈಗ ಅಮೆಜಾನ್, ಫ್ಲಿಪ್ ಕಾರ್ಟ್ ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಳೆದ ಬಾರಿ ಪಿಎಂಎಫ್ ಎಂಇ ಯೋಜನೆಯಡಿಯಲ್ಲಿ ಸಾವಿರಕ್ಕೂ ಅಧಿಕ ರೈತರಿಗೆ ತರಬೇತಿ ನೀಡಲಾಗಿತ್ತು. ರೈತರಿಗೆ ನಮ್ಮ ಸಂಸ್ಥೆಯಲ್ಲಿ ತಾಂತ್ರಿಕ ಸಹಾಯ ಹಾಗೂ ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಜಂಟಿ ನಿರ್ದೇಶಕ ಡಾ. ಚಂದ್ರಶೇಖರ್, ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡರಾದ ಕಲ್ಮಳ್ಳಿ ಶಿವಕುಮಾರ್, ಬನ್ನೂರು ನಾರಾಯಣ್ ಮೊದಲಾದವರು ಪಾಲ್ಗೊಂಡಿದ್ದರು.
-----------------