ಕನ್ನಡಪ್ರಭ ವಾರ್ತೆ ತುಮಕೂರುಪರಿಸರವನ್ನು ಉಳಿಸಿ ಬೆಳೆಸಿದಾಗ ಮಾತ್ರ ಮುಂದಿನ ಪೀಳಿಗೆಯ ಜೀವನ ಸುಖಮಯವಾಗಿರಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ಜಯಂತ್‌ಕುಮಾರ್ ಹೇಳಿದರು. ನಗರದ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾವು ಉಳಿದು, ಬೇರೆಯವರನ್ನು ಉಳಿಸಬೇಕು ಎಂಬ ತತ್ವದಂತೆ ಜೀವನ ಸಾಗಿಸಬೇಕು. ಎಲ್ಲಾ ಮಕ್ಕಳು ಸಸಿಗಳನ್ನು ನೆಡುವುದರ ಮೂಲಕ ಪರಿಸರವನ್ನು ಉಳಿಸಿ ಬೆಳೆಸಬೇಕು. ಶಾಲೆಯು ಉತ್ತಮ ವಾತಾವರಣವನ್ನು ಹೊಂದಿದೆ. ಮಕ್ಕಳಿಗೆ ಕಲಿಕೆಗೆ ಪೂರಕವಾಗಿದೆ. ಇಂತಹ ವಾತಾವರಣದಲ್ಲಿ ಕಲಿತ ಮಕ್ಕಳು ದೇಶಕ್ಕೆ ಉತ್ತಮ ಆಸ್ತಿಯಾಗುತ್ತಾರೆ ಎಂದರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಮಾತನಾಡಿ, ಪರಿಸರದೊಂದಿಗೆ ನಮ್ಮ ಜೀವನ ಹೊಂದಾಣಿಕೆಯಾಗಬೇಕು, ನಾವು ಉಸಿರಾಡಬೇಕಾದರೆ ಗಾಳಿ ಅವಶ್ಯಕತೆ ಇದೆ. ಉತ್ತಮ ಗಾಳಿ ದೊರೆಯಬೇಕಾದರೆ ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು. ಗಿಡಗಳು ಇರುವುದರಿಂದ ಈ ಶಾಲೆಯ ವಾತಾವರಣ ಸುಂದರ ಮತ್ತು ಆಶಾದಾಯಕವಾಗಿದೆ. ಇಂತಹ ವಾತಾವರಣದಲ್ಲಿ ಕಲಿತ ಮಕ್ಕಳು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ಮಾತನಾಡಿ, ಧರ್ಮೋ ರಕ್ಷಿತ ರಕ್ಷಿತಂ ಎಂಬ ವೃಕೋ ರಕ್ಷಿತಿ ರಕ್ಷಿತಂ, ಯಾರು ವೃಕ್ಷವನ್ನು ರಕ್ಷಣೆ ಮಾಡುತ್ತಾರೋ ಅವರನ್ನು ವೃಕ್ಷಗಳು ರಕ್ಷಣೆ ಮಾಡುತ್ತವೆ. ಬಹಳ ಹಿಂದಿನ ಕಾಲದಿಂದಲೂ ನಮ್ಮ ಜನ ಗಿಡಮರಗಳನ್ನು ರಕ್ಷಣೆ ಮಾಡಿದ್ದರು. ಇದರಿಂದ ನೆರಳು, ಮಳೆ ಉತ್ತಮ ಮಳೆ ಬೆಳೆಗಳು ಆಗುತ್ತಿತ್ತು. ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯ ತನ್ನ ಉಳಿವಿಗಾಗಿ ಗಿಡ, ಮರಗಳನ್ನು ನಾಶ ಮಾಡುತ್ತಾ ಬಂದಿದ್ದಾನೆ. ಆದ್ದರಿಂದ ನಮಗೆ ಮಳೆ ಹಾಗೂ ಆಹಾರದ ಕೊರತೆ ಎದುರಾಗುತ್ತಿದೆ. ಉಸಿರಾಟಕ್ಕೆ ಬೇಕಾದ ಆಮ್ಲಜನಕದ ಕೊರತೆ ಉಂಟಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಆಮ್ಲಜನಕವನ್ನು ಖರೀದಿಸುವ ಕಾಲ ದೂರವಿಲ್ಲ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಗಿಡ, ಮರಗಳನ್ನು ಬೆಳೆಸಿ, ಪೋಷಿಸುವ ಮೌಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಸಿ. ಶಿವಮೂರ್ತಿ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ೨೦೨೪ ರ ಘೋಷವಾಕ್ಯ "ಭೂಮರುಸ್ಥಾಪನೆ, ಮರು ಭೂಮಿಕರಣ ಹಾಗೂ ಬರ ತಡೆಯುವಿಕೆ " ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿ, ಶಿಕ್ಷಕ, ಮಕ್ಕಳು ಪಾಲ್ಗೊಂಡಿದ್ದರು. ಉಪ ಪರಿಸರ ಅಧಿಕಾರಿ ಎಚ್.ವಿ. ಪಲ್ಲವಿ ಸ್ವಾಗತಿಸಿದರು. ಶಿಕ್ಷಕ ಪಿ.ಜಿ. ತಿಮ್ಮೇಗೌಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.