- ತಾಲೂಕು ಪಂಚಾಯ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಮಾಸಿಕ ಸಭೆ
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರ ಬದುಕನ್ನು ಸುಧಾರಿಸುತ್ತಿವೆ ಎಂದು ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಟಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಮಾಸಿಕ ಸಭೆಯಲ್ಲಿ ಮಾಹಿತಿ ನೀಡಿದರು. ಸರ್ಕಾರದ ಭರವಸೆಯಂತೆ ಯಾವುದೇ ಜಾತಿ, ಜನಾಂಗ ಎಂಬ ಬೇಧ ಭಾವ ಮಾಡದೆ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿಗಳ ಸವಲತ್ತು ನೀಡುತ್ತಿದೆ. ಅದರಲ್ಲೂ ಹೆಚ್ಚಿನದಾಗಿ ಮಹಿಳೆಯರು ಶಕ್ತಿ ಯೋಜನೆ, ಗೃಹಜ್ಯೋತಿ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳು ಬಡವರಿಗೆ ನೆರವಾಗುವ ಜೊತೆಗೆ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತಿದೆ. ಈಗಾಗಲೇ ಶಕ್ತಿ ಯೋಜನೆ ಆರಂಭದಿಂದ ಕಡೂರು ಸಾರಿಗೆ ಘಟಕದ ಡಿಪೋ ವ್ಯಾಪ್ತಿಯ ಬಸ್ಸುಗಳಲ್ಲಿ, 1,91,20951 ಮಹಿಳೆಯರು ಉಚಿತವಾಗಿ ಪ್ರವಾಸ, ದೇವಾಲಯಗಳು, ಸಂಬಂದಿಕರ ಮನೆಗಳ ಕಾರ್ಯಗಳಿಗೆ ಉಚಿತವಾಗಿ ತೆರಳುವ ಮೂಲಕ ಇದರ ಸದುಪಯೋಗ ಪಡೆದಿದ್ದು. ಇದರಿದ ಸುಮಾರು ₹76 ಕೋಟಿ ಕಡೂರಿನ ಬಸ್ ಡಿಪೋಗೆ ಲಾಭವಾಗಿದೆ ಎಂದರು.ಗೃಹ ಜ್ಯೋತಿಯಿಂದ ಅರ್ಹ ಫಲಾನುಭವಿಗಳಿಗೆ 96 ಕೋಟಿ ಉಚಿತ ವಿದ್ಯುತ್ ನೀಡಲಾಗಿದೆ. ಇದುವರೆಗೆ ಯುವ ನಿಧಿ ಯೋಜನೆಗೆ 1,187 ಜನರು ನೋಂದಣಿ ಆಗಿದ್ದು, ಸದರಿ ಯೋಜನೆಯಿಂದ ₹2,68 ಕೋಟಿ ವಿತರಣೆ ಆಗಿದೆ ಎಂದರು.
ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆ 25ನೇ ಕಂತು ಇದೀಗ ಬಿಡುಗಡೆ ಆಗಿದ್ದು, ತಾಲೂಕಿನ ಫಲಾನುಭವಿಗಳಿಗೆ ಸುಮಾರು ₹326 ಕೋಟಿ ವಿತರಣೆ ಆಗಿದೆ. ಅನ್ನಭಾಗ್ಯದಲ್ಲಿ ₹650 ಕೋಟಿ ಸರಕಾರದಿಂದ ಪಡಿತರ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಗ್ಯಾರಂಟಿಗಳ ಮೂಲಕ ಬಡವರ ಬದುಕನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದಲಿಸಿ ಬೇರೆ ದೇಶಗಳಿಗೆ ಮಾದರಿಯಾಗಿದೆ ಎಂದರು.ಸಭೆಯಲ್ಲಿ ತಾಪಂ ಇಒ. ಸಿ.ಆರ್ ಪ್ರವೀಣ್, ಗ್ಯಾರಂಟಿಗಳ ವಿತರಣೆ ಕುರಿತು ಮಾತನಾಡಿದರು. ಸಮಿತಿ ಸದಸ್ಯರಾದ ಸಪ್ತ ಕೋಟಿ ಧನಂಜಯ, ಪುಷ್ಪರಮೇಶ್, ಗಿರೀಶ್ ನಾಯ್ಕ,ಪಿ.ಎಸ್. ಸಂತೋಷ್,ಮಧು ಸಿಂಗಟಗೆರೆ, ಸೋಮೇಶ್, ತೌಸಿಬ್, ಕುಪ್ಪಾಳು ಶೋಭಾ, ಸುಜಾತಾ ಚಂದ್ರಶೇಖರ್,ಮೂರ್ತಿ, ರೋಹನ್ ಫರ್ನಾಂಡಿಸ್, ಮನು ಹಾಜರಿದ್ದರು.7ಕೆಕೆಡಿಯು2.
ಕಡೂರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಆಸಂದಿ ಕಲ್ಲೇಶ್ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆ ತಾಲೂಕು ಸಮಿತಿ ಸಭೆ ನಡೆಯಿತು.