ಬಂಟ್ವಾಳ: ಕರ್ನಾಟಕದ ಗ್ಯಾರಂಟಿ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. ಯೋಜನೆಯನ್ನು ಮೂದಲಿಸಿದವರೇ ಇಂದು ಅದನ್ನು ಕಾಪಿ ಮಾಡುತ್ತಿದ್ದಾರೆ ಎಂದು ಪಂಚ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದ್ದಾರೆ.
ಬಂಟ್ವಾಳದ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಡಾ. ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಮಂಗಳವಾರ ನಡೆದ ಗೃಹಲಕ್ಷ್ಮೀ ಫಲಾನುಭವಿಗಳ ಸ್ವಸಹಾಯ ಸಂಘಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಸವಲತ್ತು ಪಡೆವರಿದ್ದಾರೆ. ಆದರೆ ಸವಲತ್ತು ಪಡೆದವರೇ ಯೋಜನೆ ಟೀಕಿಸುತ್ತಿದ್ದಾರೆ ಎಂದರು. ಬಿಜೆಪಿಗರ ಯೋಜನೆಗಳು ಕೇವಲ ಭಾಷಣಕ್ಕೆ ಸೀಮಿತವಾಗಿದೆ, ಅದು ಕಾರ್ಯರೂಪಕ್ಕೆ ಬರುವುದಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಸಂದರ್ಭ ನೀಡಿದ್ದ ಎಲ್ಲಾ ಭರವಸೆಗಳು ಈಡೇರಿದೆ ಎಂದರು.ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಹಿತ ಅನೇಕ ಯೋಜನೆಗಳನ್ನು ತಾಲೂಕಿನಲ್ಲಿ ಅತ್ಯಂತ ಹೆಚ್ಚು ಪಲಾನುಭವಿಗಳು ಪಡೆದಿದ್ದಾರೆ ಎಂದು ತಿಳಿಸಿದರು.ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ದ.ಕ.ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ್, ಕಡಬ ತಾಲೂಕು ಪಂಚ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಜಿಪಂ ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಗೃಹಲಕ್ಷ್ಮೀ ಜಿಲ್ಲಾ ನೋಡಲ್ ಅಧಿಕಾರಿ ಉಸ್ಮಾನ್ ಅತಿಥಿಗಳಾಗಿದ್ದರು.
ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಪ್ರಾಸ್ತಾವಿಕ ಮಾತನಾಡಿ, ತಾಲೂಕು ಸಮಿತಿ ಅಶ್ರಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತಾಲೂಕಿಗೆ ಐದು ಯೋಜನೆಗಳಿಗೆ ಇದುವರೆಗೆ 528 ಕೋಟಿ ರು. ಅನುದಾನ ಬಿಡುಗಡೆಗೊಂಡಿದೆ ಎಂದರು.ಸ್ವಸಹಾಯ ಗುಂಪುಗಳ ಮೂಲಕ ಸಾಧಕ ಸಂಘಗಳನ್ನು ಅಭಿನಂದಿಸಲಾಯಿತು. ತಾ.ಪಂ.ಇಒ ಸಚಿನ್ ಕುಮಾರ್ ಸ್ವಾಗತಿಸಿದರು. ಪಿಡಿಒ ಸುನೀಲ್ ನಿರೂಪಿಸಿದರು.