ಮುಂಡರಗಿ: ತಾಲೂಕಿನ ಬೀಡನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಉಪ್ಪಿಟ್ಟು ಸೇವಿಸುವಾಗ ಅದರಲ್ಲಿ ಹಲ್ಲಿ ಕಾಣಿಸಿಕೊಂಡಿದೆ. ಕೆಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದು, ಅಸ್ವಸ್ಥರಾದ ವಿದ್ಯಾರ್ಥಿಗಳಿಗೆ ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ತಟ್ಟೆಯಲ್ಲಿ ಹಲ್ಲಿ ಕಾಣಿಸಿಕೊಂಡಿದ್ದ ವಿದ್ಯಾರ್ಥಿನಿಗೆ ಸ್ವಲ್ಪ ಸಮಯದ ನಂತರ ವಾಂತಿ, ತಲೆಸುತ್ತು, ಹೊಟ್ಟೆನೋವು ಕಾಣಿಸಿಕೊಂಡಿತು. ಶಿಕ್ಷಕರು ತಕ್ಷಣ ವಿದ್ಯಾರ್ಥಿನಿಯನ್ನು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು. ನಂತರದಲ್ಲಿ ಉಪ್ಪಿಟ್ಟು ಸೇವಿಸಿದ ಹಲವು ವಿದ್ಯಾರ್ಥಿಗಳಿಗೆ ಹೊಟ್ಟೆನೋವು, ವಾಂತಿ ಆರಂಭವಾಯಿತು. ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ಗ್ರಾಮಸ್ಥರು ಬೈಕ್, ಇತರ ಲಭ್ಯವಿದ್ದ ವಾಹನಗಳ ಮೂಲಕ ತಾಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದರು.
ವಿಷಯ ತಿಳಿಯುತ್ತಿದ್ದಂತೆ ಬಿಇಒ ಗಂಗಾಧರ ಅಣ್ಣೀಗೇರಿ, ಮುಖಂಡರಾದ ಲಿಂಗರಾಜಗೌಡ ಪಾಟೀಲ, ವೈ.ಎನ್. ಗೌಡರ್, ಆನಂದಗೌಡ ಪಾಟೀಲ, ಬೀಡನಾಳ ಗ್ರಾಮದ ಹಿರಿಯರು, ಸಿಪಿಐ ಅಯ್ಯನಗೌಡ ಪಾಟೀಲ ಆಗಮಿಸಿ ಚಿಕಿತ್ಸೆ ಕೊಡಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದರು. ತಾಲೂಕು ಸರ್ಕಾರಿ ಆಸ್ಪತ್ರೆಯ ಎಲ್ಲ ವೈದ್ಯಾಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಬಂದು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿದರು. ಶಾಲೆಯಲ್ಲಿ ಒಟ್ಟೂ 245 ವಿದ್ಯಾರ್ಥಿಗಳಿದ್ದು, 160 ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.ಮಧ್ಯಾಹ್ನ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅನೇಕ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ವೈ. ವಿಭೂತಿ ''''ಕನ್ನಡಪ್ರಭ''''ದೊಂದಿಗೆ ಮಾತನಾಡಿ, ತಕ್ಷಣವೇ ನಾಲ್ವರು ಬಿಸಿಯೂಟ ತಯಾರಿಕರನ್ನು ಕರ್ತವ್ಯದಿಂದ ತೆಗೆದುಹಾಕುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಶಿಫಾರಸು ಮಾಡಲಾಗಿದೆ. ಗದಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿಗಳು ಬೀಡನಾಳ ಶಾಲೆಗೆ ಭೇಟಿ ನೀಡಿ ಆಹಾರ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಪ್ರಾಥಮಿಕ ವರದಿಯನ್ನು ಇಲಾಖೆಗೆ ಸಲ್ಲಿಸಲಾಗಿದೆ. ಧಾರವಾಡದಲ್ಲಿ ಸಭೆಗೆ ತೆರಳಿದ್ದರಿಂದ ಆಸ್ಪತ್ರೆಗೆ ಬರುವುದು ತಡವಾಯಿತು ಎಂದು ತಿಳಿಸಿದರು.