ಜಿಎಸ್‌ಟಿ ಕಡಿತ: ಬೈಕ್‌, ಕಾರುಗಳ ಖರೀದಿಗೆ ಶೋರೂಂಗೆ ಜನರ ದಂಡು- ಬೈಕ್‌ 11000, ಕಾರು 1.20 ಲಕ್ಷ ರು.ವರೆಗೂ ಅಗ್ಗ

KannadaprabhaNewsNetwork |  
Published : Sep 23, 2025, 01:03 AM IST

ಸಾರಾಂಶ

ಕೇಂದ್ರ ಸರ್ಕಾರದ ಜಿಎಸ್ಟಿ 2.0 ಅಧಿಕೃತವಾಗಿ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಸೋಮವಾರ ಖರೀದಿ ಪ್ರಮಾಣದಲ್ಲೂ ಸ್ವಲ್ಪ ಮಟ್ಟಿನ ಏರಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನವರಾತ್ರಿ ಆರಂಭದ ಮೊದಲ ದಿನವೇ ಕೇಂದ್ರ ಸರ್ಕಾರದ ಜಿಎಸ್ಟಿ 2.0 ಅಧಿಕೃತವಾಗಿ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಆಟೋಮೊಬೈಲ್‌ ಉಪಕರಣಗಳು, ಹಾಲಿನ ಉತ್ಪನ್ನಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಕೃಷಿ ಉಪಕರಣಗಳು ಹಾಗೂ ದಿನನಿತ್ಯದ ವಸ್ತುಗಳ ದರದಲ್ಲಿ ಇಳಿಕೆಯಾಗಿದ್ದು ಸೋಮವಾರ ಖರೀದಿ ಪ್ರಮಾಣದಲ್ಲೂ ಸ್ವಲ್ಪ ಮಟ್ಟಿನ ಏರಿಕೆಯಾಗಿದೆ.

ಜಿಎಸ್‌ಟಿ ಇಳಿಕೆಯಿಂದ ಬೈಕು, ಕಾರುಗಳ ಶೋ ರೂಂಗಳಲ್ಲಿ ಗ್ರಾಹಕರ ಸಂಖ್ಯೆ ಎಂದಿಗಿಂತ ಸ್ವಲ್ಪ ಹೆಚ್ಚಳವಾಗಿತ್ತು. ವಾಹನಗಳ ಕುರಿತು ವಿಚಾರಣೆ, ಬುಕಿಂಗ್‌ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಚೇತರಿಕೆ ಕಂಡಿತ್ತು. ವಿವಿಧ ಬೈಕುಗಳ ಬೆಲೆಯಲ್ಲಿ 6 ಸಾವಿರ ರು.ಗಳಿಂದ 11 ಸಾವಿರ ರು.ಗಳವರೆಗೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಶೋ ರೂಂಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು.

ಕಾರುಗಳ ದರ ಇಳಿಕೆಯಾಗುವ ಕುರಿತು ಕೆಲ ಕಾರು ಕಂಪನಿಗಳು ಈಗಾಗಲೇ ಜಾಹೀರಾತುಗಳ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದ್ದವು. ಹಲವು ಕಾರುಗಳ ದರದಲ್ಲಿ ಸುಮಾರು 60 ಸಾವಿರದಿಂದ 1.20 ಲಕ್ಷ ರು.ಗಳವರೆಗೆ ಬೆಲೆ ಇಳಿಕೆಯಾಗಿದೆ. ಇದರಿಂದಾಗಿ ಕಾರುಗಳ ಕುರಿತು ಮಾಹಿತಿಗಾಗಿ ಜನ ಶೋ ರೂಂಗಳತ್ತ ಬರುತ್ತಿದ್ದ ದೃಶ್ಯ ಕಂಡುಬಂತು.

ಜಿಎಸ್‌ಟಿ 2.0ನಿಂದ ಅಡುಗೆ ಮನೆಯ ಸಾಮಗ್ರಿಗಳ ಬೆಲೆಯಲ್ಲೂ ಸ್ವಲ್ವ ಇಳಿಕೆಯಾಗಿದೆ. ಮುಖ್ಯವಾಗಿ ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಶೇ.18 ಮತ್ತು ಶೇ.12ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಇದರಿಂದ ಪನ್ನೀರ್‌, ತುಪ್ಪ, ಬೆಣ್ಣೆ, ಡ್ರೈಫ್ರೂಟ್‌, ಐಸ್‌ಕ್ರೀಂ ಗಳ ಖರೀದಿಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಶಾಂಪೂ, ಸೋಪ್‌, ಸೌಂದರ್ಯ ವರ್ಧಕಗಳ ಆನ್‌ಲೈನ್‌ ಭರಾಟೆ ಜೋರಾಗಿಯೇ ಇತ್ತು. ಹಬ್ಬದ ಹಿನ್ನೆಲೆಯಲ್ಲಿ ಹಾಲಿನ ಉತ್ಪನ್ನಗಳ ಖರೀದಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಬೇಕರಿ ಮಾಲೀಕ ನಾರಾಯಣಸ್ವಾಮಿ.

ಹೋಟೆಲ್‌ ಉದ್ಯಮಿಗಳ ಸ್ವಾಗತ:

ಜಿಎಸ್‌ಟಿ ಇಳಿಕೆಯನ್ನು ಸ್ವಾಗತಿಸಿರುವ ಹೋಟೆಲ್‌ ಉದ್ಯಮಿಗಳು, ಅಡುಗೆ ಮಾಡಲು 60ರಿಂದ 70 ಅಡುಗೆ ಪದಾರ್ಥಗಳನ್ನು ಬಳಸುತ್ತೇವೆ. ಅದರಲ್ಲಿ 10ರಿಂದ 12 ಪದಾರ್ಥಗಳ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಈಗಾಗಲೇ ಹೋಟೆಲ್‌ ಉದ್ಯಮ ನಷ್ಟದಲ್ಲಿದ್ದು, ಜಿಎಸ್‌ಟಿ ಇಳಿಕೆಯಿಂದ ಸ್ವಲ್ಪ ಚೇತರಿಕೆ ಕಾಣುಬಹುದೆಂದು ನಿರೀಕ್ಷಿಸಲಾಗಿದೆ. ಇದರಿಂದ ನಾವು ಆಹಾರ ಪದಾರ್ಥಗಳ ಬೆಲೆ ಕಡಿಮೆಗೊಳಿಸಲು ಸಾಧ್ಯವಿಲ್ಲ. ಗ್ಯಾಸ್‌ ಬೆಲೆಯಲ್ಲಿ ಇಳಿಕೆಯಾಗಿಲ್ಲ. ಮತ್ತಷ್ಟು ರಿಯಾಯ್ತಿಯನ್ನು ಹೋಟೆಲ್‌ ಉದ್ಯಮ ಎದುರು ನೋಡುತ್ತಿದೆ ಎನ್ನುತ್ತಾರೆ ಹೋಟೆಲ್‌ ಮಾಲೀಕ ಕೃಷ್ಣರಾಜ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!