ಹಾನಗಲ್ಲ: ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ದೊಡ್ಡ ಪ್ರಮಾಣದ ಆರ್ಥಿಕ ನೆರವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತಿರುವುದು ಕರ್ನಾಟಕ ಸರ್ಕಾರದ ಹೆಗ್ಗಳಿಕೆ. ಗ್ಯಾರಂಟಿ ಯೋಜನೆಗಳು ಬಡವರ ಬದುಕಿನಲ್ಲಿ ಭರವಸೆ, ಆತ್ಮವಿಶ್ವಾಸ ಮೂಡಿಸಿ ಆರ್ಥಿಕ ಶಕ್ತಿ ತುಂಬಿವೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಗೆ ಒಂದು ವರ್ಷದ ಸಂಭ್ರಮದ ಹಿನ್ನೆಲೆ ಆಯೋಜಿಸಿದ್ದ ಅನ್ನಭಾಗ್ಯ ಯೋಜನೆಗೆ ಶ್ರಮಿಸುತ್ತಿರುವ ಹಮಾಲಿ ಕಾರ್ಮಿಕರಿಗೆ ಬಟ್ಟೆ, ಜರ್ಕಿನ್ ವಿತರಣೆ ಹಾಗೂ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ತಿಂಗಳು ಪಂಚ ಗ್ಯಾರಂಟಿಗಳ ಮೂಲಕ ಪ್ರತಿಯೊಂದು ಕುಟುಂಬಗಳು ಕನಿಷ್ಠ ₹4 ಸಾವಿರ ನೆರವು ಪಡೆಯುತ್ತಿವೆ. ಇದುವರೆಗೆ ತಾಲೂಕಿಗೆ ಗ್ಯಾರಂಟಿ ಯೋಜನೆಗಳ ಮೂಲಕ ₹500 ಕೋಟಿ ನೆರವು ಲಭಿಸಿದೆ. ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಜಿಲ್ಲೆಯಲ್ಲಿ ಹಾನಗಲ್ಲ ತಾಲೂಕು ಮುಂಚೂಣಿಯಲ್ಲಿದ್ದು, 65 ಸಾವಿರಕ್ಕೂ ಹೆಚ್ಚು ಕುಟುಂಬಗಳ ಫಲ ಪಡೆಯುತ್ತಿವೆ ಎಂದರು.ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಅರ್ಹರನ್ನು ಗುರುತಿಸಿ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಮುಟ್ಟಿಸುವಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಕಾಳಜಿ ವಹಿಸಿದೆ. ಸಮಿತಿಯ ಪ್ರಯತ್ನದ ಫಲವಾಗಿ ಹಾನಗಲ್ಲ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ತಾಪಂ ಮಾಜಿ ಅಧ್ಯಕ್ಷ ಎಸ್.ಬಿ. ಪೂಜಾರ, ಇಒ ಪರಶುರಾಮ ಪೂಜಾರ, ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಮುಖಂಡರಾದ ಈರಣ್ಣ ಬೈಲವಾಳ, ಬಸನಗೌಡ ಪಾಟೀಲ, ಮಮತಾ ಆರೆಗೊಪ್ಪ, ಸುಮಾ ಸುಣಗಾರ, ರಫೀಕ್ ಉಪ್ಪುಣಸಿ, ಲಿಂಗರಾಜ ಮಡಿವಾಳರ, ಪದ್ಮಾ ಬೇದ್ರೆ, ಇರ್ಫಾನ್ ಮಿಠಾಯಿಗಾರ, ರಾಜೂ ಗಾಡಿಗೇರ, ಪ್ರವೀಣ ಹಿರೇಮಠ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಇದ್ದರು.