ಗದಗ: ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗದಗ ತಾಲೂಕು ಅಗ್ರಸ್ಥಾನ ಪಡೆದಿದ್ದರೂ ಯುವನಿಧಿ ಯೋಜನೆಯ ಪ್ರಗತಿ ಇನ್ನೂ ಹೆಚ್ಚಿಸಬೇಕಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಜನೆಯ ಶೇ. 100ರಷ್ಟು ಪ್ರಗತಿ ಸಾಧನೆಗೆ ಎಲ್ಲ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರ ಸಹಕಾರ ಅತ್ಯಗತ್ಯ. ಯೋಜನೆಯ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು ಎಂದರು.ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಎಲ್ಲರ ಮಾಹಿತಿಯನ್ನು ಸಂಪೂರ್ಣವಾಗಿ ನೀಡಬೇಕು. ಕೇವಲ ಹಣ ಪಾವತಿದಾರರ ಮಾಹಿತಿ ಮಾತ್ರ ಸಾಲದು. ಸಭೆಗೆ ಮುಂಚಿತವಾಗಿ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ, ಪ್ರಗತಿ ಮತ್ತು ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಕೈಗೊಂಡ ಕ್ರಮಗಳ ವಿವರ ಸಭೆಗೆ ತರಬೇಕು. ಉದ್ಯೋಗಾಧಿಕಾರಿಗಳು ಯುವನಿಧಿ ಯೋಜನೆಗೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.ಪಡಿತರ ಕಾರ್ಡ್ ವಿವಾದಕ್ಕೆ ಸ್ಪಷ್ಟೀಕರಣ: ಪಡಿತರ ಚೀಟಿ ರದ್ದು ಮಾಡಲಾಗುತ್ತಿಲ್ಲ. ಆದಾಯ ಅಧಿಕವಿರುವ ಕುಟುಂಬಗಳ ಬಿಪಿಎಲ್ ಚೀಟಿಯನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗುತ್ತಿದೆ. ಈ ವಿಷಯ ಕಾರ್ಡ್‌ದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದರು.ಪಾರದರ್ಶಕತೆ ಮತ್ತು ಜವಾಬ್ದಾರಿ: ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲೀಕರಿಸುವ ಉದ್ದೇಶ ಹೊಂದಿವೆ. ಅರ್ಹ ಫಲಾನುಭವಿಗಳು ಸೌಲಭ್ಯ ಪಡೆಯುವಲ್ಲಿ ವಿಳಂಬ ಆಗಬಾರದು ಎಂದರು.
ಈ ವೇಳೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ಸದಸ್ಯರಾದ ಈರಣ್ಣ ಹುನಸಿಕಟ್ಟಿ, ಶರೀಫ ಬೆಳೆಯಲಿ, ದಯಾನಂದ ಪವಾರ, ಶಂಭು ಕಾಳೆ, ಸಾವಿತ್ರಿ ಹೂಗಾರ, ಸಂಗು ಕೆರಕಲಕಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿಕಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಬಾರಕೇರ ಹಾಗೂ ಅಧಿಕಾರಿಗಳು ಇದ್ದರು.