ಗ್ಯಾರಂಟಿ ಯೋಜನೆ ಬಡವರ ಪಾಲಿಗೆ ಸಂಜೀವಿನಿ: ಸಚಿವ ನಾಗೇಂದ್ರ

KannadaprabhaNewsNetwork | Published : Mar 12, 2024 2:02 AM

ಸಾರಾಂಶ

ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ನೀಡಿದ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ.

ಬಳ್ಳಾರಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಸಂಜೀವಿನಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ನಗರದ ಮೋಕಾ ರಸ್ತೆಯ ಸುವರ್ಣ ಇಂಟರ್ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ನೀಡಿದ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. ಮಹಿಳೆಯರನ್ನು ಸಶಕ್ತರನ್ನಾಗಿ ಮಾಡಲು ಈ ಯೋಜನೆಗಳನ್ನು ರೂಪಿಸಲಾಗಿದೆ. ಸರ್ಕಾರದ ಜನಪರ ಯೋಜನೆಗಳಿಂದ ಮಹಿಳೆಯರು ಸಂತುಷ್ಟರಾಗಿದ್ದಾರೆ ಎಂದರು.ಜಿಲ್ಲೆಯಲ್ಲಿ ಮಾಹಿತಿ ಕೊರತೆಯಿಂದ ಗ್ಯಾರಂಟಿ ಯೋಜನೆಗಳಿಂದ ವಂಚಿತರಾದ ಪ್ರತಿ ಫಲಾನುಭವಿಗಳ ಮನೆಗೆ ಭೇಟಿ ನೀಡಬೇಕು. ತಿಂಗಳೊಳಗೆ ಅವರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸೂಚನೆ ನೀಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಕಳೆದ ಬಜೆಟ್‍ನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಗೆ ₹200 ಕೋಟಿ ಅನುದಾನ ನೀಡಿದೆ. ನಗರದಲ್ಲಿ ಎಚ್.ಆರ್. ಗವಿಯಪ್ಪ ವೃತ್ತದಿಂದ ಎಪಿಎಂಸಿಯವರೆಗೆ ₹11 ಕೋಟಿ ವೆಚ್ಚದ ರಸ್ತೆ, ₹9 ಕೋಟಿ ವೆಚ್ಚದಲ್ಲಿ ಶಾಂತಿನಗರದಿಂದ ಕೊಳಗಳ್‍ವರೆಗೆ ರಸ್ತೆ, 220 ಅಂಗನವಾಡಿ ಕೇಂದ್ರಗಳಿಗೆ ಫ್ರಿಡ್ಜ್ ವಿತರಿಸಲಾಗಿದೆ. ನಗರದ 6,072 ನಿವಾಸಿಗಳಿಗೆ ಪಟ್ಟಾ ವಿತರಿಸಲಾಗುವುದು ಎಂದರು.ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಮಾತನಾಡಿದರು.ಇದೇ ವೇಳೆ ಸಚಿವ ಬಿ.ನಾಗೇಂದ್ರ ರಾಯಾಪುರ ಗ್ರಾಮದಿಂದ ಆಂಧ್ರ ಗಡಿಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ, ಬೆಳಗಲ್ಲು ಕೆರೆಯಿಂದ ಕುಡಿವ ನೀರಿನ ಪೈಪ್‍ಲೈನ್ ಕಾಮಗಾರಿ, ಮೋಕಾ ಗ್ರಾಮದಲ್ಲಿ ಇ-ಸೇವಾ ಮತ್ತು ಡಿಜಿಟಲ್ ಲೈಬ್ರರಿ ನಿರ್ಮಾಣ ಕಾಮಗಾರಿ, ಹೊಸ ಮೋಕಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಬಹು ಉದ್ದೇಶದ ಡೈನಿಂಗ್ ಹಾಲ್ ಒಳಾಂಗಣ ಆಟಗಳ ಅಡಿಟೋರಿಯಂ ಯೋಜನೆಯ ಕಾಮಗಾರಿ, ಬಳ್ಳಾರಿ ತಾಲೂಕಿನ ಸಿಂಧುವಾಳ ಗ್ರಾಮದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಚಿವರು ಚೆಕ್ ವಿತರಣೆ ಮಾಡಿದರು. ವಾಲ್ಮೀಕಿ ಎಸ್ಟಿ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಿಸಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.ಶಾಸಕರಾದ ಈ.ತುಕಾರಾಂ, ಬಿ.ಎಂ.ನಾಗರಾಜ, ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತಾ, ಬುಡಾ ಅಧ್ಯಕ್ಷ ಆಂಜನೇಯಲು, ಉಪ ಮೇಯರ್ ಬಿ.ಜಾನಕಿ, ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ, ಎಲ್.ಮಾರೆಣ್ಣ, ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಡಿಸಿ ಮೊಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಹೇಮಂತ್, ಪಾಲಿಕೆ ಆಯುಕ್ತ ಜಿ.ಖಲೀಲಸಾಬ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಸಮಾವೇಶಕ್ಕೆ ಸರ್ಕಾರಿ ಬಸ್‌ಗಳು; ಪ್ರಯಾಣಿಕರ ಪರದಾಟ: ಬಳ್ಳಾರಿಯಲ್ಲಿ ಸೋಮವಾರ ಜರುಗಿದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಮಹಿಳೆಯರನ್ನು ಕರೆ ತರಲು ಸಾರಿಗೆ ಇಲಾಖೆಯ 120 ಬಸ್‌ಗಳನ್ನು ಒಪ್ಪಂದದ ಮೇರೆಗೆ ಪಡೆದುಕೊಳ್ಳಲಾಗಿತ್ತು. ಇದರಿಂದ ಪ್ರಯಾಣಿಕರು ಬಸ್ ಗಳಿಲ್ಲದೆ ಪರದಾಡುವಂತಾಯಿತು.

Share this article