ರೋಣ: ವಿಧಾನಸಭೆ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ರೋಣ ಪಟ್ಟಣಕ್ಕೆ ಶನಿವಾರ ಆಗಮಿಸಿದ ಜಿ.ಎಸ್. ಪಾಟೀಲ ಅವರನ್ನು ಸೂಡಿವೃತ್ತದಲ್ಲಿ ಆರತಿ ಬೆಳಗಿ, ಬೃಹತ್ ಸೇಬು ಹಣ್ಣಿನ ಹಾರ ಹಾಕಿ ಭವ್ಯವಾಗಿ ಸ್ವಾಗತಿಸಲಾಯಿತು.
ಗಜೇಂದ್ರಗಡದಿಂದ ರೋಣ ಪಟ್ಟಣಕ್ಕೆ ಆಗಮಿಸಿ ಶಿವಾನಂದ ಮಠ, ಸಿದ್ಧಾರೂಢ ಮಠಕ್ಕೆ ತೆರಳಿ ದರ್ಶನ ಪಡೆದು, ಬಳಿಕ ಸೂಡಿ ವೃತ್ತದಲ್ಲಿ ತೆರೆದ ವಾಹನದಲ್ಲಿ ಅಭಿಮಾನಿಗಳನ್ನುದ್ದೇಶಿ ಮಾತನಾಡಿದ ಅವರು, ನಿಮ್ಮ ಪ್ರೀತಿ ಒಡನಾಟ ನನ್ನನ್ನು ಭಾವುಕನಾಗಿಸುತ್ತಿದೆ. ರೋಣ ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ನೀಡಿದ ಬೆಂಬಲ, ನಿಮ್ಮೆಲ್ಲರ ಆಶೀರ್ವಾದವೇ ಈ ಮಟ್ಟಕ್ಕೆ ಬೆಳೆಯಲು ಕಾರಣ. ಈ ಪ್ರೀತಿ, ಅಭಿಮಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಅಭಿವೃದ್ಧಿಗೆ ಕೊರತೆ ಮಾಡಲ್ಲ: ವಿಧಾನಸಭಾಧ್ಯಕ್ಷರಾದರೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಯಾರೂ ಅಂದುಕೊಳ್ಳಬಾರದು. ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗುವುದು. ಅಭಿವೃದ್ಧಿ ಕುಂಠಿತವಾಗದಂತೆ ನೋಡಿಕೊಳ್ಳುತ್ತೇನೆ. ಕ್ಷೇತ್ರದ ಜನರಿಗೆ ತಕ್ಷಣದಲ್ಲೂ ಸ್ಪಂದಿಸಿ, ಸರ್ಕಾರದ ಸೌಲಭ್ಯ ಕಲ್ಪಿಸುವಲ್ಲಿ ಶ್ರಮಿಸುತ್ತೇನೆ ಎಂದರು.ದೇವಸ್ಥಾನಗಳಿಗೆ ಭೇಟಿ: ಗಜೇಂದ್ರಗಡದಿಂದ ರೋಣಕ್ಕೆ ಆಗಮಿಸುತ್ತಿದ್ದಂತೆ ಮೊದಲಿಗೆ ಶಿವಾನಂದ ಮಠ, ಸಿದ್ಧಾರೂಢ ಮಠಕ್ಕೆ ತೆರಳಿ ದರ್ಶನ, ಬಳಿಕ ಸೂಡಿ ವೃತ್ತದಲ್ಲಿ ಸಾರ್ವಜನಿಕರು, ಅಭಿಮಾನಗಳನ್ನುದ್ದೇಶಿಸಿ ಮಾತನಾಡಿದರು. ತದನಂತರ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಮಾರುತೇಶ್ವರ ದೇವಸ್ಥಾನ, ಹೊನ್ನತ್ತೆವ್ವದೇವಿ ದೇವಸ್ಥಾನ, ಹಜರತ್ ಬೆಧಡಕ್ ಶಾವಲಿ ದರ್ಗಾ ದರ್ಶನ ಪಡೆದು, ತಮ್ಮ ನಿವಾಸಕ್ಕೆ ತೆರಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಜಿ. ಪಾಟೀಲ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ, ಮುಖಂಡರಾದ ಎಚ್.ಎಸ್. ಸೊಂಪುರ, ಶರಣಗೌಡ ಪಾಟೀಲ ಸರ್ಜಾಪುರ, ಮಲ್ಲಯ್ಯ ಗುರುಬಸಪ್ಪನಮಠ, ಅಪ್ಪು ಗಿರಡ್ಡಿ, ಸಂಗು ನವಕಗುಂದ, ಅಭಿಷೇಕ ನವಲಗುಂದ, ಮುತ್ತು ನವಲಗುಂದ, ಸಿದ್ದು ಪಾಟೀಲ, ಬಸವರಾಜ ತಳವಾರ, ಸೋಮು ನಾಗರಾಜ, ಪಂಚಯ್ಯ ಹಿರೇಮಠ, ಗದಿಗೆಪ್ಪ ಕಿರೇಸೂರ, ಮಲೀಕ ಯಲಿಗಾರ, ಅರ್ಜುನ ಕೊಪ್ಪಳ, ಸಂಗಪ್ಪ ಜಿಡ್ಡಿಬಾಗೀಲ, ದಾವಲಸಾಬ ಬಾಡಿನ ಇದ್ದರು.