ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಅಧ್ಯಕ್ಷತೆಯಲ್ಲಿ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ತಾಲೂಕಿನ ೪೪ ಮಂದಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಯಿತು. ೨೦೨೩ರಿಂದ ಒಟ್ಟು ೩೫೫ ಮಂದಿ ಅರ್ಜಿ ಸಲ್ಲಿಸಿದ್ದು, ೪೪ ಮಂದಿಯ ಅರ್ಜಿ ಅನುಮೋದನೆಗೊಂಡಿದ್ದರೆ, ೬೫ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ೨೪೬ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ಮಾಹಿತಿ ನೀಡಿದರು.ಸೋಮವಾರಪೇಟೆ ತಾಲೂಕಿನಲ್ಲಿ ೧.೨೦ ಲಕ್ಷ ಆದಾಯ ಮೀರಿದ, ೩ ಹೆಕ್ಟೇರ್ ಜಮೀನು ಹೊಂದಿರುವವರು, ತೆರಿಗೆ ಪಾವತಿದಾರರು, ಒಂದು ವರ್ಷದಿಂದ ಪಡಿತರ ಪಡೆಯದವರು ಸೇರಿದಂತೆ ಒಟ್ಟು ೧೦೩೨ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಕಾರ್ಡುಗಳನ್ನಾಗಿ ಪರಿವರ್ತಿಸಲಾಗಿದೆ. ೧೪೫ ಮಂದಿ ನಾವು ಬಿಪಿಎಲ್ ಗೆ ಆರ್ಹರು ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಬೆಂಗಳೂರಿನಿಂದ ಶನಿವಾರಸಂತೆ ಅಥವಾ ಸೋಮವಾರಪೇಟೆಗೆ ಬರುವ ಸರ್ಕಾರಿ ಬಸ್‌ಗಳು ಹಂಡ್ಲಿ ಗ್ರಾಮದಲ್ಲಿ ಕೋರಿಕೆ ನಿಲುಗಡೆ ಕೇಳಿದರು ಕೊಡುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿ ನಿಲುಗಡೆಗೆ ಆದೇಶ ಮಾಡಿಸಬೇಕೆಂದು ಸಮಿತಿ ಸದಸ್ಯರಾದ ವೀರೇಂದ್ರ ಆಗ್ರಹಿಸಿದರು. ಈ ವಿಚಾರಕ್ಕೆ ಸ್ಪಂದಿಸಿದ ಅಧ್ಯಕ್ಷರು ನಿರ್ಣಯ ಕೈಗೊಂಡು ವ್ಯವಸ್ಥಾಪರಿಗೆ ಪತ್ರ ಬರೆಯಲು ಹಾಗೂ ಈಬಗ್ಗೆ ಡಿಪೋ ವ್ಯವಸ್ಥಾಪಕರಿಗೆ ಮಾಹಿತಿ ನೀಡುವಂತೆ ಸೋಮವಾರಪೇಟೆ ಟಿಸಿಯವರಿಗೂಆದೇಶ ನೀಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿ ಮಾತನಾಡಿ, ೨೦೨೫ರ ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದ್ದು, ೬೮೨ ಫಲಾನುಭವಿಗಳಿಗೆ ಹಣ ಪಾವತಿಯಾಗಿದೆ. ೪೬ ಮಂದಿಗೆ ಹಣ ಬರಬೇಕಾಗಿದೆ ಎಂದರು.ಸಭೆಯಲ್ಲಿ ಗ್ಯಾರಂಟಿ ಯೋಜನೆಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.