ಜಿಟಿಡಿ ಅಸಮಾಧಾನ ಅವರ ವೈಯಕ್ತಿಕ ಸಮಸ್ಯೆ

KannadaprabhaNewsNetwork | Published : Feb 2, 2025 11:49 PM

ಸಾರಾಂಶ

ಅವರಿಗೆ ವೈಯುಕ್ತಿಕ ಸಮಸ್ಯೆಗಳಿರಬಹುದು, ಆದರೆ ಅದು ಪಕ್ಷದ ಸಮಸ್ಯೆಯಲ್ಲ. ಅವರ ಅಸಮಾಧಾನ ವೈಯಕ್ತಿಕವಾಗಿ ಇರಬಹುದು, ಪರ್ಸನಲ್ ಅಜೆಂಡಾ ಇರಬಹುದು ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ, ಗೊಂದಲಗಳಿಲ್ಲ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು. ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ಅಸಮಾಧಾನ ಕುರಿತಾಗಿ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಜಿ. ಟಿ. ದೇವೇಗೌಡರು ಆಯಾ ಸಂದರ್ಭಕ್ಕೆ ಅನುಗುಣವಾಗಿ ಮಾತನಾಡುತ್ತಾರೆ ಒಂದೊಂದು ಬಾರಿ ಏಕವಚನದಲ್ಲಿ ಮಾತನಾಡಿದ್ದು ಉಂಟು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಅವರಿಗೆ ವೈಯುಕ್ತಿಕ ಸಮಸ್ಯೆಗಳಿರಬಹುದು, ಆದರೆ ಅದು ಪಕ್ಷದ ಸಮಸ್ಯೆಯಲ್ಲ. ಅವರ ಅಸಮಾಧಾನ ವೈಯಕ್ತಿಕವಾಗಿ ಇರಬಹುದು, ಪರ್ಸನಲ್ ಅಜೆಂಡಾ ಇರಬಹುದು ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ, ಗೊಂದಲಗಳಿಲ್ಲ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ಅಸಮಾಧಾನ ಕುರಿತಾಗಿ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಜಿ. ಟಿ. ದೇವೇಗೌಡರು ಆಯಾ ಸಂದರ್ಭಕ್ಕೆ ಅನುಗುಣವಾಗಿ ಮಾತನಾಡುತ್ತಾರೆ ಒಂದೊಂದು ಬಾರಿ ಏಕವಚನದಲ್ಲಿ ಮಾತನಾಡಿದ್ದು ಉಂಟು. ಅವರನ್ನು ೧೫ ವರ್ಷದಿಂದ ನಾನು ನೋಡಿದ್ದೇನೆ, ಇದೇನು ಹೊಸದೇನಲ್ಲ. ಪರ್ಸನಲ್ ಒಳಜಗಳ ಇದ್ದೇ ಇರುತ್ತದೆ. ಮನೆ ಅಂದ ಮೇಲೆ ಜಗಳ ಇದ್ದದ್ದೆ, ಜೆಡಿಎಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಬೇರೆ ಪಕ್ಷದ ಗೊಂದಲದ ಬಗ್ಗೆ ನಾನು ಉತ್ತರ ನೀಡುವುದು ತಪ್ಪು. ಬಿಜೆಪಿ ಹೈಕಮಾಂಡ್ ಅವರು ಸರಿಪಡಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಒಳಜಗಳದ ಬಗ್ಗೆ ಮಾತನಾಡಲು ನಿರಾಕರಿಸಿದರು. ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಬೇಕೆಂದು ಅವರ ದೃಷ್ಟಿಯಿದೆ. ಪ್ರಧಾನಮಂತ್ರಿಗಳು ನನಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದಾರೆ. ಪಕ್ಷ ಸಂಘಟನೆಗೆ ವಯಸ್ಸಿನ ಸಮಸ್ಯೆ ಇದ್ದರೂ, ದೇವೇಗೌಡರು ಕಾರ್ಯಕರ್ತರಿಗೆ ಶಕ್ತಿ ತುಂಬಲು ಹೋರಾಟ ಮಾಡುತ್ತಿದ್ದಾರೆ. ನನಗೆ ಬೇರೆ ಬೇರೆ ರೀತಿಯ ಒತ್ತಡಗಳಿವೆ. ಆದರೆ ನಾನು ನಮ್ಮ ರಾಷ್ಟ್ರೀಯ ಅಧ್ಯಕ್ಷರಲ್ಲಿ ಮನವಿ ಮಾಡುತ್ತೇನೆ. ದೇವೇಗೌಡರು ಇನ್ನೂ ನಮ್ಮ ಮುಂದಿರಬೇಕು. ಅವರ ಕನಸು ಈ ನಾಡಿನ ಜನರ ಸಹಕಾರದಿಂದ ನನಸಾಗುವುದು ಎಂದರು.ರಾಜ್ಯದ ಅಭಿವೃದ್ಧಿ ಮತ್ತು ತಂತ್ರಜ್ಞಾನ: ಈ ರಾಜ್ಯದ ಅಭಿವೃದ್ಧಿಗೆ ದೇವೇಗೌಡರು ಮಾಡಲಾಗದ ಕೆಲಸಗಳನ್ನು ನಾನು ಮಾಡಲು ಯೋಜನೆ ಹೊಂದಿದ್ದೇನೆ. ಅವರ ಮಾರ್ಗದರ್ಶನದೊಂದಿಗೆ ಯೋಜನೆಗಳನ್ನು ಜಾರಿಗೆ ತರಲು ನಾನು ಯತ್ನಿಸುತ್ತಿದ್ದೇನೆ. ಸಾಫ್ಟ್‌ವೇರ್‌ ಇಂಡಸ್ಟ್ರಿಗೆ ಕರ್ನಾಟಕ ಹಬ್ ಆಗಿದೆ. ಇದೇ ರೀತಿ ಆರ್ಟಿಫಿಷಿಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲೂ ಉತ್ತೇಜನ ನೀಡಲು ಪ್ರಯತ್ನಿಸುತ್ತಿದ್ದೇನೆ ಎಂದು ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಹಂಚಿಕೊಂಡರು. ಹಾಸನ ಜಿಲ್ಲೆಯ ಬಜೆಟ್ ನಿರೀಕ್ಷೆಗಳು: ಬಜೆಟ್‌ನಲ್ಲಿ ಜಿಲ್ಲೆಗೆ ಯೋಜನೆ, ಅನುದಾನ ಬರದೇ ಇರಬಹುದು. ಆದರೆ ಹಾಸನ ವಿಮಾನ ನಿಲ್ದಾಣ ವಿಚಾರವನ್ನು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿದ್ದೇನೆ. ಅಲ್ಲಿಂದಲೇ ಹೆಚ್ಚಿನ ನೆರವು ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗ ರಾಜ್ಯ ಸರ್ಕಾರ ಸ್ಪಂದಿಸಬೇಕು ಎಂದರು. ವಿಮಾನ ನಿಲ್ದಾಣ ದೇವೇಗೌಡರ ಕನಸು. ಈ ಯೋಜನೆ ಹಾಸನದ ಜನರ ಓಡಾಟಕ್ಕಾಗಿ ಅಲ್ಲ ರೈತರ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ಏರ್ ಕಾರ್ಗೋ ಮೂಲಕ ರಫ್ತು ಮಾಡಿ, ರೈತರ ಆರ್ಥಿಕ ಶಕ್ತಿ ಸದೃಢಗೊಳಿಸಲು ಯೋಜಿಸಲಾಗಿದೆ. 25 ವರ್ಷಗಳಿಂದ ದೇವೇಗೌಡರಿಗೆ ಇದೇ ಚಿಂತೆ. ಆದರೆ ಇದನ್ನು ನಿಭಾಯಿಸಲು ರಾಜ್ಯ ಸರ್ಕಾರ ಎಷ್ಟು ಬೆಂಬಲ ನೀಡುತ್ತಿದೆ ಎಂಬುದು ಮುಖ್ಯ ಎಂದರು. ಕೇಂದ್ರ ಸರ್ಕಾರದ ಬಜೆಟ್‌ ಟೀಕಿಸಲು ಕಾಂಗ್ರೆಸ್‌ಗೆ ಯಾವ ನೈತಿಕತೆ ಇದೆ? ಸ್ವಾತಂತ್ರ್ಯ ಬಂದಾಗಿನಿಂದ 60 ವರ್ಷ ಅವರೇ ಅಧಿಕಾರದಲ್ಲಿದ್ದರಲ್ಲ. ಯಾವ ಜಿಲ್ಲೆ, ಎಷ್ಟು ತಾಲೂಕುಗಳಿಗೆ ಇವರು ಅಂದಿನ ಬಜೆಟ್‌ ನಲ್ಲಿ ಕೊಡುಗೆ ನೀಡಿದ್ದಾರೆ ಎಂದು ತಿಳಿಸಲಿ ಎಂದು ಸವಾಲು ಹಾಕಿದರು.ಸಿಎಂ ಬದಲಾವಣೆಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅದು ನನಗೆ ಸಂಬಂಧವಿಲ್ಲ. ಅದು ಸಂಪೂರ್ಣವಾಗಿ ಕಾಂಗ್ರೆಸ್‌ನವರು ತೀರ್ಮಾನಿಸಬೇಕಾದ ವಿಷಯ ಎಂದರು. ಇದೇ ಸಂದರ್ಭದಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ, ಜೆಡಿಎಸ್ ಮುಖಂಡರಾದ ಹಿರೀಸಾವೆ ರಾಮಣ್ಣ ಮತ್ತಿತರಿದ್ದರು.

Share this article