ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾ ಪಂಚಾಯತಿ ಸಿಇಒ ಕಚೇರಿ ಸಭಾಂಗಣದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೆಲ ಲೋಪದೋಷಗಳ ಪರಿಷ್ಕರಣೆ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಪ್ರಾಧಿಕಾರವು ಗಂಭೀರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಿದೆ ಎಂದರು.
ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗಾಗಿ ಪ್ರಾಧಿಕಾರವು ತೀವ್ರ ನಿಗಾ ವಹಿಸಿದೆ. ಪ್ರಾಧಿಕಾರದ ರಾಜ್ಯಾಧ್ಯಕ್ಷನಾದ ಮೇಲೆ ರಾಜ್ಯದ 31 ಜಿಲ್ಲೆಗಳ ಪೈಕಿ 26 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿದ್ದೇನೆ. ಜಿಲ್ಲಾ ಮಟ್ಟದಲ್ಲಿ ಸಿಇಒ ಹಾಗೂ ತಾಲೂಕು ಮಟ್ಟದಲ್ಲಿ ಇಒ ನೇತೃತ್ವದಲ್ಲಿ ಗ್ಯಾರಂಟಿ ಯೋಜನಗಳ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಒಟ್ಟು 4,000 ಕ್ಕೂ ಹೆಚ್ಚು ಜನರ ಬೃಹತ್ ಉಸ್ತುವಾರಿ ಕಾರ್ಯಪಡೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು.ಗೃಹಲಕ್ಷ್ಮಿ ಯೋಜನೆಯಲ್ಲಿ ಮರಣ ಹೊಂದಿದ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗುತ್ತಿದ್ದ ಗಂಭೀರ ಲೋಪವನ್ನು ಪ್ರಾಧಿಕಾರ 2025ರ ಸೆಪ್ಟಂಬರ್ ತಿಂಗಳಿನಲ್ಲಿ ಪತ್ತೆಹಚ್ಚಿತ್ತು. ಈ ಗೊಂದಲಗಳನ್ನು ಸರಿಪಡಿಸುವಂತೆ ಅ.31-2025 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ಲೋಪದೋಷ ಬೆಳಕಿಗೆ ಬಂದರೂ, ಗ್ರಾಮೀಣ ಭಾಗದಲ್ಲಿ ಮರಣ ನೋಂದಣಿ ತಕ್ಷಣಕ್ಕೆ ನಡೆಯದೇ ಇರುವುದರಿಂದ ನಿಖರ ಅಂಕಿ-ಅಂಶಗಳ ಕೊರತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ 2025ರ ಡಿಸೆಂಬರ್ ಹಾಗೂ 2026ರ ಮೇ ತಿಂಗಳಲ್ಲಿ ವಿಶೇಷ ಪರಿಶೀಲನಾ ಸಭೆಗಳನ್ನು ನಡೆಸಿ, ಈವರೆಗೆ ಮರಣ ಹೊಂದಿದ ಒಟ್ಟು 1,44,056 ಕುಟುಂಬದ ಮುಖ್ಯಸ್ಥರ ಖಾತೆಗಳನ್ನು ಗುರುತಿಸಿ ಹಣ ಸಂದಾಯವನ್ನು ಸ್ಥಗಿತಗೊಳಿಸಲಾಗಿದೆ. ಬ್ಯಾಂಕ್‌ಗಳಿಂದ ಮಾಹಿತಿ ಸಂಗ್ರಹಿಸುವಲ್ಲಿ ಕೆಲವು ತಾಂತ್ರಿಕ ಸವಾಲುಗಳು ಎದುರಾಗಿವೆ. ರಾಜ್ಯದ ಗಡಿ ಭಾಗದದಲ್ಲಿ ಫಲಾನುಭವಿಗಳ ಹಣ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಬ್ಯಾಂಕ್‌ಗಳ ಶಾಖೆಗಳಿಗೆ ಜಮೆಯಾಗಿರುವುದರಿಂದ, ಆಯಾ ಬ್ಯಾಂಕುಗಳ ಮುಖ್ಯ ಕಚೇರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮರಣ ಹೊಂದಿದವರ ಬ್ಯಾಂಕುಗಳ ಖಾತೆ ಜಮೆಯಾಗಿರುವ ಹಣವನ್ನು ಹಿಂಪಡೆಯಲು ಕ್ರಮ ವಹಿಸಲಾಗುತ್ತಿದೆ. ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಂತಹ ಖಾತೆಗಳಲ್ಲಿ ಜಮೆಯಾದ ಹಣವನ್ನು ಮೃತರ ಅನರ್ಹರು ಬಳಸಿಕೊಂಡಿರುವ ಸಾಧ್ಯತೆಯಿದೆ. ಈ ಹಣವನ್ನು ವಾಪಸ್ ಪಡೆಯಲು ಸಹ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಹೆಚ್.ಎಂ.ರೇವಣ್ಣ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ಹೆಚ್.ಎಂ.ರೇವಣ್ಣ ಶ್ಲಾಘಿಸಿದರು. ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳ ಅಡಿಯಲ್ಲಿ ಜಿಲ್ಲೆಗೆ ಒಟ್ಟು ರು.3,783 ಕೋಟಿ ಹಣ ಬಿಡುಗಡೆಯಾಗಿದೆ. ಹಿಂದೆ ಇಡೀ ಜಿಲ್ಲೆಯ ಎಲ್ಲಾ ಇಲಾಖೆಗಳ ಒಟ್ಟು ವಾರ್ಷಿಕ ಬಜೆಟ್ ಹಂಚಿಕೆ ಸುಮಾರು ರು.1,600 ಕೋಟಿ ಇರುತ್ತಿತ್ತು. ಆದರೆ ಇಂದು ಕೇವಲ ಗ್ಯಾರಂಟಿ ಯೋಜನೆಗಳಿಗಾಗಿಯೇ ಜಿಲ್ಲೆಗೆ ರೂ.3,783 ಕೋಟಿ ಹಣ ಹರಿದುಬಂದಿದೆ. ಇದು ನೇರವಾಗಿ ಜನರ ಕೈ ಸೇರುತ್ತಿರುವ ಹಣವಾಗಿದೆ ಎಂದರು.