ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ನಾಂದಿ, ಯುವನಿಧಿ ಯೋಜನೆ ನಿರುದ್ಯೋಗದಿಂದ ಬಳಲುವ ಯುವಕರಿಗೆ ಜೀವನ ಸುಧಾರಣೆಗೆ ಬಳಕೆಯಾಗಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಹೇಳಿದರು.ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಟಾನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನಲ್ಲಿ ಬಹುತೇಕ ಎಲ್ಲಾ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಿ ಸಫಲತೆ ಕಾಣುತ್ತಿದೆ ಎಂದು ತಿಳಿಸಿದರು.ಅನ್ನಭಾಗ್ಯ ಯೋಜನೆ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಅಕ್ಕಿ ಬದಲಾಗಿ ಹಣ ಸಂದಾಯಿಸುತ್ತಿತ್ತು. ಇದೀಗ ಹಣದ ಬದಲಾಗಿ ನೇರವಾಗಿ ಅಕ್ಕಿಯನ್ನು ಪಡಿತರದಾರರಿಗೆ ವಿತರಿಸುವ ಮೂಲಕ ರಾಜ್ಯಸರ್ಕಾರ ಜನತೆ ಹಸಿವಿನಿಂದ ಬಳಲದಂತೆ ಕಾಳಜಿ ವಹಿಸುತ್ತಿದೆ ಎಂದು ತಿಳಿಸಿದರು.ಸದ್ಯದಲ್ಲೇ ರಾಜ್ಯಸರ್ಕಾರ ಗೃಹಲಕ್ಷ್ಮೀ ಸಹಕಾರ ಸಂಘ ಆರಂಭಿಸಲು ತೀರ್ಮಾನಿಸಿದೆ. ಮುಂದೆ ತಾಲೂಕಿನ ಎಲ್ಲಾ ಗೃಹ ಲಕ್ಷ್ಮೀಯರು ಸಹಕಾರ ಸಂಘಕ್ಕೆ ಸದಸ್ಯರಾಗುವ ಮೂಲಕ ಮತ್ತುಷ್ಟು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಹೇಳಿದರು.ಶಕ್ತಿಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳು ತಾಲೂಕಿನಲ್ಲಿ ಬಹುತೇಕ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. ವಿಶೇಷವಾಗಿ ಮಹಿಳೆಯರಿಗೆ ಪಂಚ ಗ್ಯಾರಂಟಿ ಯೋಜನೆಗಳು ಜೀವನ ನಡೆಸಲು, ಮಕ್ಕಳ ಪಾಲನೆಗೆ ಹೆಚ್ಚು ಬಳಕೆ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.ಗ್ಯಾರಂಟಿ ಸದಸ್ಯರು ಮಾತನಾಡಿ ತಾಲೂಕಿನ ಲಕ್ಯಾ ಗ್ರಾಮದಿಂದ ಕಡೂರು ಹಾಗೂ ಆಲ್ದೂರು ಮಾರ್ಗದಿಂದ ಮೂಡಿಗೆರೆ ಪಟ್ಟಣಕ್ಕೆ ಸ್ಥಳಿಯರಿಗೆ ಅನುಕೂಲವಾಗಲು ಬಸ್ ಸಂಚರಿಸಲು ಅನುವು ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.ತಾಲೂಕು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಅನ್ಸರ್ ಆಲಿ ಮಾತನಾಡಿ ಪಂಚ ಗ್ಯಾರಂಟಿ ಯೋಜನೆಗಳು ತಾಲೂಕಿನ ಜನತೆಗೆ ಫಲಪ್ರದವಾಗಿದೆ. ಶೇ.99 ರಷ್ಟು ಗ್ಯಾರಂಟಿ ಯೋಜನೆ ಪ್ರಗತಿ ಸಾಧಿಸಿದ್ದು, ಸಣ್ಣ ಪುಟ್ಟ ಲೋಷದೋಷಗಳು ಹೊರ ತಾಗಿ ಬಹುತೇಕ ಯಶಸ್ಸು ಗಳಿಸಿದೆ ಎಂದು ತಿಳಿಸಿದರು.ಇದೇ ವೇಳೆ ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಚೇರಿಗಳ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಶಕ್ತಿ ಹಾಗೂ ಯುವ ನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆ ಪರಿಶೀಲಿಸಲಾಯಿತು. ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯ್‌ಕುಮಾರ್, ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಪುನೀತ್, ನಾಗರಾಜ್, ನರೇಂದ್ರ, ಗೌಸ್ ಮೊಹಿಯುದ್ದೀನ್, ನವರಾಜ್, ರೋಹಿತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.