ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾತ್ರಿ ಯೋಜನೆ ಸಾಥ್‌..!

KannadaprabhaNewsNetwork |  
Published : Aug 01, 2025, 12:30 AM IST
ಉದ್ಯೋಗ ಖಾತ್ರಿ ಯೋಜನೆ ಅಡಿ ಧಾರವಾಡ ತಾಲೂಕು ಉಪ್ಪಿನ ಬೆಟಗೇರಿಯ ಸರ್ಕಾರಿ ಶಾಲೆಯ ಕಂಪೌಂಡ್‌ ಹಾಗೂ ಸುಂದರೀಕರಣ. | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ 400ಕ್ಕೂ ಹೆಚ್ಚು ಶಾಲೆಗಳು ಈಗ ಹೊಸ ನೋಟವನ್ನು ಪಡೆದಿವೆ. ಕಾಂಪೌಂಡ್ ಗೋಡೆಗಳು, ಊಟದ ಸಭಾಂಗಣಗಳು, ಛಾವಣಿಗಳ ದುರಸ್ತಿ, ಹೈಟೆಕ್‌ ಶೌಚಾಲಯಗಳು ಮತ್ತು ಆಟದ ಮೈದಾನಗಳಂತಹ ಸೌಕರ್ಯಗಳನ್ನು ಒದಗಿಸಲು ಖಾತ್ರಿ ಯೋಜನೆ ಕೈ ಜೋಡಿಸಿದೆ.

ಬಸವರಾಜ ಹಿರೇಮಠ

ಧಾರವಾಡ: ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಅಡಿ ಇದೀಗ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ಮುಂದಾಗಿದ್ದು, ಒಂದು ಹಂತದಲ್ಲಿ ಯಶಸ್ವಿಯೂ ಆಗಿದೆ.

ಗ್ರಾಮೀಣ ಪ್ರದೇಶದ 400ಕ್ಕೂ ಹೆಚ್ಚು ಶಾಲೆಗಳು ಈಗ ಹೊಸ ನೋಟವನ್ನು ಪಡೆದಿವೆ. ಕಾಂಪೌಂಡ್ ಗೋಡೆಗಳು, ಊಟದ ಸಭಾಂಗಣಗಳು, ಛಾವಣಿಗಳ ದುರಸ್ತಿ, ಹೈಟೆಕ್‌ ಶೌಚಾಲಯಗಳು ಮತ್ತು ಆಟದ ಮೈದಾನಗಳಂತಹ ಸೌಕರ್ಯಗಳನ್ನು ಒದಗಿಸಲು ಖಾತ್ರಿ ಯೋಜನೆ ಕೈ ಜೋಡಿಸಿದೆ.

ಈ ಕುರಿತು ಜಿಪಂ ಸಿಇಒ ಭುವನೇಶ್ ಪಾಟೀಲ್ ಕನ್ನಡಪ್ರಭದೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಕಳೆದ ಎರಡು ವರ್ಷಗಳಲ್ಲಿ 170 ಕ್ಕೂ ಹೆಚ್ಚು ಶಾಲೆಗಳಿಗೆ ಕಾಂಪೌಂಡ್ ಗೋಡೆಗಳನ್ನು ಒದಗಿಸಲಾಗಿದೆ. 200ಕ್ಕೂ ಹೆಚ್ಚು ಶಾಲೆಗಳು ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯ ಬ್ಲಾಕ್‌ಗಳನ್ನು ಪಡೆದಿವೆ. 33ಕ್ಕೂ ಹೆಚ್ಚು ಶಾಲೆಗಳಲ್ಲಿ ಊಟದ ಕೋಣೆ, 161 ಶಾಲೆಗಳು ಹೊಸ ಆಟದ ಮೈದಾನ ನಿರ್ಮಿಸಲಾಗಿದೆ ಎಂದರು.

ಜತೆಗೆ ಪ್ರಸಕ್ತ ಶೈಕ್ಷಣಿಕ ವರ್ಷ ಸೋರುವ ಚಾವಣಿಗಳನ್ನು ಸರಿಪಡಿಸಲು ಯೋಜಿಸಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ತರಗತಿ ಕೊಠಡಿಗಳ ದುರಸ್ತಿಗೆ ಸಹ ವಿನಂತಿಸಿದ್ದಾರೆ. ಅವುಗಳಲ್ಲಿ ಹಲವು ಶಿಥಿಲಾವಸ್ಥೆಯಲ್ಲಿವೆ. ಪ್ರಸ್ತುತ ಖಾತ್ರಿ ನಿಬಂಧನೆಗಳು ತರಗತಿ ಕೊಠಡಿಗಳನ್ನು ಪುನರ್‌ ನಿರ್ಮಿಸಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ಕಾದು ನೋಡಬೇಕಿದೆ ಎಂದರು.

ಏನೇನಿತ್ತು ಸಮಸ್ಯೆ: ಕಾಂಪೌಂಡ್ ಗೋಡೆ ಇಲ್ಲದ ಹಿನ್ನೆಲೆಯಲ್ಲಿ ಸಾಕಷ್ಟು ಶಾಲೆಗಳ ಆವರಣ ದನಕರುಗಳನ್ನು ಕಟ್ಟಲು, ಮೇಯಿಸಲು, ರಾತ್ರಿ ಸಮಯದಲ್ಲಿ ಮದ್ಯ ಸೇವನೆ ಅಂತಹ ಚಟುವಟಿಕೆಗಳಿಗೂ ಕೇಂದ್ರಸ್ಥಾನವಾಗಿತ್ತು. ಜತೆಗೆ ಶಾಲೆಯ ವಿದ್ಯುತ್‌ ದೀಪಗಳು, ಹೆಂಚುಗಳು ಸೇರಿ ಅನೇಕ ವಸ್ತುಗಳು ಕಳ್ಳತನ ಸಹ ಆಗುತ್ತಿತ್ತು.

ಈಗ ಕಾಂಪೌಂಡ್ ಗೋಡೆ, ಗೇಟ್‌ ಹಿನ್ನೆಲೆಯಲ್ಲಿ ಶಾಲೆಯು ಸುರಕ್ಷಿತವಾಗಿವೆ. 40 ರಿಂದ 50 ವರ್ಷ ಹಳೆಯದಾದ ಅನೇಕ ಹಳೆಯ ಸಂಸ್ಥೆಗಳಲ್ಲಿ ಶೌಚಾಲಯ ಸೌಲಭ್ಯಗಳಿಲ್ಲ, ಇದು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹುಡುಗಿಯರಿಗೆ ಗಂಭೀರ ಸವಾಲುಗಳನ್ನು ಸೃಷ್ಟಿಸಿತು. ಮೊದಲು, ಶೌಚಾಲಯ ಬಳಸಲು ನಾವು ಹತ್ತಿರದ ಮನೆಗಳಿಗೆ ಅಥವಾ ನಮ್ಮ ಮನೆಗಳಿಗೆ ಹೋಗಬೇಕಾಗಿತ್ತು. ಈಗ, ನಮಗೆ ಸರಿಯಾದ ಶೌಚಾಲಯ ಬ್ಲಾಕ್ ಸಿಕ್ಕಿದೆ ಎಂದು ಗರಗ ಶಾಲೆಗೆ ಭೇಟಿ ನೀಡಿದಾಗ 7ನೇ ತರಗತಿಯ ವಿದ್ಯಾರ್ಥಿನಿ ಗಿರಿಜಾ ನಮ್ಮ ಬಳಿ ಹೇಳಿಕೊಂಡರು ಎಂದು ಭುವನೇಶ ಪಾಟೀಲ ಹೇಳಿದರು.

ಅಂಗನವಾಡಿಗೂ ಖಾತ್ರಿ ಸೈ: ಹೆಚ್ಚಿನ ಶಾಲೆಗಳಲ್ಲಿ ನಿಗದಿತ ಊಟದ ಸ್ಥಳಗಳಿಲ್ಲದ ಕಾರಣ ವಿದ್ಯಾರ್ಥಿಗಳು ಈ ಹಿಂದೆ ತರಗತಿ ಕೊಠಡಿಗಳಲ್ಲಿ ಅಥವಾ ತೆರೆದ ಪ್ರದೇಶಗಳಲ್ಲಿ ಮಧ್ಯಾಹ್ನದ ಊಟ ತಿನ್ನಬೇಕಾಯಿತು. ಮಳೆಗಾಲದಲ್ಲಿ ತೀವ್ರ ಸಮಸ್ಯೆಯಾಗುತ್ತಿತ್ತು. ಕಳೆದ ಎರಡು ವರ್ಷಗಳಲ್ಲಿ 33ಕ್ಕೂ ಹೆಚ್ಚು ಶಾಲೆಗಳಲ್ಲಿ ಊಟದ ಹಾಲ್‌ಗಳನ್ನು ನಿರ್ಮಿಸಿದೆ. ಅಂಗನವಾಡಿ ಕೇಂದ್ರಗಳ ನಿರ್ಮಾಣವನ್ನು ಸಹ ಖಾತ್ರಿಯಲ್ಲಿ ಸೇರಿಸಲಾಗಿದೆ. ಅವುಗಳ ನಿರ್ಮಾಣಕ್ಕಾಗಿ ಇಲಾಖೆಯು ₹12 ಲಕ್ಷಗಳನ್ನು ನೀಡಿದರೆ ಖಾತ್ರಿಯಿಂದ ಹೆಚ್ಚಿನ ₹8 ಲಕ್ಷಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಆದ್ದರಿಂದ, ಎರಡು ವರ್ಷಗಳಲ್ಲಿ 108 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಮತ್ತು ಈ ವರ್ಷ ಹೆಚ್ಚುವರಿಯಾಗಿ 29 ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದರು.

''''''''ನಕ್ಷತ್ರ ವನ'''''''' ಎಂಬ ವಿಶಿಷ್ಟ ಪರಿಸರ ಯೋಜನೆ ಶುರು ಮಾಡಿದ್ದು, ಸಾಮಾಜಿಕ ಅರಣ್ಯ ಕಾರ್ಯಕ್ರಮದ ಅಡಿಯಲ್ಲಿ ರಚಿಸಲಾದ ಈ ಉದ್ಯಾನಗಳು ಔಷಧೀಯ ಮತ್ತು ಹಣ್ಣುಗಳನ್ನು ನೀಡುವ ಸಸ್ಯಗಳು ಮತ್ತು ಮರಗಳನ್ನು ಒಳಗೊಂಡಿವೆ. ವಿದ್ಯಾರ್ಥಿಗಳು ಸಸಿಗಳನ್ನು ನೆಡುವಲ್ಲಿ ಭಾಗವಹಿಸುತ್ತಾರೆ. ಆದರೆ, ನೆಲವನ್ನು ಅಗೆಯುವುದು ಮತ್ತು ನಡಿಗೆ ಮಾರ್ಗಗಳನ್ನು ರಚಿಸುವುದು ಖಾತ್ರಿ ಅಡಿಯಲ್ಲಿ ಮಾಡಲಾಗುತ್ತದೆ ಎಂದದರು.

ಜಿಲ್ಲೆಯಲ್ಲಿ ಸರ್ಕಾರಿ ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಖಾತ್ರಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಈ ವರ್ಷ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಗೋಡೆಗಳನ್ನು ನಿರ್ಮಿಸುವ ಗುರಿ ಇದೆ. ಖಾತ್ರಿ ಅಡಿಯಲ್ಲಿ ಸರ್ಕಾರವು ₹20 ಲಕ್ಷ ಮಾನವ ದಿನಗಳನ್ನು ರಚಿಸುವ ಗುರಿ ಪೈಕಿ ₹4.3 ಲಕ್ಷ ವ್ಯಕ್ತಿಗಳಿಗೆ ಉದ್ಯೋಗ ಕಾರ್ಡ್‌ ನೀಡಲಾಗಿದೆ, 76,000 ಕುಟುಂಬಗಳಿಂದ 1.7 ಲಕ್ಷ ವ್ಯಕ್ತಿಗಳು ಭಾಗವಹಿಸಿದ್ದಾರೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ