ಶಿರಸಿ: ಭಾರತವು ಆರ್ಥಿಕವಾಗಿ ಸಶಕ್ತರಾಗುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ಟಿ ದರವನ್ನು ಹೊಸ ಮಾದರಿಯಲ್ಲಿ ಪರಿವರ್ತನೆಗೊಳಿಸಿ, ಸರಳೀಕರಣಗೊಳಿಸಿದೆ. ಇದರಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಬಹಳ ಪ್ರಯೋಜನವಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಆರ್ಥಿಕ ತಜ್ಞ ಎಂದೇ ಹೆಸರಾಗಿರುವ ಮನಮೋಹನ್ ಸಿಂಗ್ ಅವರಿಗೂ ಆಗಲಿಲ್ಲ. ಜಿಎಸ್ಟಿ ಬಂದಿರೋದು ಅತ್ಯುತ್ತಮ ಕಾರ್ಯ ಆಗಿದೆ. ರೈತರಿಗೆ, ಆರೋಗ್ಯ, ಶಿಕ್ಷಣ, ಉತ್ಪಾದನಾ, ಮಾರುಕಟ್ಟೆ ಕ್ಷೇತ್ರಕ್ಕೆ ಅನುಕೂಲ ಆಗಲಿದೆ. ಬರಲಿರುವ ದೀಪಾವಳಿ ಕೊಡುಗೆಯಾಗಿ ತೆರಿಗೆ ವಿನಾಯತಿ ಸಿಗಲಿದೆ. ಪ್ರತಿಯೊಬ್ಬರು ಸರಳವಾಗಿ ವ್ಯವಹಾರ ನಡೆಸಲು ಅನುಕೂಲ ಆಗಲಿದೆ. ಈ ಸರಳೀಕರಣದಿಂದ ಉತ್ಪಾದನೆ ಹೆಚ್ಚಳವಾಗುತ್ತದೆ. ಗ್ರಾಹಕರಿಗೆ ಖರೀದಿ ಮಾಡುವ ಸಾಮರ್ಥ್ಯ ಹೆಚ್ಚಳ ಆಗಲಿದೆ. ಜೀವನಾವಶ್ಯಕ ಔಷಧಿಗಳ ತೆರಿಗೆ ಕಡಿಮೆ ಆಗಲಿದೆ. ಇನ್ನಷ್ಟು ಸುಲಭವಾಗಿ ಸಿಗಲಿದೆ. ವಿಮಾ ಕ್ಷೇತ್ರಕ್ಕೆ, ಪೆಟ್ರೋಲ್ ಇಂಧನ ತೆರಿಗೆಯೂ ಕಡಿಮೆಯಾಗಲಿದೆ ಎಂದರು.
ಸ್ವಾತಂತ್ರ್ಯಾ ನಂತರ 50 ವರ್ಷ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಆಡಳಿತ ನಡೆಸಿದ್ದರೂ ಭಾರತೀಯರ ಪ್ರಗತಿಗೆ ವೈಫಲ್ಯ ಆಗಿತ್ತು. ಶಿಕ್ಷಣ, ಆರೋಗ್ಯ, ಬಡವರು, ಯಾವುದೂ ಅವರಿಗೆ ಮುಖ್ಯವಾಗಿರಲಿಲ್ಲ. ಸದಾ ಮತ ಬ್ಯಾಂಕ್ ರಾಜಕಾರಣ ಮಾಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ 11 ವರ್ಷದಿಂದ ಭಾರತ ಏನು ಎಂಬುದನ್ನು ಜಗತ್ತಿಗೆ ತಿಳಿಸುತ್ತಿದೆ. ಪರಕೀಯರ ಆಳ್ವಿಕೆಯ ಬೆಂಬಲ, ಸಹಕಾರ ಬೇಡ ಎಂಬುದನ್ನು ಪ್ರಧಾನಿ ಮೋದಿ ಮಾಡಿ ತೋರಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ವಿಭಾಗ ಸಂಚಾಲಕ ಆರ್.ಡಿ.ಹೆಗಡೆ ಜಾನ್ಮನೆ, ಜಿಲ್ಲಾ ವಕ್ತಾರ ಸದಾನಂದ ಭಟ್ಟ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಕಚೇರಿ ಕಾರ್ಯದರ್ಶಿ ಶ್ರೀರಾಮ ನಾಯ್ಕ, ಜಿಲ್ಲಾ ಮಾಧ್ಯಮ ಸಂಚಾಲಕ ಡೋನಿ ಡಿಸೋಜ, ಪ್ರಮುಖರಾದ ಆರ್.ವಿ.ಹೆಗಡೆ ಚಿಪಗಿ, ರವಿಚಂದ್ರ ಶೆಟ್ಟಿ ಮತ್ತಿತರರು ಇದ್ದರು.
ತೆರಿಗೆ ಕಡಿಮೆಗೊಳಿಸಿ ದೇಶ ಮುನ್ನಡೆಸುತ್ತೇವೆ ಎಂಬ ಶಕ್ತಿಯನ್ನು ಕೇಂದ್ರ ಸರ್ಕಾರ ತೋರಿಸಿದ್ದು, ಆರ್ಥಿಕ ತಜ್ಞ ಎನ್ನುವ ಮನಮೋಹನ ಸಿಂಗ್ ಅವರಿಗೆ ಜಿಎಸ್ಟಿ ಜಾರಿಗೊಳಿಸಲು ಆಗಿಲ್ಲ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ಟಿ ಅನುಷ್ಠಾನಗೊಳಿಸಿತ್ತು. ಜಿಎಸ್ಟಿಯಿಂದ ಅತ್ಯುತ್ತಮ ವ್ಯವಸ್ಥೆ ನಿರ್ಮಾಣವಾಗಿದೆ. ಎಲ್ಲರೂ ಜಿಎಸ್ಟಿ ಸ್ವಾಗತಿಸಿದ್ದಾರೆ. ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಖರೀದಿ ಶಕ್ತಿ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಭಾರತ ಆರ್ಥಿಕ ಸ್ಥಿತಿ ಇನ್ನಷ್ಟು ಭದ್ರವಾಗುತ್ತದೆ. ಜನರಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಅಧಿಕಾರ ಹಿಡಿಯಲು ಶ್ರಮಿಸುತ್ತಿರುವ ಸಂದರ್ಭದಲ್ಲಿ ಜಿಎಸ್ಟಿ ಸರಳೀಕರಣ ನಿಯಮದಿಂದ ಕಾಂಗ್ರೆಸ್‌ಗೆ ಗರಬಡಿದಿದೆ. ವಿದೇಶಿಗರ, ಎಡಪಂಥೀಯರ, ಹೈಕಮಾಂಡ್ ಕೈಗೊಂಬೆಯಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ವರ್ತಿಸುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.ಕಾಂಗ್ರೆಸ್ ಅಧಿಕಾರಕ್ಕೆ ವಿಲವಿಲ ಎಂದು ಒದ್ದಾಡಿ ಇಂಡಿ ಘಟ್‌ಬಂಧನ್ ಮಾಡುತ್ತಿದೆ. ಅದಕ್ಕೆ ಕೈಗೊಂಬೆಯಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಸ್ವತಂತ್ರವಾಗಿ ನಿರ್ಣಯ ಮಾಡುವ ಸ್ವಾತಂತ್ರ್ಯ ಕಳೆದುಕೊಂಡಿದೆ ಎನ್ನುತ್ತಾರೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.